ADVERTISEMENT

ಶೋಷಿತ ಸಮುದಾಯದಲ್ಲಿ ಒಗ್ಗಟ್ಟು ಮಾಯ

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 20:23 IST
Last Updated 26 ಜನವರಿ 2015, 20:23 IST

ಬೆಂಗಳೂರು: ‘ಶೋಷಿತ ಸಮುದಾಯಗಳು ಒಗ್ಗಟ್ಟು ಪ್ರದರ್ಶಿಸುತ್ತಿಲ್ಲ. ಹೀಗಾಗಿ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್‌.ಹನುಮಂತಯ್ಯ ಬೇಸರ ವ್ಯಕ್ತಪಡಿಸಿದರು.

ಸಂವಿಧಾನ ಜಾರಿ ದಿನಾಚರಣೆ ಅಂಗ­ವಾಗಿ ಪ್ರಜಾವಿಮೋಚನಾ ಚಳವಳಿ ಸಮತಾ­ವಾದ ಬೆಂಗಳೂರು ನಗರದ ಘಟಕದ ವತಿ­ಯಿಂದ ನಗರದ ಎನ್‌ಜಿಒ ಸಭಾಂಗಣದಲ್ಲಿ ಸೋಮವಾರ ನಡೆದ ‘ರಾಜ್ಯಾಧಿಕಾರದಲ್ಲಿ ಶೋಷಿತರ ಪಾತ್ರ’ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಚುನಾವಣೆ ಇಂದು ಪಾರದರ್ಶಕ­ವಾಗಿಲ್ಲ, ದುಬಾರಿಯಾಗಿದೆ. ಚುನಾವಣೆಯ ಲಾಭ­ವನ್ನು ಶ್ರೀಮಂತರು ಮಾತ್ರ ಪಡೆಯುತ್ತಿ­ದ್ದಾರೆ. ಇಡೀ ಜೀವನವನ್ನೇ ಸಮಾಜಕ್ಕಾಗಿ ಮುಡಿಪಾಗಿ ಇಟ್ಟವರು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲೂ ಗೆಲ್ಲುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮಡೆಸ್ನಾನದಂತಹ ಆಚರಣೆಗಳನ್ನು ನಿಷೇಧಿಸಬೇಕು. ದೇವದಾಸಿ ಪದ್ಧತಿ ಹಾಗೂ ಬೆತ್ತಲೆಸೇವೆಯನ್ನು ಸರ್ಕಾರ ನಿಷೇಧಿಸಿದೆ. ಆದರೂ ಇಂತಹ ಆಚರಣೆಗಳು ನಡೆಯು­ತ್ತಿವೆ. ಕಂದಾಚಾರಗಳ ವಿರುದ್ಧ ದಲಿತರು ಧ್ವನಿ ಎತ್ತಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಸದಸ್ಯ ವಿ.ಎಸ್. ಉಗ್ರಪ್ಪ ಮಾತನಾಡಿ, ‘ಮೀಸಲಾತಿ೧­ಯಿಂದ ಉನ್ನತ ಹುದ್ದೆಗಳನ್ನು ಪಡೆದಿರುವ ಅಧಿಕಾರಿ­ಗಳು, ವೈದ್ಯರು ಸೇರಿದಂತೆ ಎಲ್ಲರೂ ಬಳಿಕ ನವಬ್ರಾಹ್ಮಣರಾಗಿ ಬಿಡುತ್ತಾರೆ. ಅವರು ಸಮುದಾಯವನ್ನು ಮರೆತು ಬಿಡುತ್ತಾರೆ. ಇಂತಹ ಧೋರಣೆ ಹಿಂದುಳಿದ ವರ್ಗದ ಅಭಿವೃದ್ಧಿಗೆ ಮಾರಕ’ ಎಂದರು.

ಹಿಂದುಳಿದವರು ಸಮುದಾಯದೊಳಗಿನ ಹಿತಶತ್ರುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಸಂವಿಧಾನ ವಿರೋಧಿಸುವ ಗುಂಪುಗಳು ಒಗ್ಗಟ್ಟಾಗಿವೆ. ಆದರೆ, ಸಂವಿಧಾನದ ಪರವಾಗಿ ನಿಂತಿರುವ ಗುಂಪುಗಳಲ್ಲಿ ಒಗ್ಗಟ್ಟು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಿಮೋಚನಾ ಚಳವಳಿ ಸಮತಾವಾದದ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್‌ ಕೃಷ್ಣಪ್ಪ, ಎಸಿಪಿ ಸಿದ್ಧರಾಜು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.