ADVERTISEMENT

ವಿಮಾನನಿಲ್ದಾಣ ರಸ್ತೆ ಎರಡೂ ಕಡೆ ಶುಲ್ಕ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ಬೆಂಗಳೂರು: ಬಳ್ಳಾರಿ ರಸ್ತೆಯ ಮೂಲಕ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದ ವಾಹನಗಳಿಗೆ ಇಷ್ಟು ದಿನ ಉಚಿತ ಪ್ರವೇಶವಿತ್ತು. ಅಲ್ಲಿಂದ ವಾಪಸ್‌ ಬರುವಾಗ ಮಾತ್ರ ಈ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಬುಧವಾರದಿಂದ ವಿಮಾನ ನಿಲ್ದಾಣದ ಕಡೆಗೆ ಹೋಗುವಾಗಲೂ (ಟೂ ವೇ) ಶುಲ್ಕ ಪಾವತಿಸಬೇಕಿದೆ.

ಈ ರಸ್ತೆಯಲ್ಲಿ ಶುಲ್ಕ ಸಂಗ್ರಹಿಸಲು ಭದ್ರತೆ ಒದಗಿಸಬೇಕು ಎಂದು, ನವಯುಗ ಸಂಸ್ಥೆ ಹೈಕೋರ್ಟ್‌ ಮೆಟ್ಟಿಲೇರಿಸಿತ್ತು. ಮನವಿ ಪುರಸ್ಕರಿಸಿದ ಹೈಕೋರ್ಟ್‌, ಬೆಂಗಳೂರು-ಹೈದರಾಬಾದ್‌ ಮಾರ್ಗದ ರಾಷ್ಟ್ರೀಯ ಹೆದ್ದಾರಿ –7ರಲ್ಲಿರುವ (ಬಳ್ಳಾರಿ ರಸ್ತೆ) ದೇವನಹಳ್ಳಿ ಟೋಲ್‌ಗೇಟ್‌ಗೆ ತಕ್ಷಣವೇ ಸೂಕ್ತ ಪೊಲೀಸ್ ರಕ್ಷಣೆ ಒದಗಿಸುವಂತೆ ನಗರ ಪೊಲೀಸ್‌ ಕಮಿಷನರ್‌ಗೆ ಸೋಮವಾರ ಆದೇಶಿಸಿತ್ತು. ಈ ಆದೇಶದ ಹಿನ್ನೆಲೆಯಲ್ಲಿ ಪೊಲೀಸರು ಟೋಲ್‌ಗಳಿಗೆ ಭದ್ರತೆ ಒದಗಿಸಿದ್ದಾರೆ.

‘ಪೊಲೀಸ್‌ ಭದ್ರತೆಯಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಕೇಂದ್ರಗಳಿವೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್‌ ಕೇಂದ್ರಗಳನ್ನು ಆರಂಭಿಸಲಾಗಿದೆ’ ಎಂದು ನವಯುವ ದೇವನಹಳ್ಳಿ ಶುಲ್ಕ ವಸೂಲಾತಿ ಕೇಂದ್ರದ ಯೋಜನಾ ನಿರ್ದೇಶಕ ಶ್ರೀನಿವಾಸ್‌ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.