ADVERTISEMENT

ಸಿಕ್ಕಿಬಿದ್ದ ನಕಲಿ ಕ್ರೆಡಿಟ್ ಕಾರ್ಡ್ ವಂಚಕರು

​ಪ್ರಜಾವಾಣಿ ವಾರ್ತೆ
Published 5 ಮೇ 2016, 19:37 IST
Last Updated 5 ಮೇ 2016, 19:37 IST
ಸಿಕ್ಕಿಬಿದ್ದ ನಕಲಿ ಕ್ರೆಡಿಟ್ ಕಾರ್ಡ್ ವಂಚಕರು
ಸಿಕ್ಕಿಬಿದ್ದ ನಕಲಿ ಕ್ರೆಡಿಟ್ ಕಾರ್ಡ್ ವಂಚಕರು   

ಬೆಂಗಳೂರು:  ಸಾರ್ವಜನಿಕರ ಬ್ಯಾಂಕ್ ಖಾತೆಯ ವಿವರಗಳನ್ನು ಕದ್ದು ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳನ್ನು ತಯಾರಿಸಿ ಹಣ ಡ್ರಾ ಮಾಡುತ್ತಿದ್ದ ವಂಚಕರ ಜಾಲ ಮತ್ತೊಮ್ಮೆ ಸಿಐಡಿ ಸೈಬರ್ ಅಪರಾಧ ಪೊಲೀಸರ ಬಲೆಗೆ ಬಿದ್ದಿದೆ.

‘ತಲಘಟ್ಟಪುರದ ಡಿ.ಕೆ.ಕಿರಣ್ (34) ಹಾಗೂ ಕಸುವನಹಳ್ಳಿಯ ನೀತಾ ಅಲಿಯಾಸ್ ಸೋನಿಯಾ (33) ಅವರನ್ನು ಬಂಧಿಸಲಾಗಿದೆ. ಜಾಲದ ಮುಖಂಡ ನಾದ ನೀತಾಳ ಪತಿ ಮನೋಜ್‌ಕುಮಾರ್ (41) ತಲೆಮರೆಸಿಕೊಂಡಿದ್ದಾನೆ’ ಎಂದು ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನೀತಾ–ಮನೋಜ್ ದಂಪತಿ ವಿರುದ್ಧ ಬೆಂಗಳೂರು ಹಾಗೂ ಚೆನ್ನೈನಲ್ಲಿ ಒಟ್ಟು 12 ಪ್ರಕರಣಗಳು ದಾಖಲಾಗಿವೆ. 2015ರ ಜೂನ್‌ನಲ್ಲಿ ಇವರು ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ದಂಪತಿ, ಮತ್ತೆ ಅದೇ ದಂಧೆಯಲ್ಲಿ ತೊಡಗಿದ್ದರು’ ಎಂದು ಮಾಹಿತಿ ನೀಡಿದರು.

ವಿಮಾನದಲ್ಲಿ ಬಂದಳು:  ‘ಆನ್‌ಲೈನ್‌ ವಂಚನೆ ಪ್ರಕರಣದಲ್ಲಿ ಭಾಗಿಯಾಗಿ ಬಿಡುಗಡೆಯಾದವರ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಆಗ ನೀತಾ ದೆಹಲಿಯಿಂದ ವಿಮಾನದಲ್ಲಿ ನಗರಕ್ಕೆ ಬರುತ್ತಿರುವ ಮಾಹಿತಿ ಸಿಕ್ಕಿತು. ಆ ಸುಳಿವು ಆಧರಿಸಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ವಶಕ್ಕೆ ಪಡೆಯಲಾಯಿತು’ ಎಂದು ತನಿಖಾಧಿಕಾರಿಗಳು ತಿಳಿಸಿದರು.

‘ವಿಚಾರಣೆ ವೇಳೆ ನೀತಾ ನೀಡಿದ ಮಾಹಿತಿ ಆಧರಿಸಿ ಕಸುವನಹಳ್ಳಿ ಯಲ್ಲಿರುವ ಆಕೆಯ ಮನೆ ಮೇಲೆ ದಾಳಿ ನಡೆಸಲಾಯಿತು. ಅಲ್ಲಿ ಮತ್ತೊಬ್ಬ ಆರೋಪಿ ಕಿರಣ್ ಸಿಕ್ಕಿಬಿದ್ದ.’

