ADVERTISEMENT

ವೈರ್ ಕದ್ದನೆಂದು ಶಾಕ್ ಕೊಟ್ಟು ಕೊಂದರು!

ಕುಂದಲಹಳ್ಳಿಯಲ್ಲಿ ಅಮಾನವೀಯ ಘಟನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 20:23 IST
Last Updated 22 ಆಗಸ್ಟ್ 2017, 20:23 IST
ವೈರ್ ಕದ್ದನೆಂದು ಶಾಕ್ ಕೊಟ್ಟು ಕೊಂದರು!
ವೈರ್ ಕದ್ದನೆಂದು ಶಾಕ್ ಕೊಟ್ಟು ಕೊಂದರು!   

ಬೆಂಗಳೂರು: ಕೇಬಲ್‌ ಕದ್ದರೆಂದು ಮೂವರು ಚಿಂದಿ ಆಯುವ ಹುಡಗರನ್ನು ಪಂಪ್‌ಹೌಸ್‌ನಲ್ಲಿ ಕೂಡಿ ಹಾಕಿ ಒಂಬತ್ತು ತಾಸು ಚಿತ್ರಹಿಂಸೆ ನೀಡಿದ ಆರೋಪಿಗಳು, ಕೊನೆಗೆ ಅವರ ಕೈ–ಕಾಲು ಕಟ್ಟಿ ವಿದ್ಯುತ್ ಶಾಕ್‌ ಕೊಟ್ಟು ಪರಾರಿಯಾಗಿದ್ದಾರೆ.

ಈ ಅಮಾನವೀಯ ಕೃತ್ಯದಲ್ಲಿ ಪಶ್ಚಿಮ ಬಂಗಾಳದ ಬಶೀರ್ ಶೇಖ್ (20) ಎಂಬುವರು ಬಲಿಯಾಗಿದ್ದು, ಗಾಯಗೊಂಡಿರುವ ಅಜ್ಮಲ್ ಶೇಖ್ (21) ಹಾಗೂ ಹಫೀಜ್ ವುಲ್ಲಾ (22) ಅವರು ಮಾರತ್ತಹಳ್ಳಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ಸಂಬಂಧ ಕುಂದಲಹಳ್ಳಿಯ ಶಬರೀಶ್, ಶ್ರೀಕಾಂತ್, ಅರುಣ್, ಪಶ್ಚಿಮ ಬಂಗಾಳದ ಸೈಯದ್ ವುಲ್ಲಾ, ಮುಜಿಬ್‌ವುಲ್ಲಾ ಹಾಗೂ ಮಿಟ್ಟು ಅವರ ವಿರುದ್ಧ ಕೊಲೆ (ಐಪಿಸಿ 302) ಹಾಗೂ ಕೊಲೆ ಯತ್ನ (ಐಪಿಸಿ 307) ಆರೋಪಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಮಾರತ್ತಹಳ್ಳಿ ಪೊಲೀಸರು, ವಿಶೇಷ ತಂಡಗಳನ್ನು ರಚಿಸಿಕೊಂಡು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.

ADVERTISEMENT

ಕೇಬಲ್ ಕದ್ದಿದ್ದು ನಿಜ

ಕೂಲಿ ಅರಸಿ ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದಿದ್ದ ಬಶೀರ್, ಅಜ್ಮಲ್ ಹಾಗೂ ಹಫೀಜ್, ತುರುಬರಹಳ್ಳಿಯ ಲೋಕೇಶ್ ಎಂಬುವರ ಜಮೀನಿನಲ್ಲಿ ತಾತ್ಕಾಲಿಕ ಶೆಡ್ ಹಾಕಿಕೊಂಡು ವಾಸವಾಗಿದ್ದರು. ಗಾರೆ ಕೆಲಸದ ಜತೆಗೆ, ಬಿಡುವಿನ ವೇಳೆಯಲ್ಲಿ ಚಿಂದಿ ಆಯುವುದಕ್ಕೂ ಹೋಗುತ್ತಿದ್ದರು.

