ADVERTISEMENT

ಸಾಮೂಹಿಕ ಅತ್ಯಾಚಾರ ಎಸಗಿ ಸುಲಿಗೆ

​ಪ್ರಜಾವಾಣಿ ವಾರ್ತೆ
Published 28 ಮೇ 2016, 19:59 IST
Last Updated 28 ಮೇ 2016, 19:59 IST

ಬೆಂಗಳೂರು:  ಮಧ್ಯಪ್ರದೇಶ ಮೂಲದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಹಾಗೂ ಆಕೆಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮೂವರು ಕ್ಯಾಬ್ ಚಾಲಕರನ್ನು ಆರ್‌ಎಂಸಿ ಯಾರ್ಡ್‌ ಪೊಲೀಸರು ಬಂಧಿಸಿದ್ದಾರೆ.

‘ಘಟನೆ ಸಂಬಂಧ ದಿನೇಶ್ ಮತ್ತು ಶಿವಕುಮಾರ್ ಎಂಬುವರನ್ನು ಸಾಮೂಹಿಕ ಅತ್ಯಾಚಾರ ಆರೋಪದಡಿ (ಐಪಿಸಿ 376 2ಜಿ) ಬಂಧಿಸಲಾಗಿದೆ. ಅಲ್ಲದೆ, ಮನೆಗೆ ಡ್ರಾಪ್ ಮಾಡುವ ನೆಪದಲ್ಲಿ ಆ ಯುವತಿ ಜತೆ ಅನುಚಿತವಾಗಿ ವರ್ತಿಸಿ ₹ 6 ಸಾವಿರ ಕಿತ್ತುಕೊಂಡು ಪರಾರಿಯಾಗಿದ್ದ ಕೃಷ್ಣಮೂರ್ತಿ ಎಂಬಾತನನ್ನು ಸುಲಿಗೆ (ಐಪಿಸಿ 384) ಹಾಗೂ ಮಹಿಳೆ ಗೌರವಕ್ಕೆ ಧಕ್ಕೆ (ಐಪಿಸಿ 354) ತಂದ ಆರೋಪದಡಿ ಬಂಧಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ತಿಳಿಸಿದರು.

‘ನಾನು ನಗರದ ಶಾಪಿಂಗ್ ಮಾಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಇತ್ತೀಚೆಗೆ ಸೋದರ ಸಂಬಂಧಿಯ ಮೂಲಕ ದಿನೇಶ್‌ನ ಪರಿಚಯವಾಗಿತ್ತು. ಮೇ 13ರ ರಾತ್ರಿ ಆತ ಕಾರಿನಲ್ಲಿ ಸುತ್ತಾಡಲು ಕರೆದ. ಪರಿಚಿತ ವ್ಯಕ್ತಿಯಾದ ಕಾರಣ ದಿನೇಶ್ ಜತೆ ತೆರಳಿದೆ. ಯಶವಂತಪುರ ಜಂಕ್ಷನ್‌ನಲ್ಲಿ ಆತನ ಸ್ನೇಹಿತ ಕೃಷ್ಣಮೂರ್ತಿ ಕೂಡ ಕಾರು ಹತ್ತಿದ’ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.

‘ಅವರಿಬ್ಬರೂ ಕಾರಿನಲ್ಲೇ ಮದ್ಯ ಕುಡಿದರು. ಬಲವಂತವಾಗಿ ನನಗೂ ಕುಡಿಸಿದರು. ಬಳಿಕ ತುಮಕೂರು ರಸ್ತೆಯ ಕಡೆಗೆ ಕಾರು ಚಾಲನೆ ಮಾಡಿದ ಅವರು, ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದರು. ಆ ನಂತರ ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಸಿ ₹ 6 ಸಾವಿರ ಕೊಟ್ಟು ಕಳುಹಿಸಿದರು’. ‘ಅಲ್ಲಿಂದ ಮನೆಗೆ ಮರಳಲು ಕ್ಯಾಬ್ ಹತ್ತಿದೆ. ಅದರ ಚಾಲಕ ಕೂಡ ಮಾರ್ಗಮಧ್ಯೆ ಚಾಕುವಿನಿಂದ ಬೆದರಿಸಿ, ನನ್ನ ಜತೆ ಅನುಚಿತವಾಗಿ ವರ್ತಿಸಿದ. ಅಲ್ಲದೆ, ಅವರು ಕೊಟ್ಟಿದ್ದ ₹ 6 ಸಾವಿರ ಕಿತ್ತುಕೊಂಡು, ಕಾರಿನಿಂದ ಕೆಳಗೆ ದಬ್ಬಿ ಪರಾರಿಯಾದ’ ಎಂದು ದೂರಿದ್ದಾರೆ.

ಆ ದಿನ ರಾತ್ರಿ ಠಾಣೆಗೆ ಬಂದ ಯುವತಿ, ಕ್ಯಾಬ್ ಚಾಲಕ ಹಣ ಕಿತ್ತುಕೊಂಡು ಹೋದ ಎಂದಷ್ಟೇ ದೂರು ಕೊಟ್ಟಿದ್ದರು. ಆಕೆ ಕುಡಿದ ಮತ್ತಿನಲ್ಲಿದ್ದ ಕಾರಣ ವಿಚಾರಣೆ ನಡೆಸಲೂ ಆಗಿರಲಿಲ್ಲ. ಸಿಬ್ಬಂದಿ ಹೊಯ್ಸಳ ವಾಹನದಲ್ಲೇ ಮನೆಗೆ ಬಿಟ್ಟು ಬಂದಿದ್ದರು. ಮರುದಿನ ವಿಚಾರಿಸಿದಾಗ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ದೂರಿದರು. ಮೊಬೈಲ್‌ ಕರೆಗಳ ವಿವರ ಆಧರಿಸಿ ಮೂವರನ್ನೂ ಬಂಧಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.