ADVERTISEMENT

ವೆಬ್‌ಸೈಟ್‌ ಮೊದಲೇ ಇತ್ತು

ಕರ್ನಾಟಕ ಲೇಖಕಿಯರ ಸಂಘ: ಉಷಾ ಪಿ. ರೈ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2014, 19:30 IST
Last Updated 6 ಡಿಸೆಂಬರ್ 2014, 19:30 IST

ಬೆಂಗಳೂರು: ‘ಕರ್ನಾಟಕ ಲೇಖಕಿಯರ ಸಂಘದ ಗ್ರಂಥಾಲಯ ಮತ್ತು ವೆಬ್‌­ಸೈಟ್‌ ಡಾ. ವಸುಂಧರಾ ಭೂಪತಿ ಅವರ ಕಾಲದಲ್ಲಿ ಆಗಿದ್ದಲ್ಲ. ನನ್ನ ಅಧಿಕಾರ­ವಧಿಯಲ್ಲಿ (2004ರಲ್ಲಿ) ವೆಬ್‌ಸೈಟ್‌ ಆರಂಭಿಸಲಾಗಿತ್ತು. ಗ್ರಂಥಾ­ಲಯವೂ ಈ ಹಿಂದೆಯೇ ಇತ್ತು. 2001ರಲ್ಲಿ ಅದನ್ನು ನವೀಕರಣ ಮಾಡಲಾಗಿತ್ತು’ ಎಂದು ಸಂಘದ ಮಾಜಿ ಅಧ್ಯಕ್ಷೆ ಉಷಾ ಪಿ. ರೈ ಅವರು ಸ್ಪಷ್ಟಪಡಿಸಿದ್ದಾರೆ.

‘ಪ್ರಜಾವಾಣಿ’ಯ ಶನಿವಾರದ ಸಂಚಿಕೆಯಲ್ಲಿ  ‘ಲೇಖಕಿಯರ ಸಂಘಕ್ಕೆ ನಾಳೆ ಚುನಾವಣೆ’ ತಲೆಬರಹದ ಅಡಿಯಲ್ಲಿ ಪ್ರಕಟವಾಗಿರುವ ಸುದ್ದಿಗೆ ಪ್ರತಿಕ್ರಿಯಿಸಿರುವ ಅವರು, ‘ಹಾಗಿದ್ದರೆ ಹಿಂದಿನ ಅಧ್ಯಕ್ಷೆಯರು ಯಾವ ಕೆಲಸವನ್ನೂ ಮಾಡಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಆದರೆ, ‘ವೆಬ್‌ಸೈಟ್‌ ಮತ್ತು ಗ್ರಂಥಾಲಯ­ವನ್ನು ನಾನು ಸ್ಥಾಪಿಸಿದ್ದಾಗಿ ಹೇಳಿಲ್ಲ. ಅವುಗಳನ್ನು ವ್ಯವಸ್ಥಿತಗೊಳಿಸಿ­ದ್ದಾಗಿ ಮಾತ್ರ ಹೇಳಿದ್ದೇನೆ’ ಎಂದು ಡಾ.ವಸುಂಧರಾ ಹೇಳಿದ್ದಾರೆ.

ಇಂದು ಮತದಾನ: ಲೇಖಕಿಯರ ಸಂಘದ ಅಧ್ಯಕ್ಷತೆಗೆ ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3ರವರೆಗೆ ಮತದಾನ ನಡೆಯಲಿದೆ.  4.30ರ ಸುಮಾರಿಗೆ ಫಲಿತಾಂಶ ಹೊರ ಬೀಳಲಿದೆ.

ಇಂದಿರಾಗೆ ವಿಶ್ವಾಸ: ‘ಸಂಘದ ಕಾರ್ಯದರ್ಶಿ ಮತ್ತು ಉಪಾಧ್ಯಕ್ಷೆಯಾಗಿ 10 ವರ್ಷಗಳ ಅನುಭವವಿದೆ. ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಗೆಲುವು ನನಗೆ ಸಿಗುವ ವಿಶ್ವಾಸವಿದೆ’ ಎಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಇಂದಿರಾ ಶಿವಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಾಜಸೇವೆಯ ರಕ್ಷೆ: ‘ಚುನಾವಣೆಗೆ ಉತ್ತಮ ತಯಾರಿ ನಡೆಸಿದ್ದೇನೆ. ಸದಸ್ಯರ ಒಲವು ನನ್ನ ಪರವಾಗಿದೆ. ಮೂರು ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತಿದ್ದೇನೆ. ನನ್ನದೇ ಹೆಸರಿನಲ್ಲಿ ಟ್ರಸ್ಟ್‌ ಮಾಡಿಕೊಂಡು ಸಾಕಷ್ಟು ಸಮಾಜ ಸೇವೆಯನ್ನೂ ಮಾಡಿದ್ದೇನೆ’ ಎಂದು ಮತ್ತೊಬ್ಬ ಅಭ್ಯರ್ಥಿ ಪ್ರೊ. ಬಿ. ನಾರಾಯಣಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.