ವರ್ತೂರು ಕೆರೆ ನೀರನ್ನು ಟ್ಯಾಂಕರ್‌ಗಳ ಮೂಲಕ ಪೂರೈಸುವ ಶಬರೀಶ್, ಮುನೆಕೊಳಾಲದಲ್ಲಿ ಪಂಪ್‌ಹೌಸ್ ಹೊಂದಿದ್ದಾನೆ. ನೀರು ಮೇಲೆತ್ತುವ ಮೋಟಾರ್‌ಗಳು ಹಾಗೂ ಕೇಬಲ್‌ಗಳನ್ನು ಅಲ್ಲೇ ಇಟ್ಟಿರುತ್ತಾನೆ. ವಾರದ ಹಿಂದೆ ಪಂಪ್‌ಹೌಸ್‌ನಿಂದ ಕೇಬಲ್‌ಗಳು ಕಳವಾಗಿದ್ದವು. ಈ ಮೂವರ ಮೇಲೆ ಅನುಮಾನಗೊಂಡ ಶಬರೀಶ್, ಕೇಬಲ್‌ಗಳ ಬಗ್ಗೆ ವಿಚಾರಿಸಿದ್ದ. ತಮಗೇನು ಗೊತ್ತಿಲ್ಲವೆಂದೇ ಅವರು ಹೇಳಿದ್ದರು.

ಆ ಮೂವರಿಗೂ ಪರಿಚಿತರಾಗಿದ್ದ ಸೈಯದ್ ವುಲ್ಲಾ, ಮುಜಿಬ್‌ವುಲ್ಲಾ ಹಾಗೂ ಮಿಟ್ಟು ಅವರನ್ನು ಸಂಪರ್ಕಿಸಿದ ಶಬರೀಶ್, ‘ಅವರ ಶೆಡ್‌ಗಳನ್ನು ಪರಿಶೀಲಿಸಿ. ಕೇಬಲ್‌ಗಳಿದ್ದರೆ ನನಗೆ ತಿಳಿಸಿ’ ಎಂದು ಹೇಳಿದ್ದ. ಈ ಕೆಲಸಕ್ಕೆ ₹ 300 ಕೊಟ್ಟಿದ್ದ. ಅಂತೆಯೇ ಅವರು ಪರಿಶೀಲಿಸಿದಾಗ, ಹಫೀಜ್‌ ಶೆಡ್‌ನಲ್ಲಿ ಕೇಬಲ್ ಪತ್ತೆಯಾಗಿತ್ತು.

ಇದರಿಂದ ಕುಪಿತಗೊಂಡ ಶಬರೀಶ್, ಸಹಚರರಾದ ಅರುಣ್ ಹಾಗೂ ಶ್ರೀಕಾಂತ್ ಜತೆ ಸೋಮವಾರ ಮಧ್ಯಾಹ್ನ 1 ಗಂಟೆಗೆ ಶೆಡ್‌ ಬಳಿ ಹೋಗಿದ್ದ. ಹಫೀಜ್‌ ಅವರನ್ನು ಎಳೆದುಕೊಂಡು ಮುನೆಕೊಳಾಲಕ್ಕೆ ಬಂದ ಆರೋಪಿಗಳು, ಪಂಪ್‌ಹೌಸ್‌ನಲ್ಲಿ ಕೂಡಿ ಹಾಕಿ ಮನಸೋಇಚ್ಛೆ ಥಳಿಸಿದ್ದರು. ಈ ಸಂದರ್ಭದಲ್ಲಿ ಆತ ಬಶೀರ್ ಹಾಗೂ ಅಜ್ಮಲ್ ಅವರ ಹೆಸರುಗಳನ್ನೂ ಹೇಳಿದ್ದ. ಆ ನಂತರ ಪುನಃ ಶೆಡ್ ಹತ್ತಿರ ತೆರಳಿ, ಅವರನ್ನೂ ಪಂಪ್‌ಹೌಸ್‌ಗೆ ಕರೆದುಕೊಂಡು ಬಂದಿದ್ದರು.

