ADVERTISEMENT

ಸಂತ ಸಂಘಟನೆ: ರಾಘವೇಶ್ವರರ ಕರೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ಬೆಂಗಳೂರು: ‘ಸಂತರ ಮೇಲೆ ನಡೆಯುತ್ತಿರುವ ಮಾನಹಾನಿ ತಪ್ಪಿಸಲು ಸಂಘಟಿತರಾಗಿ   ಹೋರಾಡಬೇಕಿದೆ. ಇದಕ್ಕಾಗಿ ಒಂದು ಸಂಘಟನೆ ಅವಶ್ಯ’ ಎಂದು ರಾಮಚಂದ್ರಾಪುರಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಹೇಳಿದರು.

ಶುಕ್ರವಾರ ಸಂತ ಸೇವಕ ಸಮಿತಿ ಆಯೋಜಿಸಿದ್ದ ಸಹಸ್ರ ಸಂತ ಸಂಗಮದಲ್ಲಿ ಅವರು ಮಾತನಾಡಿದರು. ‘ದೇಶದಲ್ಲಿ ಸಾಧುಗಳಿಲ್ಲದಿದ್ದರೆ ರಾಮಾಯಣ, ಭಗವದ್ಗೀತೆ, ವೇದ,  ಸಂಗೀತ, ನೃತ್ಯ ಯಾವುದೂ ಇಲ್ಲ. ಪ್ರತಿಯೊಬ್ಬ ಮಹಾಪುರುಷನ  ಸಾಧನೆ ಹಿಂದೆ ಸಂತರು ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಅವರು ಹೇಳಿದರು.

‘ಲೋಕದ ಡೊಂಕು ತಿದ್ದುವ ಕೆಲಸವನ್ನು  ಸಾಧುಗಳು ಮೊದಲಿನಿಂದಲೂ ಮಾಡುತ್ತಿದ್ದಾರೆ.  ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಧುಗಳ ಮೇಲೆ ವ್ಯವಸ್ಥಿತ ದಾಳಿ ಮಾಡುತ್ತಿದ್ದಾರೆ’ ಎಂದು ದೂರಿದರು. ಆಯೂರಾಶ್ರಮದ ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಬೇಲಿ ಮಠದ ಶಿವರುದ್ರ ಸ್ವಾಮೀಜಿ, ಕೊರಣೇಶ್ವರ ಮಹಾ ಸಂಸ್ಥಾನದ ಸಿದ್ಧಲಿಂಗೇಶ್ವರ ಸ್ವಾಮೀಜಿ  ಮಾತನಾಡಿದರು.

ನಿವೃತ್ತ ನ್ಯಾಯಮೂರ್ತಿ  ರಾಮಾ ಜೋಯಿಸ್ ಪ್ರಾಸ್ತಾವಿಕ ಭಾಷಣ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.