‘ಮನೆಯಲ್ಲಿದ್ದ 2,700ಕ್ಕೂ ಅಧಿಕ ಖಾಲಿ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಸ್ಕಿಮ್ಮಿಂಗ್, ಎಂಬೋಸಿಂಗ್, ಥರ್ಮಲ್ ಪ್ರಿಂಟಿಂಗ್, ಇ.ಡಿ.ಸಿ ಸೇರಿ ನಕಲಿ ಕಾರ್ಡ್‌ ತಯಾರಿಕೆಗೆ ಬಳಸುತ್ತಿದ್ದ 46 ಯಂತ್ರಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, ಆಡಿ ಕ್ಯೂ– 7 ಹಾಗೂ ಫೋರ್ಡ್‌ ಇಕೋ ಸ್ಪೋರ್ಟ್‌ ಕಾರುಗಳನ್ನೂ ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

ಮಲೇಷ್ಯಾ ನಂಟು:  ‘ಡಿಪ್ಲೊಮಾ ಹಾಗೂ ಬಿಎ ಪದವೀಧರನಾಗಿರುವ ರಾಜಸ್ಥಾನ ಮೂಲದ ಮನೋಜ್,  14 ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದಾನೆ. ಚೆನ್ನೈ ಪೊಲೀಸರು 2002ರಲ್ಲಿ ಈತನ ವಿರುದ್ಧ ಮೊದಲ ಪ್ರಕರಣ ದಾಖಲಿಸಿದ್ದರು. 2003ರಲ್ಲಿ ಕ್ರೆಡಿಟ್ ಕಾರ್ಡ್ ವಂಚನೆ ಸಂಬಂಧ ಮಹಾರಾಷ್ಟ್ರ ಪೊಲೀಸರಿಗೆ ಸಿಕ್ಕಿ ಬಿದ್ದ ಮನೋಜ್, ಒಂದು ವರ್ಷ ಜೈಲು ಶಿಕ್ಷೆಯನ್ನೂ ಅನುಭವಿಸಿದ್ದ’ ಎಂದು ಹೇಳಿದರು.

‘2005ರಲ್ಲಿ ನೀತಾಳನ್ನು ಮದುವೆಯಾಗುವ ಆರೋಪಿ, ಚೆನ್ನೈನ ಬಿಪಿಒ ಕಂಪೆನಿಗೆ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ನಂತರದ ಐದು ವರ್ಷ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗದ ಈತ, 2010ರಿಂದ ಪುನಃ ಹಳೆ ದಂಧೆಯನ್ನು ಪ್ರಾರಂಭಿಸುತ್ತಾನೆ.’

‘ಈ ಸಂಬಂಧ 2011 ಹಾಗೂ 2012ರಲ್ಲಿ ಮತ್ತೆ ಏಳು ಪ್ರಕರಣಗಳು ದಾಖಲಾಗುತ್ತವೆ. ಮನೋಜ್‌ನ ಉಪಟಳ ಹೆಚ್ಚಾಗಿದ್ದರಿಂದ ಚೆನ್ನೈ ಸಿಸಿಬಿ ಹಾಗೂ ತಮಿಳುನಾಡಿನ ಮಡಿಪಾಕ್ಕಂ ಪೊಲೀಸರು ಪ್ರತ್ಯೇಕವಾಗಿ ಆತನ ಮೇಲೆ ಗೂಂಡಾ ಕಾಯ್ದೆ ಪ್ರಯೋಗಿಸುತ್ತಾರೆ. ಹೀಗೆ ಪೊಲೀಸರು ತನ್ನ ಹಿಂದೆ ಬಿದ್ದ ಬಳಿಕ ಆತ ಪತ್ನಿ ಜತೆ 2012ರಲ್ಲಿ ಮಲೇಷ್ಯಾಗೆ ಹಾರುತ್ತಾನೆ.’

