ADVERTISEMENT

ಶಾಲೆ ಆವರಣದಲ್ಲಿ ವಿದ್ಯಾರ್ಥಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2017, 20:18 IST
Last Updated 27 ಫೆಬ್ರುವರಿ 2017, 20:18 IST
ಶಾಲೆ ಆವರಣದಲ್ಲಿ ವಿದ್ಯಾರ್ಥಿ ಹತ್ಯೆ
ಶಾಲೆ ಆವರಣದಲ್ಲಿ ವಿದ್ಯಾರ್ಥಿ ಹತ್ಯೆ   

ಬೆಂಗಳೂರು: ಯಲಹಂಕ ರೈಲ್ವೆ ಗೇಟ್‌ ಬಳಿಯ  ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ವಿದ್ಯಾರ್ಥಿಗಳ ಎರಡು ಗುಂಪಿನ ನಡುವೆ ಗಲಾಟೆ ನಡೆದಿದ್ದು, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಹರ್ಷರಾಜ್‌ (15) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

‘ಗಲಾಟೆಯಲ್ಲಿ ಮೂವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೊಲೆ ಆರೋಪದಡಿ ಇಬ್ಬರು ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದೇವೆ. ಆರೋಪಿಗಳ ಪೈಕಿ ಕೆಲ ಸ್ಥಳೀಯ ಯುವಕರು ಇದ್ದಾರೆ’ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಶೈಕ್ಷಣಿಕ ವರ್ಷ ಮುಕ್ತಾಯ ಹಂತಕ್ಕೆ ಬಂದಿದ್ದರಿಂದ ಶಾಲೆಯ ಆಡಳಿತ ಮಂಡಳಿಯು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಮ್ಮಿಕೊಂಡಿತ್ತು. ಬೆಳಿಗ್ಗೆ 10ಕ್ಕೆ ವಾರ್ಷಿಕೋತ್ಸವದ ಕಾರ್ಯಕ್ರಮ ಆರಂಭವಾಗಿತ್ತು. ಈ ವೇಳೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಸಹ ವಿತರಿಸಲಾಗಿತ್ತು.

ಸಮಾರೋಪ ಸಮಾರಂಭ ಮುಗಿಯುತ್ತಿದ್ದಂತೆ ಮಧ್ಯಾಹ್ನ 3ಕ್ಕೆ ಹರ್ಷ ಸ್ನೇಹಿತರೊಂದಿಗೆ ಮನೆಗೆ ಹೊರಟಿದ್ದ. ಶಾಲೆಯ ನೂರು ಮೀಟರ್‌ ದೂರದಲ್ಲಿರುವ ರೈಲ್ವೆ ಹಳಿಯ ಪಕ್ಕದ ರಸ್ತೆಯಲ್ಲಿ ಹೋಗುತ್ತಿದ್ದ ಹರ್ಷನನ್ನು ತಡೆದ ಮೂವರು ವಿದ್ಯಾರ್ಥಿಗಳು ಜಗಳ ತೆಗೆದಿದ್ದರು. ಆಗ ಎರಡೂ ಗುಂಪಿನ ನಡುವೆ ಮಾರಾಮಾರಿ ನಡೆದಿತ್ತು.

ಈ ಗಲಾಟೆಯಲ್ಲಿ ವಿದ್ಯಾರ್ಥಿಯೊಬ್ಬ ಹರ್ಷನ ಎದೆಭಾಗಕ್ಕೆ ಚಾಕುವಿನಿಂದ ಇರಿದಿದ್ದ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲಹಂಕದ ಅಯ್ಯಪ್ಪಸ್ವಾಮಿ ದೇವಸ್ಥಾನ ರಸ್ತೆಯ ನಿವಾಸಿ ನಾರಾಯಣಪ್ಪ ಹಾಗೂ ಅನ್ನಪೂರ್ಣ ದಂಪತಿ ಎರಡನೇ ಮಗ ಹರ್ಷ. ಇವರು 30 ವರ್ಷಗಳಿಂದ ಹಾಲು ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹರ್ಷ ಓದಿ ಜತೆಗೆ ಹೈನುಗಾರಿಕೆಯಲ್ಲೂ ತೊಡಗಿಸಿಕೊಳ್ಳುತ್ತಿದ್ದ.

