ADVERTISEMENT

ಶಾಲೆ ಮುಂದೆ ಪೋಷಕರ ಪ್ರತಿಭಟನೆ

ಶಿಕ್ಷಣ ಕಾಯ್ದೆ ಉಲ್ಲಂಘನೆ ಆರೋಪ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2014, 19:50 IST
Last Updated 23 ನವೆಂಬರ್ 2014, 19:50 IST

ಬೆಂಗಳೂರು: ಮಲ್ಲತ್ತಹಳ್ಳಿಯಲ್ಲಿರುವ ನಾರಾಯಣ ಇ–ಟೆಕ್ನೊ ಶಾಲೆ ಮತ್ತು ಪಿಯು ಕಾಲೇಜಿನ ಆಡಳಿತ ಮಂಡಳಿಯು ಶಿಕ್ಷಣ ಕಾಯ್ದೆ ಉಲ್ಲಂಘಿಸಿ ಶಾಲೆ, ಕಾಲೇಜು ನಡೆಸುತ್ತಿದೆ ಎಂದು ಆರೋಪಿ ಶಾಲೆಯ ಎದುರು ನೂರಾರು ಪಾಲಕರು ಭಾನುವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಿಂದಾಗಿ ಶಾಲೆಯ ಎದುರು ಸುಮಾರು 2 ಗಂಟೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು.  ಸ್ಥಳಕ್ಕೆ ಬಂದ ಜ್ಞಾನಭಾರತಿ ಠಾಣೆಯ ಪೊಲೀಸ್‌ ಸಿಬ್ಬಂದಿ, ಉದ್ರಿಕ್ತ ಪಾಲಕರು ಮತ್ತು ಶಾಲಾ ಆಡಳಿತ ಮಂಡಳಿ ನಡುವೆ ಸಭೆ ಏರ್ಪಡಿಸುವ ಮೂಲಕ ಪರಿಸ್ಥಿತಿ ಹತೋಟಿಗೆ ತಂದರು.

ಶೀಘ್ರದಲ್ಲಿಯೇ ಶಾಲೆ ಮತ್ತು ಕಾಲೇಜನ್ನು ಶಿಕ್ಷಣ ಕಾಯ್ದೆಯಡಿ ಕಾನೂನುಬದ್ಧಗೊಳಿಸಲು ಮುಂದಾಗುತ್ತೇವೆ. ಅದಕ್ಕಾಗಿ ಎರಡು ತಿಂಗಳು ಕಾಲಾವಕಾಶ ನೀಡಬೇಕೆಂದು ಸಭೆಯಲ್ಲಿ ಆಡಳಿತ ಮಂಡಳಿಯವರು ಮನವಿ ಮಾಡಿದ ನಂತರ ಪೋಷಕರು ಪ್ರತಿಭಟನೆ ಕೈಬಿಟ್ಟರು.
‘ಪ್ರತಿಭಟನಾನಿರತ ಪಾಲಕರಲ್ಲಿ ಯಾರೊಬ್ಬರೂ ದೂರು ನೀಡಿಲ್ಲ. ದೂರು ನೀಡಿದರೆ ತನಿಖೆ ನಡೆಸಲಾಗುತ್ತದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ನಗರದಾದ್ಯಂತ 14 ಶಿಕ್ಷಣ ಸಂಸ್ಥೆಗಳನ್ನು ತೆರೆದಿರುವ ನಾರಾಯಣ ಸಮೂಹವು ಮಲ್ಲತ್ತ­ಹಳ್ಳಿಯ ಎನ್‌ಜಿಇಎಫ್‌ ಬಡಾವಣೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶಾಲೆ ಮತ್ತು ಪಿಯು ಕಾಲೇಜು ಆರಂಭಿಸಿತ್ತು.  ಶಿಕ್ಷಣ ಇಲಾಖೆಯಿಂದ ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿ ವರೆಗೆ ಮಾತ್ರ ಅನುಮತಿ ಪಡೆಯ­ಲಾಗಿದೆ. ಆದರೆ,   ಕಾನೂನು ಉಲ್ಲಂಘಿಸಿ ಇಂಗ್ಲಿಷ್ ಮಾಧ್ಯಮದಲ್ಲಿ ಪ್ರೌಢಶಾಲೆ ನಡೆಸಲಾಗುತ್ತಿದೆ. ಜತೆಗೆ, ಅನುಮತಿ ಪಡೆಯದೆ ಪಿಯು ಕಾಲೇಜು ಸಹ ಆರಂಭಿಸಲಾಗಿದೆ’ ಎಂದು ಪಾಲಕರೊಬ್ಬರು ಆರೋಪಿಸಿದರು.

ಪ್ರತಿಭಟನಾನಿರತ ಪಾಲಕರೊಂದಿಗೆ ನಾರಾಯಣ ಸಮೂಹದ ಉಪ ಪ್ರಧಾನ ವ್ಯವಸ್ಥಾಪಕ ರಾಜು ಸಭೆ ನಡೆಸಿದರು. ‘ಸರ್ಕಾರದಿಂದ ಇಂಗ್ಲಿಷ್‌ ಮಾಧ್ಯಮ ಶಾಲೆಗೆ ಅನುಮತಿ ಪಡೆಯಲಾಗಿದೆ ಎಂದು ರಾಜು ಅವರು ನಕಲಿ ದಾಖಲೆ ಪತ್ರಗಳನ್ನು ತೋರಿಸಿ ನಮಗೇ ದಾರಿ ತಪ್ಪಿಸುವ ಯತ್ನ ಮಾಡಿದರು. ನಮಗೆ ತಿಳಿದಿರುವಂತೆ ಶಾಲೆಗೆ ಅನುಮತಿ ಲಭಿಸಿಲ್ಲ’ ಎಂದು ಪಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಪಾಲಕರು ಮಾಡಿದ ಆರೋಪ ಕುರಿತಂತೆ ಕೇಳಲಾದ ಪ್ರಶ್ನೆಗೆ ರಾಜು ಅವರು, ‘ನಾವು ಕನ್ನಡ ಮಾಧ್ಯಮದಲ್ಲಿ ಐದನೇ ತರಗತಿ ವರೆಗೆ ಮಾತ್ರ ಅನುಮತಿ ಪಡೆದಿದ್ದೇವೆ. ಅಗತ್ಯವಾದ ಅನುಮತಿಗಾಗಿ ಸಿಬಿಎಸ್‌ಇಗೆ ಪತ್ರ ಬರೆದಿದ್ದೇವೆ. ಈಗಾಗಲೇ ಸಿಬಿಎಸ್‌ಇ ತಂಡ ಭೇಟಿ ನೀಡಿ ಶಾಲೆಯನ್ನು ಪರಿಶೀಲಿಸಿದೆ. ಎರಡು ತಿಂಗಳಲ್ಲಿ ಅನುಮತಿ ದೊರೆಯುವ ಸಾಧ್ಯತೆ ಇದೆ’ ಎಂದು ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.