ADVERTISEMENT

ವೈದ್ಯಕೀಯ ಸೀಟು ಕೊಡಿಸುವುದಾಗಿ ಉದ್ಯಮಿಗೆ ₹ 20 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 20:39 IST
Last Updated 22 ಮಾರ್ಚ್ 2018, 20:39 IST

ಬೆಂಗಳೂರು: ತಮ್ಮ ಮಗಳಿಗೆ ಮಂಗಳೂರಿನ ಯೆನೆಪೋಯ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಕೊಡಿಸುವುದಾಗಿ ನಂಬಿಸಿ ತಿರುಪತಿಯ ಉದ್ಯಮಿಯೊಬ್ಬರಿಗೆ ₹ 20 ಲಕ್ಷ ವಂಚಿಸಿರುವ ಆರೋಪದಡಿ ವಿಜಯ್ ಎಸ್‌.ರಾಮ್ ಎಂಬುವರ ವಿರುದ್ಧ ಅಶೋಕನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಈ ಸಂಬಂಧ ಉದ್ಯಮಿ ದಾಮೋದರ್ ರಾವ್ ದೂರು ಕೊಟ್ಟಿದ್ದಾರೆ. ಆರೋಪಿ ವಿಜಯ್ ತಲೆಮರೆಸಿಕೊಂಡಿದ್ದು, ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಶೋಧ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.

‘ಮಗಳು ನೀಟ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆಯದ ಕಾರಣ, ಆಕೆಗೆ ಚರ್ಮಶಾಸ್ತ್ರ ಕೋರ್ಸ್‌ಗೆ ಸೀಟು ಸಿಗಲಿಲ್ಲ. ಈ ವಿಚಾರವನ್ನು ಬೆಂಗಳೂರಿನ ಸ್ನೇಹಿತ ಶ್ರೀನಿವಾಸ್‌ ರಾವ್‌ಗೆ ತಿಳಿಸಿದಾಗ, ತನಗೆ ಗೊತ್ತಿರುವ ವಿಜಯ್ ಎಸ್‌.ರಾವ್ ಸೀಟು ಕೊಡಿಸುವುದಾಗಿ ಹೇಳಿದ್ದ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

ADVERTISEMENT

‘ಗೆಳೆಯನ ಸೂಚನೆಯಂತೆ 2017ರ ಮೇ 24ರಂದು ವಿಜಯ್‌ನನ್ನು ಭೇಟಿಯಾಗಿದ್ದೆ. ಆಗ ಆತ, ‘ನಾನು ಮಂಗಳೂರಿನ ಯೆನೆಪೋಯ ಕಾಲೇಜು ಆಡಳಿತ ಮಂಡಳಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ಮ್ಯಾನೇಜ್‌ಮೆಂಟ್ ಕೋಟಾದಡಿ ಸೀಟು ಬೇಕೆಂದರೆ ₹ 40 ಲಕ್ಷ ಖರ್ಚಾಗುತ್ತದೆ. ನೀವು ಶ್ರೀನಿವಾಸ್ ಸ್ನೇಹಿತ ಎಂಬ ಕಾರಣಕ್ಕೆ ₹ 20 ಲಕ್ಷಕ್ಕೆ ಸೀಟು ಕೊಡಿಸುತ್ತೇನೆ’ ಎಂದು ಭರವಸೆ ನೀಡಿದ್ದ. ನಂತರ ಆತ ನೀಡಿದ್ದ ಎಸ್‌ಬಿಐ, ಲಕ್ಷ್ಮಿ ವಿಲಾಸ್ ಹಾಗೂ ಕಾರ್ಪೊರೇಷನ್ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಿದ್ದೆ.’

‘ತಿಂಗಳ ಬಳಿಕ ಕಾಲೇಜು ವೆಬ್‌ಸೈಟ್ ಪರಿಶೀಲಿಸಿದಾಗ, ಪ್ರವೇಶ ಪಡೆದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನನ್ನ ಮಗಳ ಹೆಸರು ಇರಲಿಲ್ಲ. ಆ ಬಗ್ಗೆ ವಿಚಾರಿಸಲು ವಿಜಯ್‌ಗೆ ಕರೆ ಮಾಡಿದರೆ, ಆತ ತನಗೇನೂ ಸಂಬಂಧ ಇಲ್ಲದವನಂತೆ ಮಾತನಾಡಿದ್ದ. ಹಣ ವಾಪಸ್ ಕೊಡಿಸುವುದಾಗಿ ಗೆಳೆಯ ಹೇಳಿದ್ದರಿಂದ ಇಷ್ಟು ದಿನ ಸುಮ್ಮನಿದ್ದೆ. ಆದರೀಗ, ಆರೋಪಿ ಮೊಬೈಲ್ ಸ್ವಿಚ್ಡ್‌ಆಫ್ ಮಾಡಿಕೊಂಡು ಓಡಾಡುತ್ತಿದ್ದಾನೆ. ಅವನನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಜರುಗಿಸಬೇಕು’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.