ವಾಲಿಬಾಲ್‌ನಲ್ಲಿ ಪ್ರಥಮ ಬಹುಮಾನ: ಹರ್ಷ ಓದಿಗಿಂತ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದ. ಜಿಲ್ಲಾ, ವಲಯಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ. ವಾರ್ಷಿಕೋತ್ಸವ ಪ್ರಯುಕ್ತ ಇತ್ತೀಚೆಗೆ ಆಯೋಜಿಸಿದ್ದ ವಾಲಿಬಾಲ್‌ನಲ್ಲಿ ಹರ್ಷನ ತಂಡವೇ ಪ್ರಥಮ ಬಹುಮಾನ ಪಡೆದಿತ್ತು. ಅದಕ್ಕಾಗಿ ಆತನಿಗೆ ಶಾಲೆಯ ಮುಖ್ಯಸ್ಥರು, ಪ್ರಶಸ್ತಿ ಫಲಕ ಕೊಟ್ಟಿದ್ದರು. ಹರ್ಷ ಕೊಲೆಗೂ ಮುಂಚೆ ಎದುರಾಳಿ ಗುಂಪು, ಆ ಫಲಕ ಸಹ ಜಖಂಗೊಸಿಳಿತ್ತು.

ಮುಳುವಾದ ಸ್ನೇಹ?
ಹರ್ಷ ಪಿಯುಸಿ ವಿದ್ಯಾರ್ಥಿನಿ ಜತೆ ಸ್ನೇಹ ಬೆಳೆಸಿಕೊಂಡಿದ್ದ. ಇದೇ ವಿದ್ಯಾರ್ಥಿನಿಯ ಸ್ನೇಹಕ್ಕಾಗಿ ಮತ್ತೊಬ್ಬ ವಿದ್ಯಾರ್ಥಿ ಆಕೆಯ ಹಿಂದೆ ಬಿದ್ದಿದ್ದ. ಹೀಗಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ವಿದ್ಯಾರ್ಥಿನಿ ಮಾತನಾಡಿಸದಂತೆ ಕೆಲ ಬಾಲಕರು ಹರ್ಷನಿಗೆ ಸೋಮವಾರ ಬೆಳಿಗ್ಗೆ ಎಚ್ಚರಿಕೆ ನೀಡಿದ್ದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಹರ್ಷ, ವಾರ್ಷಿಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಬಳಿಕ ಆ ವಿದ್ಯಾರ್ಥಿನಿಯನ್ನು ಮಾತನಾಡಿಸಿದ್ದ. ಬಳಿಕ ನಡೆದ ಘಟನೆಯಲ್ಲಿ ಹರ್ಷ ಕೊಲೆಯಾಗಿದ್ದಾನೆ’ ಎಂದು  ಪ್ರತ್ಯಕ್ಷದರ್ಶಿ ಬಾಲಕರು ಪೊಲೀಸರಿಗೆ ತಿಳಿಸಿದ್ದಾರೆ.

ಆಸ್ಪತ್ರೆ ಬಳಿ ಬಿಟ್ಟು ಪರಾರಿ: ‘ರಕ್ತದ ಮಡುವಿನಲ್ಲಿ ಬಿದ್ದಿದ್ದ ಹರ್ಷನನ್ನು ಐವರು ಬಾಲಕರು ಬೈಕ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ಸ್ವಲ್ಪ ದೂರ ಹೋಗುತ್ತಿದ್ದಂತೆ ಹರ್ಷ ಬೈಕ್‌ನಿಂದ ಕೆಳಗೆ ಬಿದ್ದಿದ್ದಾನೆ. ಆತನನ್ನು ಮತ್ತೆ ಬೈಕ್‌ನಲ್ಲಿ ಕೂರಿಸಿಕೊಂಡ ಬಾಲಕರು, ಸರ್ಕಾರಿ ಆಸ್ಪತ್ರೆ ಬಳಿ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ಮಾರಾಮಾರಿ ವೇಳೆ ಗಾಯಗೊಂಡಿದ್ದ 3 ಬಾಲಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದಾರೆ. ಈ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.