ADVERTISEMENT

ಶವ ಪಡೆಯದೆ ಪ್ರತಿಭಟನೆ ನಡೆಸಿದ ಪೋಷಕರು

ಆಂಬುಲೆನ್ಸ್‌ ಚಾಲಕನ ಅನುಮಾನಾಸ್ಪದ ಸಾವು ಆರೋಪ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2015, 20:17 IST
Last Updated 1 ಆಗಸ್ಟ್ 2015, 20:17 IST

ಬೆಂಗಳೂರು: ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಆಂಬುಲೆನ್ಸ್‌ ಚಾಲಕ ದಿನೇಶ್‌ (27) ಅವರ ಸಾವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿ ಶವ ಪಡೆಯಲು ನಿರಾಕರಿಸಿದ ಪೋಷಕರು, ದಲಿತ ಸಂಘಟನೆಗಳ ನೇತೃತ್ವದಲ್ಲಿ ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪುತ್ರನ ಸಾವಿಗೆ ಆಸ್ಪತ್ರೆಯ ಆಡಳಿತ ಮಂಡಳಿಯೆ ನೇರ ಹೊಣೆ. ಈ ಕುರಿತು ಆಸ್ಪತ್ರೆಯ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿ, ಸಾವಿನ ನಿಖರ ಕಾರಣವನ್ನು ಪತ್ತೆಹಚ್ಚಬೇಕು. ಅಲ್ಲದೆ, ಇದ್ದ ಒಬ್ಬ ಮಗನನ್ನು ಕಳೆದುಕೊಂಡಿರುವ ಕುಟುಂಬದ ಸದಸ್ಯರಿಗೆ, ಅಗತ್ಯ ಪರಿಹಾರ ನೀಡಬೇಕು  ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಏನಿದು ಪ್ರಕರಣ: ಚನ್ನಪಟ್ಟಣದ ಸಿ. ದಿನೇಶ್ ಅವರು, ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯಲ್ಲಿ ಆಂಬುಲೆನ್ಸ್‌ ಚಾಲಕರಾಗಿ ಆರು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದರು. ಇತ್ತೀಚೆಗೆ ದಿನೇಶ್ ಸೇರಿದಂತೆ, ಇತರ ನಾಲ್ವರು ಸಿಬ್ಬಂದಿಯನ್ನು ಕೆಲಸದ ನಿಮಿತ್ತ ಶಿರಡಿಗೆ ಆಸ್ಪತ್ರೆಯ ವತಿಯಿಂದ ಕಳುಹಿಸಲಾಗಿತ್ತು.

ಜುಲೈ 26ರಂದು ಸ್ನೇಹಿತರೊಂದಿಗೆ ಡಾಬಾವೊಂದಕ್ಕೆ ತೆರಳಿದ್ದ ದಿನೇಶ್ ಅವರಿಗೆ, ಬೈಕ್ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸವಾರ ಮತ್ತು ದಿನೇಶ್ ಇಬ್ಬರೂ ಗಾಯಗೊಂಡಿದ್ದರು. ಕೂಡಲೇ ಅವರ ಸಹೋದ್ಯೋಗಿಗಳು ಅವರನ್ನು ನಾಸಿಕ್‌ನ ಆಸ್ಪತ್ರೆಗೆ ಸೇರಿಸಿದ್ದರು. ಈ ಕುರಿತು ದಿನೇಶ್ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದ ಆಸ್ಪತ್ರೆಯವರು, ಜುಲೈ 28ರಂದು ಅವರನ್ನು  ಬಿಜಿಎಸ್‌ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ತೀವ್ರವಾಗಿ ಗಾಯಗೊಂಡಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ 30ರಂದು ಸಂಜೆ ಕೊನೆಯುಸಿರೆಳೆದಿದ್ದರು ಎಂದು ಪೊಲೀಸರು ಹೇಳಿದರು.

ಶಿರಡಿಗೆ ತನಿಖಾ ತಂಡ: ಘಟನೆಗೆ ಸಂಬಂಧಿಸಿದಂತೆ ಮೃತ ದಿನೇಶ್ ಅವರ ಪೋಷಕರು, ಜುಲೈ 29ರಂದು ಕೊಟ್ಟ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಗಾಗಿ ಸಿಬ್ಬಂದಿಯ ತಂಡವನ್ನು ಶಿರಡಿಗೆ ಕಳುಹಿಸಲಾಗಿದೆ ಎಂದು ಕೆಂಗೇರಿ ಸಂಚಾರ ಪೊಲೀಸರು ತಿಳಿಸಿದರು.

ಆರೋಪ ಸತ್ಯಕ್ಕೆ ದೂರ: ‘ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ನಾಸಿಕ್ ಆಸ್ಪತ್ರೆಗೆ ದಾಖಲಾಗಿದ್ದ  ದಿನೇಶ್ ಅವರನ್ನು ಬೆಂಗಳೂರಿಗೆ ಕರೆತಂದು ಚಿಕಿತ್ಸೆ ಕೊಡುತ್ತಿದ್ದೆವು. ಆದರೆ ಚಿಕಿತ್ಸೆ ಸ್ಪಂದಿಸದೆ ಮೃತಪಟ್ಟರು. ಅವರ ಪೋಷಕರು ಆಸ್ಪತ್ರೆಯ ವಿರುದ್ಧ ಮಾಡುತ್ತಿರುವ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾಗಿವೆ’ ಎಂದು ಬಿಜಿಎಸ್‌ ಗ್ಲೋಬಲ್ ಆಸ್ಪತ್ರೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
*
ಯಾಕೆ ಮಾಹಿತಿ ನೀಡಲಿಲ್ಲ
‘ದಿನೇಶ್‌ನನ್ನು ಶಿರಡಿಗೆ ಕಳುಹಿಸಿದ್ದರ ಕುರಿತು ಆಸ್ಪತ್ರೆಯವರು ಕುಟುಂಬಕ್ಕೆ ಯಾಕೆ ಮಾಹಿತಿ ನೀಡಲಿಲ್ಲ? ಶಿರಡಿಯಲ್ಲಿ ನಿಜವಾಗಿಯೂ ಅಪಘಾತವಾಗಿದ್ದರೆ, ಜತೆಯಲ್ಲಿದ್ದವರು ಅಲ್ಲಿನ ಠಾಣೆಗೆ ದೂರು ಕೊಡಬಹುದಿತ್ತಲ್ಲವೇ? ಅಲ್ಲದೆ, ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತಂದ ನಂತರ ಕುಟುಂಬದವರಿಗೆ ಆತನನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡಲಿಲ್ಲ?’ ಎಂದು ದಿನೇಶ್ ಅವರ ಮಾವ ಸಿದ್ಧರಾಮ ಅವರ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.