ADVERTISEMENT

ಸಾಹಿತ್ಯ ಪ್ರಕಾರಗಳ ಮಿಶ್ರಣದಿಂದ ಲಾಭ

ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2015, 20:17 IST
Last Updated 21 ಜೂನ್ 2015, 20:17 IST

ಬೆಂಗಳೂರು: ‘ಬೇರೆ ಬೇರೆ ಸಾಹಿತ್ಯ ಪ್ರಕಾರಗಳನ್ನು ಒಂದಕ್ಕೊಂದು ಮಿಶ್ರಣ ಮಾಡಿ, ಸಾಹಿತ್ಯದ ರೂಪಕ್ಕೆ ಹಿಂದೆ ಇದ್ದ ಪಾವಿತ್ರ್ಯ, ಕಟ್ಟುನಿಟ್ಟು ಮುರಿಯಬೇಕು ಎಂಬ ಆಸೆ ಇತ್ತೀಚೆಗೆ ಕಂಡು ಬರುತ್ತಿದೆ. ಇದು ಈ ಕಾಲದ ಪ್ರಭಾವಶಾಲಿ ಬೆಳವಣಿಗೆ’ ಎಂದು ವಿಮರ್ಶಕ ಗಿರಡ್ಡಿ ಗೋವಿಂದರಾಜ ಅಭಿಪ್ರಾಯಪಟ್ಟರು.

ಅಂಕಿತ ಪ್ರಕಾಶನ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಕವಿ ಎಚ್‌.ಎಸ್‌.ವೆಂಕಟೇಶ ಮೂರ್ತಿ ಅವರ ‘ಸುನೀತಭಾವ’ (ಸಾನೆಟ್ಟುಗಳು), ‘ಎಲ್ಲ ನೆನಪಾಗುತಿದೆ’ (ಆತ್ಮಕಥನ ಸ್ವರೂಪದ ಬರಹಗಳು) ಮತ್ತು ಕತೆಗಾರ ಶ್ರೀಧರ ಬಳಗಾರ ಅವರ ‘ಈಸಾಡತಾವ ಜೀವಾ’ (ಕಥಾ ಸಂಕಲನ) ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಹೊಸ ಬೆಳವಣಿಗೆಯಿಂದ ಅನೇಕ ಲಾಭಗಳಿವೆ. ಒಂದೇ ಪ್ರಕಾರಕ್ಕೆ ಕಟ್ಟುಬಿದ್ದರೆ ಬರವಣಿಗೆ ಸೀಮಿತವಾಗುತ್ತದೆ. ಒಡೆದು ಮಿಶ್ರಣ ಮಾಡುವ ಪ್ರಕ್ರಿಯೆಯಿಂದ ಸಾಹಿತ್ಯ ಪ್ರಕಾರಗಳು ಶ್ರೀಮಂತಗೊಂಡು, ಬರವಣಿಗೆಯಲ್ಲಿ ಮುಕ್ತತೆಗೆ ಹೆಚ್ಚು ಅವಕಾಶ ಸಿಗುತ್ತದೆ’ ಎಂದು ಹೇಳಿದರು.

‘ವೆಂಕಟೇಶಮೂರ್ತಿ ಅವರ ಬರವಣಿಗೆ ಮಾತ್ರವಲ್ಲ, ಇಡೀ ಜೀವನವನ್ನು ಗ್ರಹಿಸುವ ರೀತಿಯೇ ಕಾವ್ಯಾತ್ಮಕವಾಗಿದೆ. ‘ಎಲ್ಲ ನೆನಪಾಗುತಿದೆ’  ಎಂಬ ಅವರ ಆತ್ಮಕಥನದ ಮೂರನೇ ಭಾಗವೂ ಆತ್ಮಕತೆಗೆ ಇರಬೇಕಾದ ಕಾದಂಬರಿ ರೂಪದ ನಿರಂತರತೆಯನ್ನು ಮುರಿಯುವ ಬರವಣಿಗೆಯಿಂದ ಕೂಡಿದೆ’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ವಿಮರ್ಶಕ ಎಚ್‌.ಎಸ್‌. ರಾಘವೇಂದ್ರರಾವ್‌ ಮಾತನಾಡಿ,  ‘ಸುನೀತಭಾವ’ದೊಳಗೆ ರೂಪಕಗಳ ಮಾಲೆಗಳಂತಿರುವ ಪ್ರತಿ ಸುನೀತಗಳಲ್ಲಿ ಸಂಶಯ, ಪಕ್ಷಪಾತ, ಸ್ವಪ್ರತಿಷ್ಠೆ, ಆತ್ಮರತಿ ಹೆಚ್ಚುತ್ತಿರುವ ಪ್ರಸ್ತುತ ಕಾಲಘಟ್ಟಕ್ಕೆ ಬೇಕಾದ ಔಷಧ ಗುಣಗಳಿವೆ. ಮನುಷ್ಯ ಮಾದರಿಗಳ ಅನ್ವೇಷಣೆ ಸಾಧ್ಯತೆಗಳಿವೆ’ ಎಂದು ವಿಶ್ಲೇಷಿಸಿದರು.

‘ಈಸಾಡತಾವ ಜೀವಾ’ ಪುಸ್ತಕ ಕುರಿತು ವಿಮರ್ಶಕ ಎಸ್.ಆರ್. ವಿಜಯಶಂಕರ್‌ ಮಾತನಾಡಿ, ‘ಕಾವ್ಯದ ಗುಣ ಹೊಂದಿರುವ ಶ್ರೀಧರ ಅವರ ಗದ್ಯದಲ್ಲಿ ಸಮಾಜದಲ್ಲಿರುವ ಒತ್ತಡಗಳು, ಸ್ವಾತಂತ್ರ್ಯಾಪಹರಣ ಕುರಿತ ಮೆಲುದನಿಯ ತಣ್ಣನೆಯ ನಿರೂಪಣೆ ಇದೆ’ ಎಂದು ಅಭಿಪ್ರಾಯಪಟ್ಟರು.

ಶ್ರೀಧರ ಬಳಗಾರ ಮಾತನಾಡಿ, ‘ನೆನಪುಗಳನ್ನು ನಾಶ ಮಾಡುವ ಅಮಾನುಷವಾದ, ವಸ್ತುನಿಷ್ಠ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನೆನಪುಗಳು ಇಲ್ಲದಿದ್ದರೆ ನಾವು ಮಾನವೀಯತೆಯಿಂದ ಮನುಷ್ಯರಾಗಿ ವರ್ತಿಸುವುದಾದರೂ ಹೇಗೆ?  ಕತೆಗಳ ಮೂಲಕ ಜಗತ್ತಿನ ಸಂಕಟ ಅರ್ಥೈಸಿಕೊಂಡಾಗ ಮಾತ್ರ ಮಾನವೀಯತೆಯಿಂದ ವರ್ತಿಸಲು ಸಾಧ್ಯ’ ಎಂದು ಪ್ರತಿಪಾದಿಸಿದರು.

ತಮ್ಮ ಬದುಕು ಮತ್ತು ಬರಹದಿಂದ  ನನ್ನ ಮೇಲೆ ಪ್ರಭಾವ ಬೀರಿದ, ಮನಸ್ಸನ್ನು ಆರ್ದ್ರಗೊಳಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಕ್ಕಾಗಿ 70 ಸಾನೆಟ್ಟುಗಳನ್ನು ಬರೆದಿರುವೆ.
ಎಚ್‌.ಎಸ್‌.ವೆಂಕಟೇಶಮೂರ್ತಿ,
ಕವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.