ADVERTISEMENT

‘ಸಾಲಗಾರರ ಕಾಟ: ಪತ್ನಿ ತವರು ಮನೆಗೆ’ 

ಆತ್ಮಹತ್ಯೆಗೆ ಯತ್ನಿಸಿದ ಓಲಾ ಟ್ಯಾಕ್ಸಿ ಚಾಲಕ ಶ್ರೀನಿವಾಸ್‌ ಅವರ ಅಳಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಪ್ರತಿಭಟನೆಯಿಂದಾಗಿ ಸೇವೆ ಸ್ಥಗಿತಗೊಳಿಸಿದ್ದ ಚಾಲಕರು, ಟ್ಯಾಕ್ಸಿಗಳನ್ನು ಓಲಾ ಕಚೇರಿ ಎದುರು ನಿಲ್ಲಿಸಿದ್ದರು  –ಪ್ರಜಾವಾಣಿ ಚಿತ್ರಗಳು
ಪ್ರತಿಭಟನೆಯಿಂದಾಗಿ ಸೇವೆ ಸ್ಥಗಿತಗೊಳಿಸಿದ್ದ ಚಾಲಕರು, ಟ್ಯಾಕ್ಸಿಗಳನ್ನು ಓಲಾ ಕಚೇರಿ ಎದುರು ನಿಲ್ಲಿಸಿದ್ದರು –ಪ್ರಜಾವಾಣಿ ಚಿತ್ರಗಳು   
ಬೆಂಗಳೂರು: ‘ಓಲಾ, ಉಬರ್‌ ಕಂಪೆನಿಗಳ ವರ್ತನೆಯಿಂದ ಕುಟುಂಬವೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಟ್ಯಾಕ್ಸಿ ಖರೀದಿಗೆ ಸಾಲ ಕೊಟ್ಟಿದ್ದ ಜನ, ಅದರ ವಸೂಲಿಗಾಗಿ ನಿರಂತರವಾಗಿ ಮನೆಗೆ ಬಂದು ಹೋಗುತ್ತಿದ್ದಾರೆ. ಅವರ ಕಾಟ ಹೆಚ್ಚಾಗಿದ್ದರಿಂದ ಪತ್ನಿ, ಮಕ್ಕಳನ್ನು ತವರು ಮನೆಗೆ ಕಳುಹಿಸಿದ್ದೇನೆ’.
 
ಇದು ಮೊಬೈಲ್‌ ಆ್ಯಪ್‌ ಆಧರಿತ ಟ್ಯಾಕ್ಸಿ ಸೇವಾ ಕಂಪೆನಿಗಳ ವಿರುದ್ಧ ಚಾಲಕರು ಹಾಗೂ ಮಾಲೀಕರು ಗುರುವಾರ (ಫೆ.16) ನಡೆಸಿದ್ದ ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಚಾಲಕ ಶ್ರೀನಿವಾಸ್‌ ಅವರ ಅಳಲು. ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಶುಕ್ರವಾರ ಮನೆಗೆ ಹೋದರು.
 
ಈ ವೇಳೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಸಾಲ ಮಾಡಿ ಟ್ಯಾಕ್ಸಿ ಖರೀದಿಸಿದ್ದೆ. ಈಗ ಪ್ರೋತ್ಸಾಹ ಧನವನ್ನೂ ನೀಡದೆ ಸಂಪಾದನೆಯ ಮೂಲವನ್ನೇ ಕಂಪೆನಿಯವರು ಕಿತ್ತುಕೊಂಡಿದ್ದಾರೆ. ಇದರಿಂದ ಸಾಲ ಮರುಪಾವತಿ ಕಷ್ಟವಾಗಿದೆ’  ಎಂದು ದೂರಿದರು.
 
‘ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ನೀಡುತ್ತಿಲ್ಲ ಎಂದು ಹೇಳಿ ನನ್ನ ಸೇವಾ ಉಪಕರಣವನ್ನು ಏಳು ತಿಂಗಳ ಹಿಂದೆಯೇ ಬ್ಲಾಕ್‌ ಮಾಡಿದ್ದಾರೆ. ಪುನಃ ಸೇವೆ ಒದಗಿಸಲು ಅವಕಾಶ ನೀಡುವಂತೆ ಕಂಪೆನಿಗೆ ಅಲೆದು ಸಾಕಾಗಿದೆ. ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ನಿರ್ಧರಿಸಿದ್ದೆ’ ಎಂದು ಕಣ್ಣೀರಿಟ್ಟರು.
 
