ADVERTISEMENT

ವಿಭೂತಿಪುರ ಕೆರೆ ‘ವಿಕಾಸ’ಕ್ಕೆ ನಡಿಗೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2017, 20:12 IST
Last Updated 23 ಏಪ್ರಿಲ್ 2017, 20:12 IST
ಕೆರೆ ಸಂರಕ್ಷಣೆಗಾಗಿ ಜಾಗೃತಿ ಓಟದಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು
ಕೆರೆ ಸಂರಕ್ಷಣೆಗಾಗಿ ಜಾಗೃತಿ ಓಟದಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು   

ಬೆಂಗಳೂರು: ಅಲ್ಲಲ್ಲಿ ಕಟ್ಟಡ ತ್ಯಾಜ್ಯದ ರಾಶಿ, ಪ್ಲಾಸ್ಟಿಕ್‌ ಕಸ,  ಕೆರೆಗೆ ಸೇರುತ್ತಿರುವ ತ್ಯಾಜ್ಯ ನೀರು. ನಗರದ ವಿಭೂತಿಪುರ ಕೆರೆಯ ದುಸ್ಥಿತಿ ಇದು.

ಕೆರೆಯನ್ನು ಸಂರಕ್ಷಿಸಲು ವಿಭೂತಿಪುರ ಕೆರೆ ಅಭಿವೃದ್ಧಿ ಮತ್ತು ಸಂರಕ್ಷಣಾ ಸಮಿತಿ(ವಿಕಾಸ್‌) ಭಾನುವಾರ 5 ಕಿ.ಮೀ. ಜಾಗೃತಿ ಓಟ ಆಯೋಜಿಸಿತ್ತು. ಇದರಲ್ಲಿ ಎಲ್‌ಬಿಎಸ್‌ ನಗರ, ವಿಜ್ಞಾನ ನಗರ, ವಿಭೂತಿಪುರ, ಬಸವನಗರ ಹಾಗೂ ಅಣ್ಣಸಂದ್ರಪಾಳ್ಯದ 300ಕ್ಕೂ ಹೆಚ್ಚು ನಿವಾಸಿಗಳು ಭಾಗವಹಿಸಿದ್ದರು.

‘ಜಾಗೃತಿ ಜಾಥಾದಲ್ಲಿ ಸಂಗ್ರಹಿಸಿದ ದೇಣಿಗೆಯನ್ನು ಕೆರೆಯ ಅಭಿವೃದ್ಧಿಗಾಗಿ ವಿನಿಯೋಗಿಸುತ್ತೇವೆ. ಕೆರೆಗೆ ಬೇಲಿ ನಿರ್ಮಿಸುತ್ತೇವೆ. ಕಟ್ಟಡ ತ್ಯಾಜ್ಯ ಮತ್ತು ಕೊಳಚೆ ನೀರು ಕೆರೆಯನ್ನು ಸೇರದಂತೆ ತಡೆಯಲು ಕ್ರಮ ಕೈಗೊಳ್ಳುತ್ತೇವೆ’ ಎಂದು ‘ವಿಕಾಸ್‌’ ಸದಸ್ಯ ಎಸ್‌.ವಿಶ್ವನಾಥ್‌ ತಿಳಿಸಿದರು.

‘ಕೆರೆಗೆ ಸೇರುವ ಕೊಳಚೆ ನೀರನ್ನು ಶುದ್ಧೀಕರಿಸಲು ಪಾಲಿಕೆ ವತಿಯಿಂದ ತ್ಯಾಜ್ಯ ನೀರು ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕು’ ಎಂದು ಅವರು ಒತ್ತಾಯಿಸಿದರು.

‘ಕೆರೆಯಲ್ಲಿ  ಈ ಹಿಂದೆ ವಿವಿಧ ಪ್ರಭೇದಗಳ ಪಕ್ಷಿಗಳು  ಕಾಣಿಸಿಕೊಳ್ಳುತ್ತಿದ್ದವು. ಇಂದು  ನೀರು  ಕಲುಷಿತಗೊಂಡಿದೆ. ಹಾಗಾಗಿ ಇಲ್ಲಿ ಹಕ್ಕಿಗಳೂ ಕಾಣಿಸಿಕೊಳ್ಳುತ್ತಿಲ್ಲ.’

‘ಕೆರೆಯನ್ನು ಅಭಿವೃದ್ಧಿ ಪಡಿಸುವುದಾಗಿ ಅಧಿಕಾರಿಗಳು ಈ ಹಿಂದೆ ಅನೇಕ ಸಲ ಸ್ಥಳ ಪರಿಶೀಲನೆ ನಡೆಸಿದ್ದರು. ಆದರೂ, ಈವರೆಗೂ ಯಾವುದೇ ಕೆಲಸಗಳು ಆಗಿಲ್ಲ’ ಎಂದು ಸ್ಥಳೀಯ ನಿವಾಸಿ ಮಲ್ಲಿಕಾರ್ಜುನ್‌ ಹಂಜಿ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬೇಡಿಕೆಗಳು
* ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯಬೇಕು.
* ಕಟ್ಟಡ ತ್ಯಾಜ್ಯ ಸುರಿವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
*ಕೆರೆಯ ಸುತ್ತ ಬೇಲಿ ನಿರ್ಮಿಸಬೇಕು.
*ವಿಹಾರ ನಡೆಸುವವರಿಗೆ ಭದ್ರತೆಗೆ ವ್ಯವಸ್ಥೆ ಕಲ್ಪಿಸಬೇಕು.

*
ಮಳೆಗಾಲ ಆರಂಭವಾಗುವ ಮುನ್ನ ಕೆರೆಯಲ್ಲಿನ ಕಳೆ ಸಸ್ಯಗಳನ್ನು ತೆಗೆಯುತ್ತೇವೆ. ಏರಿಯಲ್ಲಿ ನಡಿಗೆ ಪಥ ನಿರ್ಮಿಸಿ ವಿದ್ಯುತ್‌ ದೀಪಗಳನ್ನು ಅಳವಡಿಸುತ್ತೇವೆ.
–ಎಸ್‌.ಜಿ.ನಾಗರಾಜ್‌, ಪಾಲಿಕೆ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.