ADVERTISEMENT

ಸಾರಕ್ಕಿ ಕೆರೆಗೆ ಮತ್ತಷ್ಟು ಆಪತ್ತು: ಜಾರಿಯಾಗದ ಸೂಚನೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2017, 20:29 IST
Last Updated 21 ಜುಲೈ 2017, 20:29 IST
ಸಾರಕ್ಕಿ ಕೆರೆಯಂಗಳದಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಪಿಚ್‌ ಕಾಮಗಾರಿ
ಸಾರಕ್ಕಿ ಕೆರೆಯಂಗಳದಲ್ಲಿ ನಡೆಯುತ್ತಿರುವ ಕ್ರಿಕೆಟ್‌ ಪಿಚ್‌ ಕಾಮಗಾರಿ   

ಬೆಂಗಳೂರು: ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಗಡುವು ನೀಡಿದ ನಾಲ್ಕು ತಿಂಗಳ ಬಳಿಕವೂ ಸಾರಕ್ಕಿ ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಬಿಬಿಎಂಪಿ ಚಾಲನೆ ನೀಡಿಲ್ಲ. ಈ ನಡುವೆ, ಕೆರೆಯಂಗಳ ಮತ್ತಷ್ಟು ಒತ್ತುವರಿಯಾಗಿದೆ.

ಈ ಜಲಮೂಲವನ್ನು 2018ರ ಮೇ 31ರೊಳಗೆ ಪುನರುಜ್ಜೀವನ ಗೊಳಿಸಬೇಕು. ಕೂಡಲೇ ಕಾಮಗಾರಿ ಕೈಗೆತ್ತಿಕೊಳ್ಳಬೇಕು’ ಎಂದು ಪ್ರಾಧಿಕಾರ ಮಾರ್ಚ್‌ ತಿಂಗಳಲ್ಲಿ ಸೂಚನೆ ನೀಡಿತ್ತು. ‘₹6 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿಪಡಿಸಲು ಟೆಂಡರ್‌ ಕರೆದಿದ್ದೇವೆ. ರಾಜ್ಯ ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ಮೇ ಮೊದಲ ವಾರದಲ್ಲಿ ಕಾಮಗಾರಿ ಆರಂಭಿಸುತ್ತೇವೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಮಾಹಿತಿ ನೀಡಿದ್ದರು. ಆದರೆ, ಈವರೆಗೂ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.

ಕೆರೆಯಂಗಳದಲ್ಲಿದ್ದ 16 ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸುವುದಾಗಿ ಜಿಲ್ಲಾಡಳಿತ ಪ್ರಕಟಿಸಿತ್ತು. ಅವುಗಳು ಮತ್ತೆ ಒತ್ತುವರಿದಾರರ ಪಾಲಾಗಿವೆ ಎಂಬ ಆರೋಪ ಇದೆ. ‘ಈ ದೇವಸ್ಥಾನಗಳನ್ನು ಇಲಾಖೆಗೆ ಹಸ್ತಾಂತರಿಸಿಲ್ಲ’ ಎಂಬುದು ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಹೇಳಿಕೆ.

ADVERTISEMENT

ಕೆರೆ ಪಕ್ಕದ ಮೈದಾನದಲ್ಲಿ ಕಳೆದ ಕೆಲವು ದಿನಗಳಿಂದ ಕ್ರಿಕೆಟ್‌ ಪಿಚ್‌ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ‘ಅಲ್ಲೇ ಸಮೀಪ ಇರುವ ದೇವಸ್ಥಾನವನ್ನು ಜಿಲ್ಲಾಡಳಿತ ವಶಕ್ಕೆ ಪಡೆದಿತ್ತು. ಆಕ್ಸ್‌ಫರ್ಡ್‌ ಕಾಲೇಜಿನ ಕಟ್ಟಡವನ್ನು ಸ್ವಲ್ಪ ಒಡೆದು ಹಾಕಿತ್ತು. ಮೈದಾನವೂ ಕೆರೆಗೆ ಸೇರಿದೆ. ಆದರೂ ಪಿಚ್ ನಿರ್ಮಾಣ ಆಗುತ್ತಿದೆ. ಆದರೂ ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ನೀರಿನ ಹೋರಾಟಗಾರ ಕ್ಷಿತಿಜ್‌ ಅರಸ್‌ ಆರೋಪಿಸಿದರು.

