ADVERTISEMENT

ಸಚಿವರ ಪ್ರವಾಸ ಭತ್ಯೆ 7.53 ಕೋಟಿ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 20:05 IST
Last Updated 29 ಜುಲೈ 2015, 20:05 IST
ಸಚಿವರ ಪ್ರವಾಸ ಭತ್ಯೆ 7.53 ಕೋಟಿ
ಸಚಿವರ ಪ್ರವಾಸ ಭತ್ಯೆ 7.53 ಕೋಟಿ   

ಬೆಂಗಳೂರು: ಮುಖ್ಯಮಂತ್ರಿ ಹೊರತು ಪಡಿಸಿ, ಇತರ ಸಚಿವರ ವೇತನ, ಮನೆ ಬಾಡಿಗೆ, ಪ್ರಯಾಣ ಭತ್ಯೆ ಮತ್ತಿತರ ಭತ್ಯೆಗಳಿಗಾಗಿ ರಾಜ್ಯ ಸರ್ಕಾರ ಎರಡು ವರ್ಷಗಳಲ್ಲಿ ₨ 13.80 ಕೋಟಿ ವಿನಿಯೋಗಿಸಿದೆ. 

ಈ ಪೈಕಿ ವೇತನ, ಅತಿಥಿ ಭತ್ಯೆ, ಮನೆ ಬಾಡಿಗೆ ಮತ್ತಿತರ ಭತ್ಯೆಗಳಿಗಾಗಿ ₨ 6.26 ಕೋಟಿ  ಹಾಗೂ ಪ್ರಯಾಣ ಭತ್ಯೆಗಾಗಿ ₨ 7.53 ಕೋಟಿ ಮೊತ್ತವನ್ನು ಸರ್ಕಾರದ ಬೊಕ್ಕಸದಿಂದ ಪಾವತಿಸಲಾಗಿದೆ.

ಅತೀ ಹೆಚ್ಚು ಭತ್ಯೆ ಪಡೆದ ಸಚಿವರ ಪಟ್ಟಿಯಲ್ಲಿ ಮೊದಲ ಐದು ಸ್ಥಾನದಲ್ಲಿರುವ ಸಚಿವರ ಪೈಕಿ ನಾಲ್ವರು ಕರಾವಳಿ ಜಿಲ್ಲೆಯವರು.  ಈ ಪಟ್ಟಿಯಲ್ಲಿ, ನಗರಾಭಿವೃದ್ಧಿ ಸಚಿವ ವಿನಯ ಕುಮಾರ್‌ ಸೊರಕೆ ಮೊದಲ ಸ್ಥಾನದಲ್ಲಿದ್ದಾರೆ. ಅವರು ₨ 56.63 ಲಕ್ಷ ಪ್ರಯಾಣ ಭತ್ಯೆ ಸಹಿತ ಒಟ್ಟು ₨ 79.42 ಲಕ್ಷ ಮೊತ್ತವನ್ನು ವಿವಿಧ ಭತ್ಯೆಗಳ  ರೂಪದಲ್ಲಿ ಪಡೆದಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬಂದರು ಹಾಗೂ ಒಳನಾಡು ಸಾರಿಗೆ ಸಚಿವ ಬಾಬುರಾವ್‌ ಚಿಂಚನಸೂರು, ಒಟ್ಟು ₨ 76.29 ಲಕ್ಷ ಮೊತ್ತವನ್ನು ಭತ್ಯೆಗಳ ರೂಪದಲ್ಲಿ ಪಡೆದಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಯು.ಟಿ.ಖಾದರ್‌ ₨ 74.09 ಲಕ್ಷ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಬಿ.ರಮಾನಾಥ ರೈ ₨ 71.10 ಲಕ್ಷ, ಯುವಜನ ಸೇವೆ ಹಾಗೂ ಮೀನು ಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್‌ ₨ 67.11 ಲಕ್ಷ ಮೊತ್ತವನ್ನು ಭತ್ಯೆ ರೂಪದಲ್ಲಿ ಪಡೆದಿದ್ದಾರೆ.

ಗೋಕಾಕ ತಾಲ್ಲೂಕಿನ ಮೂಡ ಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗುಂಡಪ್ಪ ಗಡಾದ  ಅವರು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಿಂದ ಮಾಹಿತಿ ಹಕ್ಕಿನ ಅಡಿ  ಈ ವಿವರಗಳನ್ನು ಕಲೆ ಹಾಕಿದ್ದಾರೆ.

‘ಇದು ಹಳೆಯ ದರದ ಪ್ರಕಾರ ಸಚಿವರಿಗೆ ಸರಕಾರದ ಬೊಕ್ಕಸದಿಂದ ಪಾವತಿಯಾಗಿರುವ ಮೊತ್ತ. ಮಾರ್ಚ್‌ ತಿಂಗಳಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಸಚಿವರ ಹಾಗೂ ಶಾಸಕರ ವೇತನ ಮತ್ತಿತರ ಭತ್ಯೆಗಳನ್ನು ಪರಿಷ್ಕರಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ. ಪರಿಷ್ಕೃತ ದರದ ಪ್ರಕಾರ  ಸಚಿವರ ವೇತನ ಹಾಗೂ ಭತ್ಯೆಗಳಿಂದ ಸರ್ಕಾರದ ಬೊಕ್ಕಸದ ಮೇಲಿನ ಹೊರೆ ಇನ್ನಷ್ಟು ಹೆಚ್ಚಾಗಲಿದೆ’ ಎನ್ನುತ್ತಾರೆ ಗಡಾದ.

‘ಇನ್ನೋವಾದಂತಹ ಐಷಾರಾಮಿ ಕಾರುಗಳು ಪ್ರತಿ ಕಿಲೊ ಮೀಟರ್‌ಗೆ ₨ 15ರಂತೆ ಬಾಡಿಗೆಗೆ ಲಭ್ಯ. ಆದರೆ, ಸಚಿವರು ಪ್ರತಿ ಕಿ.ಮೀ. ಪ್ರಯಾಣಕ್ಕೆ ₨ 30 ಭತ್ಯೆ ಪಡೆಯುವುದಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಹಿಂದೆ ಈ ಮೊತ್ತ ₨ 20 ಇತ್ತು. ಅದನ್ನು ಹೆಚ್ಚಿಸಿದ್ದರ ಉದ್ದೇಶವಾದರೂ ಏನು?’ ಎಂದು ಅವರು ಪ್ರಶ್ನಿಸಿದರು.  ‘ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಲೆ ಪಾವತಿಯಾಗುವಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ರೈತರ ಸರಣಿ ಆತ್ಮಹತ್ಯೆಗಳು ನಡೆಯುತ್ತಿದ್ದರೂ ಅದಕ್ಕೆ ಪರಿಹಾರೋಪಾಯ ಕಂಡುಕೊಳ್ಳಲು  ಸಾಧ್ಯವಾಗಿಲ್ಲ. ಆದರೆ, ಸಚಿವರ ಮಾಸಿಕ ವೇತನ, ಅತಿಥಿ ಭತ್ಯೆ, ಮನೆ ಬಾಡಿಗೆ, ಮನೆ ಮತ್ತು ತೋಟ ನಿರ್ವಹಣಾ ವೆಚ್ಚ, ಇಂಧನ ಭತ್ಯೆ ಹಾಗೂ ಪ್ರಯಾಣ ಭತ್ಯೆಗಳನ್ನು ಮನಸ್ಸಿಗೆ ಬಂದಂತೆ ಹೆಚ್ಚಿಸ ಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.