ADVERTISEMENT

ಶಿಕ್ಷಣ ಕ್ಷೇತ್ರದ ಕಡೆಗಣನೆ ಸಲ್ಲ: ಡಾ.ಸಿಎನ್‌ಆರ್‌ ರಾವ್‌

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2014, 19:30 IST
Last Updated 21 ನವೆಂಬರ್ 2014, 19:30 IST
ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಜ್ಞಾನ ಶಿಕ್ಷಣದ ಮೇಲೆ ನಡೆದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡ ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್‌ ರಾವ್‌ ಮಾತನಾಡಿದರು. ಪ್ರೊ.ಟಿ.ವಿ.ರಾಮಕೃಷ್ಣನ್‌ ಹಾಜರಿದ್ದರು	–ಪ್ರಜಾವಾಣಿ ಚಿತ್ರ
ನಗರದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ವಿಜ್ಞಾನ ಶಿಕ್ಷಣದ ಮೇಲೆ ನಡೆದ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡ ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್‌ ರಾವ್‌ ಮಾತನಾಡಿದರು. ಪ್ರೊ.ಟಿ.ವಿ.ರಾಮಕೃಷ್ಣನ್‌ ಹಾಜರಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶದ ಎಲ್ಲ ಕ್ಷೇತ್ರಗಳ ಬೆಳವಣಿಗೆಗಳಿಗೂ ಶಿಕ್ಷಣವೇ ಮೂಲ. ಆದರೆ, ಅದಕ್ಕೆ ಆಂತರಿಕ ನಿವ್ವಳ ಉತ್ಪನ್ನದ (ಜಿಡಿಪಿ) ಶೇ 1ರಷ್ಟು ಹಣ­ವನ್ನೂ ಶಿಕ್ಷಣಕ್ಕಾಗಿ ಖರ್ಚು ಮಾಡ­ಲಾಗುತ್ತಿಲ್ಲ’ ಎಂದು ಹಿರಿಯ ವಿಜ್ಞಾನಿ ಡಾ.ಸಿಎನ್‌ಆರ್‌ ರಾವ್‌ ವಿಷಾದ ವ್ಯಕ್ತಪಡಿಸಿದರು.
ಆಬ್ಸರ್ವರ್‌ ರಿಸರ್ಚ್‌ ಫೌಂಡೇಷನ್‌ (ಒಆರ್‌ಎಫ್‌) ಸಂಘಟನೆಯಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ವಿಜ್ಞಾನ ಶಿಕ್ಷಣದ ಮೇಲೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ರಾಜೀವ್‌ ಗಾಂಧಿ ಅವರ ಸಂಪುಟ­ದಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವರಾಗಿದ್ದ ಪಿ.ವಿ. ನರಸಿಂಹರಾವ್‌, ಜಿಡಿಪಿಯ ಶೇ 6ರಷ್ಟು ಹಣವನ್ನು ಶಿಕ್ಷಣದ ಮೇಲೆ ಖರ್ಚು ಮಾಡಬೇಕು ಎನ್ನುವ ಶಿಫಾರಸು ಮಾಡಿದ್ದರು. ಆದರೆ, ಮುಂದೆ ಅವರೇ ಪ್ರಧಾನಿ­ಯಾದರೂ ಶಿಕ್ಷಣಕ್ಕೆ ಹೆಚ್ಚಿನ ಹಣ ಕೊಡಲು ಸಾಧ್ಯವಾಗಲಿಲ್ಲ’ ಎಂದು ಹೇಳಿದರು.

‘ವಿಜ್ಞಾನ ಶಿಕ್ಷಣಕ್ಕಾಗಿ ಸರ್ಕಾರಿ ಸಂಸ್ಥೆಗಳನ್ನೇ ಅವಲಂಬಿಸುವ ಸ್ಥಿತಿ ಇದೆ. ಆದರೆ, ಅವುಗಳಿಗೆ ಬೇಕಾದ ಅನುದಾನ­ವನ್ನು ಸರ್ಕಾರ ಕೊಡುತ್ತಿಲ್ಲ. ಸಂಶೋ­ಧನಾ ಕ್ಷೇತ್ರಕ್ಕೆ ಹೆಚ್ಚೆಂದರೆ ವಾರ್ಷಿಕ ₨ 5,000 ಕೋಟಿ ಬೇಕು. ಯಾವ ಸರ್ಕಾರವೂ ಅಷ್ಟು ಅನುದಾನ ನೀಡಲು ಮನಸ್ಸು ಮಾಡುತ್ತಿಲ್ಲ’ ಎಂದು ತಿಳಿಸಿದರು.

‘ಮುಂದಿನ ಹತ್ತು ವರ್ಷಗಳಲ್ಲಿ 4 ಕೋಟಿ ವಿದ್ಯಾರ್ಥಿಗಳು ಉನ್ನತ ಅಧ್ಯಯ­ನ­ಕ್ಕಾಗಿ ಬರಲಿದ್ದಾರೆ. ಅವರ ಶಿಕ್ಷಣಕ್ಕೆ ಬೇಕಾದ ಮೂಲಸೌಕರ್ಯವನ್ನು ಅಭಿವೃದ್ಧಿ ಮಾಡಬೇಕಿದೆ’ ಎಂದು ಹೇಳಿದರು.

ಒಆರ್‌ಎಫ್‌ನ ಸಂಶೋಧಕಿ ಡಾ. ಲೀನಾ ಚಂದ್ರನ್‌ ವಾಡಿಯಾ, ‘ದೇಶದ ಬಹುತೇಕ ಕಾಲೇಜುಗಳ ಪ್ರಯೋಗಾಲ­ಯಗಳು ದುಸ್ಥಿತಿಯಲ್ಲಿವೆ. ಚೀನಾಕ್ಕೆ ಹೋಲಿ­ಸಿ­ದರೆ ವಿಶ್ವವಿದ್ಯಾಲಯಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ’ ಎಂದರು. ಹೆಣ್ಣು ಮಕ್ಕಳಿಗೂ ವಿಜ್ಞಾನ ಶಿಕ್ಷಣದಲ್ಲಿ ಸಮಾನ ಆದ್ಯತೆ ಸಿಗಬೇಕು, ಮಾತೃಭಾಷೆಯಲ್ಲೇ ವಿಜ್ಞಾನವನ್ನು ಕಲಿಸಬೇಕು, ಪದವಿ ಕೋರ್ಸ್‌ಗಳ ಅವಧಿ ಕಡಿಮೆ ಮಾಡಿದರೂ ಗುಣ­ಮಟ್ಟ­ದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂಬ ಸಲಹೆಗಳು ಕೇಳಿಬಂದವು. ಪ್ರೊ.ಟಿ.ವಿ.ರಾಮಕೃಷ್ಣನ್‌ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.