ADVERTISEMENT

ಸಂಚಾರ ಪೊಲೀಸರಿಗೆ ‘ಬಾಡಿವೋರ್ನ್‌ ಕ್ಯಾಮೆರಾ’

ನಿಯಮ ಉಲ್ಲಂಘನೆ ಪತ್ತೆಗೆ ನೆರವು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2017, 19:52 IST
Last Updated 2 ಮಾರ್ಚ್ 2017, 19:52 IST
ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್‌ ಅಧಿಕಾರಿಗಳು ಗುರುವಾರ  ‘ಬಾಡಿವೋರ್ನ್‌ ಕ್ಯಾಮೆರಾ’ ಪಡೆದುಕೊಂಡರು
ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಪೊಲೀಸ್‌ ಅಧಿಕಾರಿಗಳು ಗುರುವಾರ ‘ಬಾಡಿವೋರ್ನ್‌ ಕ್ಯಾಮೆರಾ’ ಪಡೆದುಕೊಂಡರು   
ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರನ್ನು ಪತ್ತೆ ಮಾಡುವ ಹಾಗೂ ಪೊಲೀಸ್‌ ಅಧಿಕಾರಿ ಕರ್ತವ್ಯ ನಿರ್ವಹಿಸುವ ಸ್ಥಳದ ಘಟನಾವಳಿಗಳನ್ನು ಸೆರೆಹಿಡಿಯುವ ಉದ್ದೇಶದಿಂದ ರೂಪಿಸಿರುವ ‘ಬಾಡಿವೋರ್ನ್‌ ಕ್ಯಾಮೆರಾ’ಗಳನ್ನು ಗುರುವಾರ  ಸಂಚಾರ ಪೊಲೀಸರಿಗೆ ಹಸ್ತಾಂತರಿಸಲಾಯಿತು.
 
ಪೂರ್ವ ಹಾಗೂ ಪಶ್ಚಿಮ ಸಂಚಾರ ವಿಭಾಗದ 50 ಪೊಲೀಸ್‌ ಅಧಿಕಾರಿಗಳು (ಎಎಸ್‌ಐ ಹಾಗೂ ಪಿಎಸ್‌ಐ) ಈ ಕ್ಯಾಮೆರಾಗಳನ್ನು ಸಂಚಾರ ನಿಯಂತ್ರಣಾ ಕೊಠಡಿಯಿಂದ ಪಡೆದುಕೊಂಡರು.
 
‘ಪ್ರತಿ ಕ್ಯಾಮೆರಾವು 150 ಗ್ರಾಂ ತೂಕವಿದೆ. 10 ಗಂಟೆಯವರೆಗೆ  ಆಡಿಯೊ, ವಿಡಿಯೊ ಚಿತ್ರೀಕರಿಸಬಲ್ಲ ಸಾಮರ್ಥ್ಯ ಹೊಂದಿದೆ. ಕ್ಯಾಮೆರಾದಲ್ಲಿರುವ ದತ್ತಾಂಶವು  ಸಂಚಾರ ನಿಯಂತ್ರಣ ಕೊಠಡಿಯ ಕಂಪ್ಯೂಟರ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆ ಇದೆ. ಈ ಕ್ಯಾಮೆರಾ ಅಧಿಕಾರಿಗಳ ಎದೆಭಾಗದಲ್ಲಿರಲಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.  
 
‘ನಿಯಮ ಉಲ್ಲಂಘಿಸುವರು ಸ್ಥಳದಲ್ಲಿರುವ ಪೊಲೀಸರು ಕೈ ಮಾಡಿದರೂ ವಾಹನ ನಿಲ್ಲಿಸದೇ ಹೊರಟು ಹೋಗುತ್ತಾರೆ. ಅಂಥವರ ವರ್ತನೆಯನ್ನು ಸೆರೆ ಹಿಡಿಯಲು ಈ ಕ್ಯಾಮೆರಾ ಅನುಕೂಲವಾಗಿದೆ. ಪೊಲೀಸರು,  ವಾಹನ ತಪಾಸಣೆ ವೇಳೆ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸುತ್ತಾರೆ ಎಂಬುದು ಸಹ ಈ ಕ್ಯಾಮೆರಾದಲ್ಲಿ ಸೆರೆಯಾಗಲಿದೆ. ಅದನ್ನು ಕಚೇರಿಯಲ್ಲೇ ಕುಳಿತು ನೋಡಬಹುದು. ಸಾರ್ವಜನಿಕರಿಂದ ಪೊಲೀಸರ ಬಗ್ಗೆ ದೂರುಗಳು ಬಂದರೆ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು’ ಎಂದು ವಿವರಿಸಿದರು. 
 
‘ಮದ್ಯ ಸೇವಿಸಿ ವಾಹನ ಚಲಾಯಿಸುವರ ತಪಾಸಣೆ ವೇಳೆ ಪೊಲೀಸರೊಂದಿಗೆ ಕೆಲ ಚಾಲಕರು ಗಲಾಟೆ ಮಾಡುತ್ತಾರೆ. ಇಂಥ ಘಟನೆಗಳು ಕಬ್ಬನ್‌ ಪಾರ್ಕ್‌, ಹಲಸೂರು ಗೇಟ್‌, ಹೈಗ್ರೌಂಡ್ಸ್‌, ಅಶೋಕ ನಗರ ಹಾಗೂ ವಿಲ್ಸನ್‌ ಗಾರ್ಡನ್‌ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿವೆ. ಹೀಗಾಗಿ ಆ ಠಾಣೆ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಬಾಡಿವೋರ್ನ್‌ ಕ್ಯಾಮೆರಾವನ್ನು  ಬಳಸಲಾಗಿತ್ತು. ಅಲ್ಲಿ ಯಶಸ್ವಿಯಾಗಿದ್ದರಿಂದ ಈಗ 50 ಅಧಿಕಾರಿಗಳಿಗೆ ಕ್ಯಾಮೆರಾ ನೀಡಿದ್ದೇವೆ’ ಎಂದು ಅಧಿಕಾರಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.