‘ಕಂಪೆನಿಯ ವಿರುದ್ಧ ಎಚ್‌ಎಎಲ್‌ ಪೊಲೀಸ್‌ ಠಾಣೆಗೆ ಕಳೆದ ತಿಂಗಳಷ್ಟೇ ದೂರು ಕೊಟ್ಟಿದ್ದೆ. ಪೊಲೀಸರು  ಕಂಪೆನಿ ಪ್ರತಿನಿಧಿಗಳನ್ನು ಸಂಪರ್ಕಿಸಿ, ಸಮಸ್ಯೆ ಬಗೆಹರಿಸುವಂತೆ ಹೇಳಿದ್ದರು. ಆದರೆ, ಪ್ರತಿನಿಧಿಗಳು ಯಾವುದೇ ರೀತಿಯಲ್ಲೂ ಸ್ಪಂದಿಸಿಲ್ಲ’ ಎಂದು ಶ್ರೀನಿವಾಸ್‌ ದೂರಿದರು.
 
ಪ್ರಯಾಣಿಕರಿಗೆ ₹50, ಚಾಲಕರಿಗೆ ₹500 ದಂಡ: ಕಂಪೆನಿಗಳ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮತ್ತೊಬ್ಬ ಚಾಲಕ ರಿಯಾಜ್‌ ಅಹ್ಮದ್‌, ‘ಆ್ಯಪ್‌ ಮೂಲಕ ಬುಕ್‌ ಮಾಡಿದ ಟ್ಯಾಕ್ಸಿಯನ್ನು ಏಕಾಏಕಿ ರದ್ದು ಮಾಡಿದರೆ,  ಅಂಥ ಪ್ರಯಾಣಿಕರಿಗೆ ₹50 ದಂಡ ಹಾಗೂ ಬುಕ್ಕಿಂಗ್‌ ಪಡೆದಿದ್ದ ಕಾರು ಚಾಲಕರಿಗೆ ₹500 ದಂಡ ಹಾಕುತ್ತಿದ್ದಾರೆ’ ಎಂದು  ಆಕ್ರೋಶ ವ್ಯಕ್ತಪಡಿಸಿದರು.
 
‘ಟ್ಯಾಕ್ಸಿಗಳ ಸೇವಾ ಗುಣಮಟ್ಟವನ್ನು ಚುಕ್ಕೆಗಳ ಮೂಲಕ ಮೌಲ್ಯಮಾಪನ ಮಾಡಲಾಗುತ್ತಿದೆ. ಪ್ರಯಾಣಿಕರು ಐದು ಚುಕ್ಕೆ ನೀಡಿದರೆ  ‘ಉತ್ತಮ ಸೇವೆ’ ಎಂದು ಪರಿಗಣಿಸಲಾಗುತ್ತದೆ. ಮೂರಕ್ಕಿಂತ ಕಡಿಮೆ ಚುಕ್ಕೆ ಕೊಟ್ಟರೆ ‘ಸೇವೆ ಸರಿ ಇಲ್ಲ’ ಎಂದು ಹೇಳಿ ಅಂಥ ಚಾಲಕರಿಗೆ ₹2ರಿಂದ ₹3 ಸಾವಿರದವರೆಗೆ  ದಂಡ ವಿಧಿಸಲಾಗುತ್ತಿದೆ’ ಎಂದು ತಿಳಿಸಿದರು.
 
ಪ್ರೋತ್ಸಾಹ ಧನಕ್ಕೆ ‘18 ಟ್ರಿಪ್‌’ನಿಂದ ಕತ್ತರಿ: ‘ಕಂಪೆನಿ ಆರಂಭವಾದಾಗ ಪ್ರತಿದಿನಕ್ಕೆ 10 ಟ್ರಿಪ್‌ ಮಾಡಿದರೆ ಪ್ರೋತ್ಸಾಹ ಧನ ಸಿಗುತ್ತಿತ್ತು. ಈಗ 18 ಟ್ರಿಪ್‌ ನಿಗದಿ ಮಾಡಿದ್ದು, ನಗರದ ಸಂಚಾರ ದಟ್ಟಣೆಯಲ್ಲಿ ಅಷ್ಟು ಟ್ರಿಪ್‌ ಮಾಡಲು ಆಗುತ್ತಿಲ್ಲ. ಪ್ರೋತ್ಸಾಹ ಧನವೂ ದಕ್ಕುತ್ತಿಲ್ಲ’ ಎಂದು ಚಾಲಕ ಅಶ್ಫಕ್‌ ತಿಳಿಸಿದರು.
 