‘ಅಲ್ಲಿ ಮನೋಜ್‌ಗೆ ಚೆನ್ನೈ ಮೂಲದ ಅಬ್ದುಲ್ಲಾ ಎಂಬಾತನ ಪರಿಚಯವಾಗುತ್ತದೆ. ನಕಲಿ ಕ್ರೆಡಿಟ್/ಡೆಬಿಟ್ ಕಾರ್ಡ್ ತಯಾರಿಸುವ  ಬಗ್ಗೆ ಇಬ್ಬರೂ ಒಂದು ವರ್ಷ ತರಬೇತಿ ಪಡೆಯುತ್ತಾರೆ. ಈ ಹಂತದಲ್ಲಿ ಅವರಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಹೊಂದಿರುವ ಹ್ಯಾಕರ್‌ಗಳ ಜತೆ ನಂಟು ಬೆಳೆಯುತ್ತದೆ.’
‘ಆ ಹ್ಯಾಕರ್‌ಗಳಿಂದ ಸಾವಿರಾರು ಖಾಲಿ ಕ್ರೆಡಿಟ್ ಕಾರ್ಡ್‌ಗಳು, ಎಂಬೋಸಿಂಗ್ ಯಂತ್ರ, ಸ್ಕಿಮ್ಮಿಂಗ್ ಯಂತ್ರಗಳನ್ನು ಖರೀದಿಸಿಕೊಂಡು 2013ರಲ್ಲಿ ನಗರಕ್ಕೆ ಬರುವ ದಂಪತಿ, ಸರ್ಜಾಪುರ ರಸ್ತೆಯ ಬಾಡಿಗೆ ಮನೆಯಲ್ಲಿ ಉಳಿದುಕೊಳ್ಳುತ್ತಾರೆ’ ಎಂದು ಮಾಹಿತಿ ನೀಡಿದರು.

ಸಿಸಿಬಿ ಬಂಧನ:  ‘ನಗರಕ್ಕೆ ಬಂದ ನಂತರ ಮನೋಜ್, ಎಚ್‌ಎಸ್‌ಆರ್‌ ಲೇಔಟ್ ಒಂದನೇ ಹಂತದಲ್ಲಿ ‘ಲುಕ್ಟಾನ್‌ ಸಲೂನ್‌’ (ಕ್ಷೌರದಂಗಡಿ) ಪ್ರಾರಂಭಿಸಿದ್ದ. ಸಲೂನ್‌ಗೆ ಬರುತ್ತಿದ್ದ ಗ್ರಾಹಕರು ಕ್ರೆಡಿಟ್‌ ಕಾರ್ಡ್‌ ಬಳಸಿದಾಗ, ಅವರಿಗೆ ತಿಳಿಯದಂತೆ ಸ್ಕಿಮ್ಮಿಂಗ್ ಯಂತ್ರದ ಮೂಲಕ ಮಾಹಿತಿ ಪಡೆದುಕೊಳ್ಳುತ್ತಿದ್ದ. ನಂತರ ಆ ಕಾರ್ಡ್‌ನ ವಿವರಗಳನ್ನು ಖಾಲಿ ಕಾರ್ಡ್‌ಗೆ ತುಂಬಿ ಹಣ ಡ್ರಾ ಮಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಈತನನ್ನು ಬಂಧಿಸಿದ್ದರು’ ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಯವೈಖರಿ ಹೇಗೆ?: ‘ಪೆಟ್ರೋಲ್ ಬಂಕ್, ಮಾಲ್, ಹೋಟೆಲ್ ಮತ್ತಿತರ ಕಡೆ ಗ್ರಾಹಕರು ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸುವ ಕಡೆ ಏಜೆಂಟರ್‌ಗಳ ಮೂಲಕ ಆರೋಪಿಗಳು ಕಾರ್ಡ್‌ಗಳ ವಿವರ ಸಂಗ್ರಹಿಸುತ್ತಾರೆ. ಅಲ್ಲದೇ ಅಂತರರಾಷ್ಟ್ರೀಯ ಹ್ಯಾಕರ್‌ಗಳೂ ಇವರಿಗೆ ಕಾರ್ಡ್‌ಗಳ ಮಾಹಿತಿ ರವಾನಿಸುತ್ತಾರೆ.’

‘ವಿವರ ತಲುಪಿದ ನಂತರ ಇವರು ಸ್ಕಿಮ್ಮಿಂಗ್ ಯಂತ್ರ ಬಳಸಿ ಅಸಲಿ ಕಾರ್ಡ್‌ನ ಮಾಹಿತಿಯನ್ನು ನಕಲಿ ಕಾರ್ಡ್‌ಗೆ ವರ್ಗಾಯಿಸುತ್ತಾರೆ. ಹೀಗೆ ಸಿದ್ಧವಾದ ಕಾರ್ಡ್‌ನಿಂದ ಎಟಿಎಂಗಳಲ್ಲಿ ಹಣ ಡ್ರಾ ಮಾಡುತ್ತಾರೆ.

