ADVERTISEMENT

ಸರಿ ಮಾಡುತ್ತೇನೆ: ಮುಖ್ಯಮಂತ್ರಿ

ಸಚಿವರ ಕಾರ್ಯವೈಖರಿಗೆ ಜನಾರ್ದನ ಪೂಜಾರಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2016, 20:01 IST
Last Updated 8 ಫೆಬ್ರುವರಿ 2016, 20:01 IST

ಬೆಂಗಳೂರು: ‘ಕೆಲ ಸಚಿವರ ಕಾರ್ಯ ವೈಖರಿ ಬಗ್ಗೆ ಪಕ್ಷದ ಹಿರಿಯ ಮುಖಂಡ ಜನಾರ್ದನ ಪೂಜಾರಿ ಮೈಸೂರಿನಲ್ಲಿ ಬಹಿರಂಗ ಆಕ್ಷೇಪ ಎತ್ತಿದ್ದಾರೆ. ಆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರಿ ಮಾಡುವ ಕೆಲಸ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ಹೇಳಿದರು.

‘ಪಕ್ಷದ ಕಾರ್ಯಕರ್ತರಿಗೆ ಸಚಿವರು ಗೌರವ ನೀಡುತ್ತಿಲ್ಲ. ಕೈಗೂ ಸಿಗುತ್ತಿಲ್ಲ. ಅಂತಹ ಸಚಿವರನ್ನು ಸಂಪುಟದಿಂದ ಕೈಬಿಡಬೇಕು’ ಎಂದು ಪೂಜಾರಿ ಅವರು ಮೈಸೂರು ಸಮಾವೇಶದಲ್ಲಿ ಒತ್ತಾ ಯಿಸಿದ್ದರು.ತುಮಕೂರು ಕಾರ್ಯಕ್ರಮಕ್ಕೆ ತೆರಳುವ ಮುನ್ನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಪೂಜಾರಿ ಹೇಳಿಕೆಗಳನ್ನು ಗಮನಿ ಸಿದ್ದೇನೆ. ತಪ್ಪಾಗಿದ್ದರೆ ಸರಿಪಡಿಸುವ ಪ್ರಯತ್ನ ನಡೆಸುತ್ತೇನೆ’ ಎಂದು ಹೇಳಿದರು.

ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಿದ್ದು ನಾನಲ್ಲ ಎನ್ನುವ ದೇವೇಗೌಡರ ಹೇಳಿಕೆಗೆ ‘ಪ್ರತಿಕ್ರಿಯೆ ನೀಡುವುದಿಲ್ಲ. ಎಂದೊ ಆದ ಘಟನೆ ಯನ್ನು ಈಗ ಯಾಕೆ ಪ್ರಸ್ತಾಪಿಸಬೇಕು’ ಎಂದರು.

ಗೌಡರೇ ಷರತ್ತು ಹಾಕಿದ್ದರು: ‘ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆ ಸಂದರ್ಭದಲ್ಲಿ ಎಸ್‌.ಎಂ. ಕೃಷ್ಣ  ಮತ್ತು ಡಿ.ಕೆ.ಶಿವಕುಮಾರ್‌ ಅವರನ್ನು ಅಧಿಕಾ ರದಿಂದ ದೂರ ಇಡಬೇಕು ಎನ್ನುವ ಷರತ್ತು ಹಾಕಿದ್ದೇ ದೇವೇ ಗೌಡರು. ಈಗ ಏಕೆ ಅವರು ಸುಳ್ಳು ಹೇಳು ತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಟೀಕಿಸಿದರು.

‘ಜಮೀರ್‌ ಅಹಮದ್‌ ಅವರು ಜೆಡಿಎಸ್‌ನ ಶಾಸಕರು. ಅವರ ಆಂತರಿಕ ವಿಚಾರಗಳ ಬಗ್ಗೆ ನಾನೇನೂ ಪ್ರತಿಕ್ರಿಯೆ ನೀಡುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.