‘ತಿಂಗಳಿನಲ್ಲಿ ಒಂದು ದಿನವಾದರೂ 18 ಟ್ರಿಪ್‌ ಮಾಡಲೇಬೇಕು. ಇಲ್ಲದಿದ್ದರೆ ₹2,200 ದಂಡ ವಿಧಿಸುತ್ತಿದ್ದಾರೆ. ಮೊದಲು ಎಲ್ಲ ಖರ್ಚುಗಳನ್ನು ತೆಗೆದು ಪ್ರತಿ ತಿಂಗಳು ₹20ರಿಂದ ₹30 ಸಾವಿರ ಉಳಿಯುತ್ತಿತ್ತು.  ಈಗ ಸಂಪಾದನೆಯಾದ ಹಣವೆಲ್ಲ ಕಾರಿನ ನಿರ್ವಹಣೆಗೆ ಖಾಲಿಯಾಗುತ್ತಿದೆ. ಇನ್ನು ಕುಟುಂಬ ಸಾಗಿಸುವುದು ಹೇಗೆ’ ಎಂದು ಅಶ್ಫಕ್‌ ಪ್ರಶ್ನಿಸಿದರು.
 
ಪ್ರಯಾಣಿಕರಿಗೆ ತೊಂದರೆ: ‘ಚಾಲಕರು ಹಾಗೂ ಮಾಲೀಕರ ಪ್ರತಿಭಟನೆಯಿಂದ ಟ್ಯಾಕ್ಸಿಗಳನ್ನು ನೆಚ್ಚಿಕೊಂಡಿದ್ದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ’ ಎಂದು ಬಸವೇಶ್ವರನಗರದ ಆರ್.ಕಿರಣ್‌ ಹೇಳಿದರು.
 
‘ಪೀಣ್ಯದಲ್ಲಿರುವ ಖಾಸಗಿ ಕಂಪೆನಿಯ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ.  ಪ್ರತಿದಿನವೂ ಟ್ಯಾಕ್ಸಿಯಲ್ಲಿ ಕಚೇರಿಗೆ ಹೋಗಿ ಬರುತ್ತೇನೆ. ಚಾಲಕರು ಪ್ರತಿಭಟನೆ ನಡೆಸುವ ದಿನದಂದು ಟ್ಯಾಕ್ಸಿ ಸಿಗುವುದೇ ಕಷ್ಟ. ಅಂತಹ ಸಂದರ್ಭದಲ್ಲಿ ಆಟೊಗಳೇ ಗತಿ’ ಎಂದು ಹೇಳಿದರು.
 
ಇನ್ನೊಬ್ಬ ಗ್ರಾಹಕ ಮಲ್ಲೇಶ್ವರದ ರಾಮಪ್ರಸಾದ್‌ ಮಾತನಾಡಿ, ‘ಟ್ಯಾಕ್ಸಿ ಸೇವಾ ಕಂಪೆನಿಗಳ ನಡುವೆ ಪೈಪೋಟಿ ಶುರುವಾಗಿದ್ದು, ಚಾಲಕರಿಗೆ ಕಷ್ಟವಾಗಿದೆ.   ಗ್ರಾಹಕರಿಗೆ ಹೆಚ್ಚು ಅನುಕೂಲವಾಗಿದೆ’ ಎಂದು ಹೇಳಿದರು.
 
‘ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಿದ್ದರಿಂದ ದರದಲ್ಲಿ ಇಳಿಕೆಯಾಗಿದೆ. ಚಾಲ್ತಿಯಲ್ಲಿರುವ ಕಾನೂನಿನನ್ವಯ ಸಾರಿಗೆ ಇಲಾಖೆಯು ಪ್ರತಿ ಕಿ.ಮೀ.ಗೆ ₹16 (ನಾನ್‌ ಎ.ಸಿ. ) ಹಾಗೂ ₹19 (ಎ.ಸಿ) ನಿಗದಿ ಮಾಡಿದೆ. ಆದರೆ, ಕಂಪೆನಿಗಳು  ಪ್ರತಿ ಕಿ.ಮೀ.ಗೆ ₹10ರಿಂದ ₹12 ಮಾತ್ರ ನಿಗದಿ ಮಾಡಿವೆ. ಇತ್ತೀಚೆಗೆ ಓಲಾ ಕಂಪೆನಿಯು ಶೇ 25ರಷ್ಟು ಪ್ರಯಾಣ ದರ ಇಳಿಕೆ ಮಾಡಿದ್ದು, ಆ ಮೂಲಕ ಪ್ರತಿ ಕಿ.ಮೀ.ಗೆ ₹8 ಆಗಿದೆ’ ಎಂದು ತಿಳಿಸಿದರು.
 
