ADVERTISEMENT

ಸಣ್ಣ ಸಮುದಾಯಗಳಿಗೆ ಸಿಗದ ಸೌಲಭ್ಯ

ಕುಂಬಾರ ಜನಾಂಗದ ಸಮಾವೇಶದಲ್ಲಿ ಸಚಿವ ದಿನೇಶ್‌ ಗುಂಡೂರಾವ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2015, 20:40 IST
Last Updated 25 ಜನವರಿ 2015, 20:40 IST
ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ಕುಂಬಾರ ಜನಾಂಗದ ಸಮಾವೇಶ­ವನ್ನು ಸಚಿವ ದಿನೇಶ್‌ ಗುಂಡೂರಾವ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಿಡಿಎ ಅಧಿಕಾರಿ ಆರ್.ಶ್ರೀನಿವಾಸ್ ಮತ್ತಿತರರು ಚಿತ್ರದಲ್ಲಿದ್ದಾರೆ	 – ಪ್ರಜಾವಾಣಿ ಚಿತ್ರ
ನಗರದ ಶಿಕ್ಷಕರ ಸದನದಲ್ಲಿ ಭಾನುವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ಕುಂಬಾರ ಜನಾಂಗದ ಸಮಾವೇಶ­ವನ್ನು ಸಚಿವ ದಿನೇಶ್‌ ಗುಂಡೂರಾವ್ ಮತ್ತು ಮಾಣಿಲದ ಮೋಹನದಾಸ ಸ್ವಾಮೀಜಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಿಡಿಎ ಅಧಿಕಾರಿ ಆರ್.ಶ್ರೀನಿವಾಸ್ ಮತ್ತಿತರರು ಚಿತ್ರದಲ್ಲಿದ್ದಾರೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಪ್ರಬಲ ಸಮು­ದಾಯ­ಗಳು ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚಿನ ಸಹಾಯ ಪಡೆದುಕೊಳ್ಳುತ್ತಿವೆ. ಸಣ್ಣ ಸಮುದಾಯಗಳಿಗೆ ಹೆಚ್ಚಿನ ಸಹಾಯ ಸಿಗುತ್ತಿಲ್ಲ’ ಎಂದು ಆಹಾರ, ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಬೇಸರ ವ್ಯಕ್ತಪಡಿಸಿದರು.

ನಗರದ ಶಿಕ್ಷಕರ ಸದನದಲ್ಲಿ ಭಾನು­ವಾರ ಏರ್ಪಡಿಸಿದ್ದ ಅಖಿಲ ಕರ್ನಾಟಕ ಕುಂಭೇಶ್ವರ ಸೇವಾ ಟ್ರಸ್ಟ್ ಉದ್ಘಾಟನಾ ಸಮಾರಂಭ ಮತ್ತು ಕುಂಬಾರ ಜನಾಂಗದ ಸಮಾವೇಶದಲ್ಲಿ ಅವರು ಮಾತನಾಡಿದರು. ‘ಸಣ್ಣ ಸಮುದಾಯಗಳು ಶಿಕ್ಷಣ ಸಂಸ್ಥೆ, ಬ್ಯಾಂಕ್‌ ಮತ್ತು ಸೊಸೈಟಿಗಳನ್ನು ಸ್ಥಾಪಿಸಿಕೊಂಡು ರಾಜಕೀಯ ಪ್ರಾತಿನಿಧ್ಯ ಪಡೆಯಬೇಕು’ ಎಂದು ಅವರು ಸಲಹೆ ನೀಡಿದರು.

‘ಹಿಂದೆ ಜಾತಿಗಳ ಆಧಾರದ ಮೇಲೆ ವೃತ್ತಿಗಳು ನಿರ್ಧಾರವಾಗುತ್ತಿದ್ದವು. ಇಂದು ಜಾತಿ ವ್ಯವಸ್ಥೆಯಲ್ಲಿ ಬದಲಾ­ವಣೆ­ಯಾಗಿದೆ. ಪ್ರತಿಭೆ ಇದ್ದರೆ ದಲಿತ ಸಹ ಪೌರೋಹಿತ್ಯ ಮಾಡಬಹುದು’ ಎಂದರು.

ಮಾಣಿಲದ ಮೋಹನದಾಸ ಸ್ವಾಮೀಜಿ ಮಾತನಾಡಿ, ‘ಅಧಿಕಾರ, ಅಂತಸ್ತು ಮತ್ತು ಸ್ಥಾನಮಾನ ಕುರಿತು ಮನುಷ್ಯರಲ್ಲಿ ನಿರಂತರವಾಗಿ ಸಂಘರ್ಷ ನಡೆಯುತ್ತಿದೆ. ಮತ, ಪಂಥ ಮತ್ತು ಧರ್ಮಗಳ  ಹೆಸರಿನಲ್ಲಿ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು’ ಎಂದು ಹೇಳಿದರು.

‘ಲಿಂಗಾಯತ ಕುಂಬಾರ, ತೆಲುಗು ಕುಂಬಾರ.. ಹೀಗೆ ವಿವಿಧ ಹೆಸರುಗಳಿಂದ ಸಮುದಾಯವನ್ನು ಗುರುತಿಸ­ಲಾಗು­ತ್ತಿದೆ. ಇದರಿಂದ ಸಮುದಾಯದ ಏಕತೆಗೆ ಧಕ್ಕೆ ಉಂಟಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಮರು ಸರ್ವೆ: ಸ್ವಾಗತ
‘ಯಲಹಂಕದ ನವರತ್ನ ಅಗ್ರ­ಹಾರದ ಸರ್ವೆ ನಂ.13ರಲ್ಲಿ ಸರ್ಕಾರಿ ಭೂಮಿ ಒತ್ತುವರಿ ಸಂಬಂಧಿ­­ಸಿದಂತೆ     ತಹಶೀಲ್ದಾರ್‌  ನೀಡಿರುವ ವರದಿಯನ್ನು ರದ್ದು­ಪಡಿಸಿ, ಮರು ಸರ್ವೆ ನಡೆಸಬೇಕು ಎಂದು ಬೆಂಗಳೂರಿನ ಉತ್ತರ ವಿಭಾಗದ ಉಪವಿಭಾಗಧಿಕಾರಿ ಅವರು ನೀಡಿರುವ ಆದೇಶವನ್ನು ಸ್ವಾಗತಿಸುತ್ತೇನೆ’ ಎಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT