ADVERTISEMENT

ವೈದ್ಯರಿಗೆ ಬೆದರಿಕೆ: ಆರೋಪಿ ಸೆರೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2015, 20:00 IST
Last Updated 17 ಏಪ್ರಿಲ್ 2015, 20:00 IST

ಬೆಂಗಳೂರು: ವೈದ್ಯರೊಬ್ಬರು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಹಣಕ್ಕಾಗಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಸುದ್ದಿ ವಾಹಿನಿಯೊಂದರ ವಿಡಿಯೊ ಎಡಿಟರ್‌ ಕೆ. ಹೇಮಂತ್‌ ಕುಮಾರ್ (29) ಎಂಬಾತನನ್ನು ಬಂಧಿಸಲಾಗಿದೆ. ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹೇಮಂತ್‌ ಕುಮಾರ್‌, ಶ್ರೀನಗರ ಸಮೀಪದ ಬೃಂದಾವನ ನಗರದಲ್ಲಿ ವಾಸವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ಸಂಬಂಧ ವೈದ್ಯರೊಬ್ಬರು ಅ.4ರಂದು ಮೈಕೊ ಲೇಔಟ್‌ ಠಾಣೆಗೆ ದೂರು ನೀಡಿದ್ದರು. ಆ ದೂರಿನ ಅನ್ವಯ ಆರೋಪಿ ಹೇಮಂತ್‌ ಕುಮಾರ್‌ನನ್ನು ಕಾರ್ಪೊರೇಷನ್‌ ವೃತ್ತದ ಬಳಿ ಗುರುವಾರ (ಏಪ್ರಿಲ್‌ 16) ಬಂಧಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆ ನಂತರ ಹೇಮಂತ್‌ಕುಮಾರ್‌ ತಲೆಮರೆಸಿಕೊಂಡಿದ್ದ. ಪ್ರಕರಣದ ಉಳಿದ ಆರೋಪಿಗಳನ್ನು ಈಗಾಗಲೇ ಬಂಧಿಸ­ಲಾಗಿದೆ. ಹೇಮಂತ್‌ ಕುಮಾರ್‌­, ಪದೇ ಪದೇ ತನ್ನ ಮೊಬೈಲ್‌ ಸಂಖ್ಯೆಯನ್ನು ಬದಲಾಯಿಸುತ್ತಿದ್ದ. ಹೀಗಾಗಿ ಆತನನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು. ಗುರುವಾರ ಆತ ನಗರಕ್ಕೆ ಬರುತ್ತಿರುವ ಬಗ್ಗೆ ಆತನ ಕುಟುಂಬ ಸದಸ್ಯರು ನೀಡಿದ ಮಾಹಿತಿ ಆಧರಿಸಿ ಬಂಧಿಸಲಾಯಿತು ಎಂದು ಆಧಿಕಾರಿಗಳು ಹೇಳಿದ್ದಾರೆ.

ದೂರುದಾರ ವೈದ್ಯ ಹಾಗೂ ನಯನಾ­ಕೃಷ್ಣ ಮೊದಲಿನಿಂದಲೂ ಸ್ನೇಹಿತರು. ನಯನಾಕೃಷ್ಣ, ತನ್ನ ಗೆಳತಿ ಸಂಜನಾಳನ್ನು ವೈದ್ಯರಿಗೆ ಪರಿಚಯ ಮಾಡಿಸಿದ್ದಳು. ದೂರುದಾರರು, 2014ರ ಜೂ.4ರಂದು ಸಂಜನಾ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಈ ವೇಳೆ  ಹೇಮಂತ್‌ಕುಮಾರ್‌, ನಯನಾ­ಕೃಷ್ಣ ಜೊತೆಗೆ ಕ್ಯಾಮೆರಾದಲ್ಲಿ ಆ ದೃಶ್ಯ­ಗಳನ್ನು  ಚಿತ್ರೀಕರಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ನಂತರ ಹಣ ನೀಡದಿದ್ದರೆ ಆ ದೃಶ್ಯಗಳನ್ನು ಮಾಧ್ಯಮಗಳಿಗೆ ನೀಡುವು­ದಾಗಿ  ವೈದ್ಯರಿಗೆ ಬೆದರಿಕೆ ಹಾಕಿದ್ದಾರೆ. ಆರೋಪಿಗಳಾದ  ಹೇಮಂತ್‌ ಕುಮಾರ್‌, ನಯನಾ ಕೃಷ್ಣ, ಆಕೆಯ ಸ್ನೇಹಿತೆ ಸಂಜನಾ, ಕೆಂಪೇಗೌಡ ನಗರ ಠಾಣೆಯ ಕಾನ್‌­ಸ್ಟೆಬಲ್‌ ಮಲ್ಲೇಶ್‌,  ಸುದ್ದಿ ವಾಹಿನಿ­ಯೊಂದಕ್ಕೆ ಕ್ಯಾಬ್‌ಗಳನ್ನು ಪೂರೈ­ಸುವ ಸುನೀಲ್, ಪ್ರೇಯಸಿ ಕುಟುಂಬ­ದಿಂದ ದೃಷ್ಟಿ ಕಳೆದುಕೊಂಡಿದ್ದ ರಘು ಸಿನಿಮಾಗಳಲ್ಲಿ ಅವಕಾಶ ಕೊಡಿಸುವುದಾಗಿ ನಂಬಿಸಿ ಯುವತಿಯರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. 

ನಂತರ ಆರೋಪಿಗಳು, ಪರಿಚಯ ಮಾಡಿಕೊಂಡಿದ್ದ ಯುವತಿಯರನ್ನು ಪ್ರತಿಷ್ಠಿತ ವ್ಯಕ್ತಿಗಳಿಗೆ ಪರಿಚಯ ಮಾಡಿ­ಕೊಡುತ್ತಿದ್ದರು.  ಬಳಿಕ ಅವರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡಿ ಆ ದೃಶ್ಯಗಳನ್ನು ಚಿತ್ರೀಕರಿಸಿ­ಕೊಳ್ಳುತ್ತಿದ್ದರು. 
ಹಣ ನೀಡದಿದ್ದರೆ ಆ ದೃಶ್ಯಗಳನ್ನು ಮಾಧ್ಯಮಗಳಿಗೆ ನೀಡು­ವು­ದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.