**
ಫೆ. 21ರವರೆಗೆ ಸೇವೆಗೆ ನಿರ್ಧಾರ
‘ಓಲಾ ಹಾಗೂ ಉಬರ್‌ ಕಂಪೆನಿಯ ಉನ್ನತ ಅಧಿಕಾರಿಗಳು, ಫೆ. 21ರಂದು ಸಭೆ ನಡೆಸಿ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರಿಂದ ಗುರುವಾರ ಸಂಜೆಯೇ ಪ್ರತಿಭಟನೆ ಕೈಬಿಟ್ಟಿದ್ದೇವೆ. ಫೆ. 21ರವರೆಗೂ ಸೇವೆ ನೀಡಲು ನಿರ್ಧರಿಸಿದ್ದೇವೆ’ ಎಂದು ಕಂಪೆನಿಗಳ ಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ತನ್ವೀರ್‌ ಪಾಷಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರದಲ್ಲಿ ಲಕ್ಷಕ್ಕೂ ಹೆಚ್ಚು ಟ್ಯಾಕ್ಸಿಗಳಿದ್ದು, ಅವುಗಳಿಗೆ ಮೊದಲಿನಂತೆ ಪ್ರೋತ್ಸಾಹ ಧನ ನೀಡಬೇಕು. ವಿನಾಕಾರಣ ದಂಡ ವಿಧಿಸಬಾರದು. ಹೊರ ರಾಜ್ಯಗಳ ಚಾಲಕರ ನೇಮಕವನ್ನು ಸ್ಥಗಿತಗೊಳಿಸಬೇಕು ಎಂಬುದು ನಮ್ಮ  ಬೇಡಿಕೆಗಳಾಗಿವೆ’  ಎಂದು ಹೇಳಿದರು. 

‘ಪ್ರತಿಭಟನೆ ವೇಳೆ ಆತ್ಮಹತ್ಯೆಗೆ ಯತ್ನಿಸಿದ್ದ ಚಾಲಕ ಶ್ರೀನಿವಾಸ್‌ ಚೇತರಿಸಿಕೊಂಡಿದ್ದಾರೆ. ಫಿನಾಯಿಲ್‌ ಕುಡಿದಿದ್ದ ಇನ್ನೊಬ್ಬ ಚಾಲಕ ಮೋಹನ್‌ ಅವರ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.
 
**
ಬೇಡಿಕೆ ಈಡೇರಿಸುವುದು  ಕಂಪೆನಿಗಳಿಗೆ ಬಿಟ್ಟಿದ್ದು. ಅವರಿಬ್ಬರ ಮಧ್ಯೆ ಸಂಧಾನ ನಡೆಸಿದರೂ ಹೊಂದಾಣಿಕೆ ಮಾಡಿಕೊಳ್ಳುತ್ತಿಲ್ಲ. ಮತ್ತೊಂದು ಸಭೆ ನಡೆಸಲು ದಿನಾಂಕ ನಿಗದಿಪಡಿಸುತ್ತೇವೆ
-ಎಂ.ಕೆ.ಅಯ್ಯಪ್ಪ, ಆಯುಕ್ತ,
ಸಾರಿಗೆ ಇಲಾಖೆ
 
**
ಪ್ರತಿಕ್ರಿಯೆ ನೀಡಲು ನಿರಾಕರಣೆ
ಸದ್ಯದ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಲು ಓಲಾ ಹಾಗೂ ಉಬರ್‌ ಕಂಪೆನಿಗಳ ಪ್ರತಿನಿಧಿಗಳು ನಿರಾಕರಿಸಿದ್ದಾರೆ. 

ಕಂಪೆನಿಯ ಪ್ರತಿನಿಧಿಯೊಬ್ಬರನ್ನು ಸಂಪರ್ಕಿಸಿದಾಗ, ‘ನಾವು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದರೆ ಕಳುಹಿಸಿಕೊಡುತ್ತೇವೆ’ ಎಂದಷ್ಟೇ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.