ADVERTISEMENT

ಸರ್ಕಾರದಿಂದ ಕಾನೂನು ಉಲ್ಲಂಘನೆ

ರಾಜ್ಯ ಸರ್ಕಾರ, ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ ಆರೋಪ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 20:14 IST
Last Updated 19 ಜುಲೈ 2017, 20:14 IST

ಬೆಂಗಳೂರು: ‘ನಿವೃತ್ತಿ ಹೊಂದಿದ ಅಧಿಕಾರಿಗಳನ್ನೇ ವಿವಿಧ ಇಲಾಖೆಗಳಿಗೆ ಮರುನೇಮಿಸುವ ಮೂಲಕ ಸರ್ಕಾರವೇ ಕಾನೂನನ್ನು ಉಲ್ಲಂಘಿಸಿದೆ’ ಎಂದು ರಾಜ್ಯ ಸರ್ಕಾರ ಹಾಗೂ ಸ್ವಾಮ್ಯ ಸಂಘ ಸಂಸ್ಥೆಗಳ ವಾಹನ ಚಾಲಕರ ಒಕ್ಕೂಟ ಆರೋಪಿಸಿದೆ.

ಬುಧವಾರ ಇಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  =ಒಕ್ಕೂಟದ ಅಧ್ಯಕ್ಷ ಎಂ.ಎನ್‌. ವೇಣುಗೋಪಾಲ್‌, ‘ಕರ್ನಾಟಕ ಭೂ–ಕಬಳಿಕೆ ತಡೆ ವಿಶೇಷ ನ್ಯಾಯಾಲಯಕ್ಕೆ 32 ನಿವೃತ್ತ ಅಧಿಕಾರಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿದೆ. ಇವರೆಲ್ಲರಿಗೂ ನಿವೃತ್ತಿ ವೇತನದ ಜೊತೆಗೆ ಗುತ್ತಿಗೆ ವೇತನವೂ ದೊರೆಯುತ್ತಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಆಗುತ್ತಿದೆ’ ಎಂದು ಹೇಳಿದರು.

ಕನ್ನಡಿಗರ ಉದ್ಯೋಗ ವೇದಿಕೆ ಅಧ್ಯಕ್ಷೆ ವಿನುತಾ, ‘ನಿವೃತ್ತ  ಅಧಿಕಾರಿಗಳಿಗೆ ಪುನಃ ಅವಕಾಶ ನೀಡುವ  ಮೂಲಕ ಸರ್ಕಾರವೇ ನಿರುದ್ಯೋಗ ಸಮಸ್ಯೆ ಹೆಚ್ಚಲು ದಾರಿ ಮಾಡಿಕೊಡುತ್ತಿದೆ. ವಿಶ್ವವಿದ್ಯಾಲಯಗಳಿಂದ ಪ್ರತಿವರ್ಷ ಲಕ್ಷಾಂತರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಅವರಲ್ಲಿ ಶೇ 20ರಷ್ಟು ಮಂದಿಗೆ ಮಾತ್ರ ಕೆಲಸ ದೊರೆಯುತ್ತಿದೆ’ ಎಂದು ಮಾಹಿತಿ ನೀಡಿದರು.

ADVERTISEMENT

‘ವಲಸಿಗರ ಹಾವಳಿಯಿಂದ ಇಲ್ಲಿನ ಯುವಕರಿಗೆ ಕೆಲಸ ಸಿಗದಂತಾಗಿದೆ.   ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಶೇ 86ರಷ್ಟು ಅನ್ಯ ರಾಜ್ಯದವರು ಇದ್ದಾರೆ. ಅದರ ಜೊತೆ ಸರ್ಕಾರವೇ ನಮ್ಮವರಿಗೆ ಉದ್ಯೋಗ ವಂಚಿಸುತ್ತಿರುವುದು ಸರಿಯೇ’ ಎಂದು ಪ್ರಶ್ನಿಸಿದರು.

‘ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯೂ ಇತ್ತೀಚೆಗಷ್ಟೆ 20 ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಅರ್ಜಿ ಆಹ್ವಾನಿಸಿತ್ತು. ಅದರಲ್ಲಿಯೂ ನಿವೃತ್ತ ಸರ್ಕಾರಿ ನೌಕರರಿಗೆ ಆದ್ಯತೆ ನೀಡಲಾಗಿದೆ’ ಎಂದರು.

ಸಿ.ಎಂ ಕಚೇರಿಯಲ್ಲಿ 16 ಮಂದಿ
ಭ್ರಷ್ಟಾಚಾರ ವಿರೋಧಿ ಹೋರಾಟ ವೇದಿಕೆ ಅಧ್ಯಕ್ಷೆ ಜೆ.ಎನ್‌. ಜಯಶ್ರೀ, ‘1977ರಿಂದ ಇದು ನಡೆದುಕೊಂಡು ಬರುತ್ತಿದೆ. ಸರ್ಕಾರಕ್ಕೆ ಈ ವಿಷಯ ತಿಳಿದಿದ್ದರೂ, ಅದನ್ನು ಉಲ್ಲಂಘಿಸುತ್ತಿದೆ. ಮುಖ್ಯಮಂತ್ರಿ ಅವರ ಕಚೇರಿಯಲ್ಲಿಯೇ 16  ನಿವೃತ್ತ ಅಧಿಕಾರಿಗಳಿದ್ದಾರೆ. ಭ್ರಷ್ಟಾಚಾರಕ್ಕೆ ಬೆಂಬಲ ನೀಡಬೇಕೆನ್ನುವ ಅಲಿಖಿತ ಒಪ್ಪಂದದ ಮೇರೆಗೆ ಅವರನ್ನು ಮತ್ತೆ ನೇಮಿಸಿಕೊಳ್ಳಲಾಗುತ್ತದೆ’ ಎಂದು ಆರೋಪಿಸಿದರು.

‘ಈಗಿರುವ ನಿವೃತ್ತ ಅಧಿಕಾರಿಗಳನ್ನು ತೆಗೆದು ಹಾಕಬೇಕು. ಆ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಿಕೊಳ್ಳಬೇಕು. ಶೀಘ್ರ ಇದನ್ನು ಜಾರಿ ಮಾಡದಿದ್ದರೆ ವಿವಿಧ ಸಂಘಟನೆಗಳು ಜೊತೆಗೂಡಿ ಉಗ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.