‘ಬಿಬಿಎಂಪಿ ಕಳೆದ ವರ್ಷ ಅವೈಜ್ಞಾನಿಕವಾಗಿ ಕೋಡಿ ನಿರ್ಮಾಣ ಮಾಡಿತ್ತು. ಇದರಿಂದಾಗಿ ಕೆರೆಯಲ್ಲಿದ್ದ ಅಲ್ಪಸ್ವಲ್ಪ ನೀರೆಲ್ಲ ಖಾಲಿಯಾಗಿತ್ತು. ಈಗ ಕೆರೆ ಅಭಿವೃದ್ಧಿ ಮಾಡಲು ಮೀನಮೇಷ ಎಣಿಸುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬತ್ತಿಹೋದ ಕೆರೆ ಹಾಗೂ ಕುಂಟೆಗಳನ್ನು ಡಿನೋಟಿಫೈ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಸಾರಕ್ಕಿ ಕೆರೆಯನ್ನು ಸಂಪೂರ್ಣ ನಾಶ ಮಾಡಿ ಡಿನೋಟಿಫೈ ಮಾಡಲು ಹೊರಟಂತೆ ಇದೆ’ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ವೇದಿಕೆಯ ಸಂಚಾಲಕ  ಈಶ್ವರಪ್ಪ ಮಡಿವಾಳಿ ಅನುಮಾನ ವ್ಯಕ್ತಪಡಿಸಿದರು.

‘ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಜಿ. ವಿದ್ಯಾಸಾಗರ್‌ ಅವರು ಸಾರಕ್ಕಿಯ ಅಭಿವೃದ್ಧಿಗೆ ಹೆಚ್ಚಿನ ಆಸಕ್ತಿ ತೋರಿದ್ದರು. ಈ ಸಂಬಂಧ ಬಿಬಿಎಂಪಿ ಹಾಗೂ ಜಲಮಂಡಳಿ ಅಧಿಕಾರಿಗಳ ಜತೆಗೆ ನೀರಿನ ಮೂಲದಲ್ಲೇ ಸಭೆ ನಡೆಸಿದ್ದರು. ಕೆಲವೇ ದಿನಗಳಲ್ಲಿ ಅವರ ವರ್ಗಾವಣೆಯಾಯಿತು. ಈಗ ಸಾರಕ್ಕಿಯನ್ನು ಎಲ್ಲರೂ ಮರೆತಿದ್ದಾರೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಈಗ ಟೆಂಡರ್‌ ಕರೆದಿರುವ ಮೊತ್ತದಲ್ಲಿ ಕೆರೆಯ ಪಕ್ಕ ಕಾಲುವೆ ನಿರ್ಮಿಸಿ ಒಳಚರಂಡಿ ನೀರು ಕೆರೆಗೆ ಸೇರದಂತೆ ಪ್ರತ್ಯೇಕ ವ್ಯವಸ್ಥೆ ಮಾಡುವುದು, ಕೆರೆ ಸುತ್ತಲೂ ಬೇಲಿ ನಿರ್ಮಾಣ ಹಾಗೂ ಶೇ 30ರಷ್ಟು ಭಾಗ  ಹೂಳೆತ್ತುವ ಕಾಮಗಾರಿ ಮಾಡಲು ಸಾಧ್ಯ. ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದ್ದೇವೆ. ಶೀಘ್ರದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದರು.

‘ತಾತ್ಕಾಲಿಕವಾಗಿ ಎರಡು ಕಾಲುವೆಗಳನ್ನು ನಿರ್ಮಿಸಿ ಹೆಚ್ಚುವರಿ ನೀರು ಹೊರಹೋಗಲು ದಾರಿ ಮಾಡಿದ್ದೇವೆ. ಕೆರೆಗೆ ಸೇರಿದ ಜಾಗದಲ್ಲಿ 16 ದೇವಸ್ಥಾನಗಳು ಹಾಗೂ ಸಮುದಾಯ ಭವನಗಳು ತಲೆ ಎತ್ತಿವೆ. ಅವುಗಳನ್ನು ತೆರವು ಮಾಡಿದರೆ, ಹೆಚ್ಚಿನ ಅನುದಾನ ಸಿಕ್ಕಿದರೆ ಕೆರೆ ಅಂದವನ್ನು ಮತ್ತಷ್ಟು ಹೆಚ್ಚಿಸಬಹುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.