ADVERTISEMENT

ವಿವಿಧ ಸಂಘಟನೆಗಳ ಪ್ರತಿಭಟನೆ

ಸುಬೋಧ್ ವರ್ಗಾವಣೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 26 ಜೂನ್ 2016, 19:58 IST
Last Updated 26 ಜೂನ್ 2016, 19:58 IST
ಸುಬೋಧ್ ಯಾದವ್ ವರ್ಗಾವಣೆ ಖಂಡಿಸಿ ವಿವಿಧ ನಾಗರಿಕ ಸಂಘಟನೆಗಳ ಸದಸ್ಯರು ನಗರದ ಪುರಭವನದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು.  -ಪ್ರಜಾವಾಣಿ ಚಿತ್ರ
ಸುಬೋಧ್ ಯಾದವ್ ವರ್ಗಾವಣೆ ಖಂಡಿಸಿ ವಿವಿಧ ನಾಗರಿಕ ಸಂಘಟನೆಗಳ ಸದಸ್ಯರು ನಗರದ ಪುರಭವನದ ಎದುರು ಭಾನುವಾರ ಪ್ರತಿಭಟನೆ ನಡೆಸಿದರು. -ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಿಬಿಎಂಪಿ ವಿಶೇಷ ಆಯುಕ್ತರಾಗಿದ್ದ (ಘನ ತ್ಯಾಜ್ಯ ನಿರ್ವಹಣೆ) ಐಎಎಸ್‌ ಅಧಿಕಾರಿ ಸುಬೋಧ್ ಯಾದವ್ ವರ್ಗಾವಣೆ ವಿರೋಧಿಸಿ ಹಸಿರು ಮಿತ್ರ, ಬೆಂಗಳೂರು ಇಕೊ ಟೀಮ್ ಸೇರಿದಂತೆ ವಿವಿಧ ಸಂಘಟನೆಗಳ ಸದಸ್ಯರು ಭಾನುವಾರ ಪ್ರತಿಭಟನೆ ನಡೆಸಿದರು.

ಎಚ್‌ಎಸ್‌ಆರ್ ಬಡಾವಣೆಯ ಬಿಡಿಎ ಕಾಂಪ್ಲೆಕ್ಸ್ ಬಳಿ ಬೆಳಿಗ್ಗೆ ಹಸಿರು ಮಿತ್ರ ಸಂಘಟನೆ ಸದಸ್ಯರು, ಬಡಾವಣೆ ನಿವಾಸಿಗಳು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದರು. ಸುಬೋಧ್ ಅವರು ಕಸ ನಿರ್ವಹಣೆಯನ್ನು ವಿಕೇಂದ್ರೀಕರಣ ಮಾಡುತ್ತಿದ್ದ ಅವರನ್ನು ಕಸ ಗುತ್ತಿಗೆದಾರರು ಹಾಗೂ ಕಾರ್ಪೊರೇಟರ್‌ ಲಾಬಿ ವರ್ಗಾವಣೆ ಮಾಡಿಸಿದೆ ಎಂದು ಆರೋಪಿಸಿದರು.

ಇನ್ನು, ನಗರದ ಪುರಭವನದ ಎದುರು ಬೆಂಗಳೂರು ಇಕೊ ಟೀಮ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳು  ಸಂಜೆ ಪ್ರತಿಭಟನೆ ನಡೆಸಿದವು. ‘ಫೈರ್‌ ದ ಕರಪ್ಟ್‌, ನಾಟ್‌ ದ ಆನೆಸ್ಟಿ’, ‘ಮೇಕ್ ಆನೆಸ್ಟಿ ಪವರ್‌ಫುಲ್‌’, ‘ವೀ ವಾಂಟ್‌ ಸುಬೋಧ್ ಬ್ಯಾಕ್‌’ ಎಂಬ ಭಿತ್ತಿ ಪತ್ರಗಳನ್ನು ಹಿಡಿದ ಕಾರ್ಯಕರ್ತರು ಕಸದ ಮಾಫಿಯಾ ವಿರುದ್ಧ ಘೋಷಣೆ ಕೂಗಿದರು.

ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ ಸ್ಥಾನಕ್ಕೆ ವರ್ಗವಾಗಿರುವ ಸುಬೋಧ್ ಅವರನ್ನು ಮರಳಿ ಬಿಬಿಎಂಪಿಗೆ ನಿಯೋಜಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಹಸಿರು ಮಿತ್ರ ಸಂಘಟನೆಯ ಆರತಿ, ‘ಕಸ ಸಮಸ್ಯೆ ನಿರ್ವಹಣೆ ಕುರಿತು ಸುಬೋಧ್ ಅವರಲ್ಲಿ ದೂರದೃಷ್ಟಿ ಇತ್ತು. ಇದೀಗ ಕಸದ ಲಾಬಿಗೆ ಮಣಿದು ಸರ್ಕಾರ ಅವರನ್ನು ವರ್ಗ ಮಾಡಿದೆ’ ಎಂದು ದೂರಿದರು.

‘ಸರ್ಕಾರಿ ಅಧಿಕಾರಿಗಳು ಜನರನ್ನು ಮಾತನಾಡಿಸುವುದೇ ಕಷ್ಟ. ಆದರೆ, ಅವರು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದರು. ಜನರು ನೀಡುವ ಸಲಹೆಗಳನ್ನು ಪರಿಗಣಿಸಿ, ಅನುಷ್ಠಾನಕ್ಕೆ ತರುತ್ತಿದ್ದರು’ ಎಂದು ತಿಳಿಸಿದರು.

ಆನ್‌ಲೈನ್‌ ಅಭಿಯಾನ: ಸುಬೋಧ್  ವರ್ಗಾವಣೆ ವಿರೋಧಿಸಿ, ಬೆಂಗಳೂರು ಇಕೊ ಟೀಮ್‌ ಆರಂಭಿಸಿರುವ ಅಭಿಯಾನದಲ್ಲಿ ಶನಿವಾರ ರಾತ್ರಿ 10 ಗಂಟೆಯ ವರೆಗೂ 2480ಕ್ಕೂ ಅಧಿಕ ಜನರು ಸಹಿ ಮಾಡಿದ್ದಾರೆ.

ಸಿ.ಎಂಗೆ ಮನವಿ ಪತ್ರ: ಸುಬೋಧ್  ಯಾದವ್ ವರ್ಗಾವಣೆಗೆ ತಡೆಯುವಂತೆ ಕೋರಿ ಸೋಮವಾರ ಮಧ್ಯಾಹ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಪತ್ರ ನೀಡಲು ಸಂಘಟನೆಗಳು ಚಿಂತನೆ ನಡೆಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.