ಒಬ್ಬೊಬ್ಬರಿಗೇ ಶಾಕ್

ಮೂವರನ್ನೂ ವೈರ್‌ನಿಂದ ಕಟ್ಟಿ ರಾತ್ರಿ 10 ಗಂಟೆವರೆಗೂ ಪಂಪ್‌ಹೌಸ್‌ನಲ್ಲಿ ಕೂಡಿಹಾಕಿದ್ದ ಆರೋಪಿಗಳು, ಕೇಬಲ್‌ ಮಡಚಿಕೊಂಡು ಮನಬಂದಂತೆ ಹೊಡೆದಿದ್ದರು. ಅವರ ಚೀರಾಟ ಕೇಳಿ ಪಂಪ್‌ಹೌಸ್ ಬಳಿ ಜಮಾಯಿಸಿದ್ದ ಸ್ಥಳೀಯರು ಕೂಡ ಮೂಕ ಪ್ರೇಕ್ಷಕರಾಗಿದ್ದರು ಎಂದು ಪೊಲೀಸರು ತಿಳಿಸಿದರು.

ಸ್ವಲ್ಪ ಸಮಯದ ನಂತರ ಮೂವರಿಗೂ ವಿದ್ಯುತ್ ಶಾಕ್ ಕೊಟ್ಟಿರುವ ಆರೋಪಿಗಳು, ಬಶೀರ್ ಪ್ರಜ್ಞೆ ಕಳೆದುಕೊಳ್ಳುತ್ತಿದ್ದಂತೆಯೇ ಹೆದರಿ ಪರಾರಿಯಾಗಿದ್ದಾರೆ. ಆ ನಂತರ ಅಜ್ಮಲ್ ಹಾಗೂ ಹಫೀಜ್ ಸ್ಥಳೀಯರ ನೆರವಿನಿಂದ ತಮ್ಮ ತಮ್ಮ ಶೆಡ್‌ಗಳನ್ನು ಸೇರಿದ್ದಾರೆ. ಈ ಹಂತದಲ್ಲಿ ಒಬ್ಬಾತ ನಿಯಂತ್ರಣ ಕೊಠಡಿಗೆ (100) ಕರೆ ಮಾಡಿದ್ದಾನೆ. ತಕ್ಷಣ ಮಾರತ್ತಹಳ್ಳಿ ಪೊಲೀಸರು ಹಾಗೂ ವೈಟ್‌ಫೀಲ್ಡ್ ಡಿಸಿಪಿ ಸ್ಥಳಕ್ಕೆ ಬಂದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಬಶೀರ್ ಕೊನೆಯುಸಿರೆಳೆದಿದ್ದರು.

ನಿತ್ರಾಣರಾಗಿ ಬಿದ್ದಿದ್ದರು: ಸ್ಥಳೀಯರು ನೀಡಿದ ಮಾಹಿತಿಯಿಂದ ಪೊಲೀಸರು ಗಾಯಾಳುಗಳನ್ನು ಹುಡುಕಿಕೊಂಡು ಶೆಡ್‌ಗಳ ಬಳಿ ತೆರಳಿದ್ದರು. ಅಲ್ಲಿ ಅಜ್ಮಲ್ ಹಾಗೂ ಹಫೀಜ್ ಸಹ ನಿತ್ರಾಣರಾಗಿ ಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಪೊಲೀಸರು, ಮಂಗಳವಾರ ಬೆಳಿಗ್ಗೆ ಹೇಳಿಕೆ ದಾಖಲಿಸಿಕೊಂಡರು.

‘ಎರಡು ಸಲ ಶಾಕ್ ಕೊಟ್ಟರು’

‘ನನಗೆ ಹಾಗೂ ಅಜ್ಮಲ್‌ಗೆ ಒಂದು ಸಲ ವಿದ್ಯುತ್ ಶಾಕ್‌ ನೀಡಿದರು. ಆದರೆ, ಬಶೀರ್‌ಗೆ ಎರಡು ಸಲ ಶಾಕ್ ಕೊಟ್ಟರು’ ಎಂದು ಹಫೀಜ್ ಹೇಳಿಕೆ ಕೊಟ್ಟಿದ್ದಾರೆ. ಮೂವರ ದೇಹದ ಮೇಲೂ ವೈರ್‌ನಿಂದ ಚುಚ್ಚಿರುವ ಗುರುತುಗಳಿವೆ. ಮರಣೋತ್ತರ ಪರೀಕ್ಷೆ ವರದಿಗಾಗಿ ಕಾಯುತ್ತಿದ್ದೇವೆ. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಿದ್ದೇವೆ’ ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.