ADVERTISEMENT

ಸಮಾಜದ ಕೊಳೆ: ಮಡಿವಾಳರ ಸಿಟ್ಟು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:49 IST
Last Updated 30 ಸೆಪ್ಟೆಂಬರ್ 2014, 19:49 IST

ಪ್ರಬೆಂಗಳೂರು: ‘ಕುಲಕಸುಬನ್ನು ನಿರ್ವಂ­ಚನೆ­ಯಿಂದ ಮಾಡುತ್ತ, ಸಮಾಜ­ಸೇವೆ ಮಾಡುತ್ತಿರುವ ಮಡಿ­ವಾಳ ಜನಾಂಗ­ದವರಿಗೆ ಸಮಾಜದಲ್ಲಿರುವ ಕೊಳೆಯ ಕುರಿತು ಅಪಾರ ಸಿಟ್ಟಿದೆ’ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕಾಂತರಾಜು ಹೇಳಿದರು.

ನಗರದಲ್ಲಿ ಮಂಗಳವಾರ ರಾಜ್ಯ ಮಡಿವಾಳರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕುಲದ ವೃತ್ತಿ ನೆಚ್ಚಿ, ವಿದ್ಯೆ ಮತ್ತು ಸಂಪತ್ತಿನಿಂದ ವಂಚಿತವಾಗಿ ಅನೇಕ ಸಾಮಾಜಿಕ ಮತ್ತು ದೈಹಿಕ ಸಮಸ್ಯೆ­ಗಳನ್ನು ಎದುರಿಸುತ್ತಿರುವ ಈ ಸಮು­ದಾಯಕ್ಕೆ ಸಾಮಾಜಿಕ ನ್ಯಾಯದಡಿ ದೊರೆ­ಯ­ಬೇಕಾದ ಸವಲತ್ತುಗಳು ಈವ­ರೆಗೆ ಸಿಗದಿರುವುದು ದುರಂತ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಜನಾಂಗ­ವನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಗತ್ಯ­ವಾದ ಕ್ರಮ­ಕೈಗೊಳ್ಳಬೇಕು’ ಎಂದು ಹೇಳಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ದಿನೇಶ್ ಗುಂಡೂ­ರಾವ್ ಮಾತ­ನಾಡಿ, ‘ಸಾಮಾಜಿಕ ನ್ಯಾಯ ದೊರೆಯ­ಬೇಕಾದರೆ, ಸಮಾ­ಜದ ದೌರ್ಬಲ್ಯ­ಗಳನ್ನು ಗುರುತಿಸುವ ಸಮೀಕ್ಷೆ ಮಾಡುವ ಅಗತ್ಯವಿದೆ. ಅದಿ­ಲ್ಲದೇ, ಯೋಜನೆಗಳ ಪ್ರಾಯೋಗಿಕ ಅನು­­ಷ್ಠಾನ ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಾತಿವಾರು ಜನ­ಗಣತಿಗೆ ಸಮೀಕ್ಷೆ ನಡೆಸುತ್ತಿದೆ’ ಎಂದರು.

ಎಸ್ಸೆಸ್ಸೆಲ್ಸಿ, ಪಿಯು ಮತ್ತು ಪದವಿ­ಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿ­­ಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.