ಬಳಿಕ ಕಳ್ಳ ವ್ಯವಹಾರಕ್ಕೆ ಬಳಸಲಾಗುವ ‘ಡಾರ್ಕ್ ವೆಬ್’  ವೆಬ್‌ಸೈಟ್ ಮೂಲಕ ತಮ್ಮ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ.’ ‘ಈ ಜಾಲವು ಕ್ರೆಡಿಟ್ ಕಾರ್ಡ್‌ನ ಮಾಹಿತಿಯನ್ನು ಹೊರದೇಶದ ಆರೋಪಿಗಳ ಜತೆ ವಿನಿಮಯ ಮಾಡಿಕೊಳ್ಳುತ್ತದೆ.

ಉದಾಹರಣೆಗೆ, ಆಸ್ಟ್ರೇಲಿಯಾದ ಕ್ರೆಡಿಟ್ ಕಾರ್ಡನ್ನು ಭಾರತದಲ್ಲಿ ಬಳಸುತ್ತಾರೆ. ಹಾಗೆಯೇ, ಭಾರತದ ಕ್ರೆಡಿಟ್ ಕಾರ್ಡನ್ನು ಆಸ್ಟ್ರೇಲಿಯಾದಲ್ಲಿ ಉಪಯೋಗಿಸುತ್ತಾರೆ. ಹೀಗಾಗಿ ಇಂಥ ಜಾಲ ಭೇದಿಸುವುದು ಕಷ್ಟ’ ಎನ್ನುತ್ತಾರೆ ಅಧಿಕಾರಿಗಳು.

ಎಚ್ಚರ ವಹಿಸಬೇಕಾದ ಅಂಶಗಳು

ADVERTISEMENT

* ವಾಣಿಜ್ಯ ಮಳಿಗೆಗೆ ಹೋದಾಗ ಕ್ರೆಡಿಟ್/ ಡೆಬಿಟ್ ಕಾರ್ಡನ್ನು ಕಣ್ಣೆದುರೇ ಸ್ವೈಪ್ ಮಾಡಿಸಿ

* ಸಣ್ಣಪುಟ್ಟ ವೆಬ್ ತಾಣಗಳಲ್ಲಿ ಆನ್‌ಲೈನ್‌ ಪಾವತಿ ಮಾಡಬೇಡಿ

* ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಕೈ ಅಡ್ಡ ಮಾಡಿ ಪಿನ್ ಸಂಖ್ಯೆ ನಮೂದಿಸಿ.

*ಎಟಿಎಂ ಪಿನ್‌ಸಂಖ್ಯೆ ಸೆರೆಯಾಗುವಂತೆ ಹ್ಯಾಕರ್‌ಗಳು ಕೀಪ್ಯಾಡ್‌ನ ಮೇಲ್ಭಾಗದಲ್ಲಿ ರಹಸ್ಯ ಕ್ಯಾಮೆರಾ ಹಾಕಿರುತ್ತಾರೆ. ಅದನ್ನು ಪರಿಶೀಲಿಸಿ ಮುಂದುವರಿಯಿರಿ.

* ಭದ್ರತಾ ಸಿಬ್ಬಂದಿ ಇರುವ ಎಟಿಎಂ ಘಟಕಗಳಿಗೇ ಹೋಗಿ

*ಬ್ಯಾಂಕ್  ಸಮೀಪದ ಎಟಿಎಂ ಬಳಕೆ ಸೂಕ್ತ

* ಹಣ ಡ್ರಾ ಮಾಡಿದ ಬಳಿಕ ರಸೀದಿಯನ್ನು ತೆಗೆದುಕೊಂಡು ಹೋಗುವುದನ್ನು ಮರೆಯಬೇಡಿ

* ಮೊಬೈಲ್‌ ಮೂಲಕ  ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ ವಿನಿಮಯ ಬೇಡ

*ಪದೇ ಪದೇ ಕಾರ್ಡ್‌ಗಳ ಪಿನ್‌ ಸಂಖ್ಯೆ ಬದಲಿಸಬೇಕು

*ಕಾರ್ಡ್‌ ಕಳೆದು ಹೋದರೆ, ತಡಮಾಡದೇ ಬ್ಯಾಂಕ್‌ಗೆ ದೂರು ಕೊಡಿ

4 ತಿಂಗಳಲ್ಲಿ ₹ 5 ಕೋಟಿ ಗಳಿಕೆ!
ಮನೋಜ್‌ 2014ರಲ್ಲಿ ಇಂದಿರಾನಗರ ಪೊಲೀಸರಿಗೂ ಸಿಕ್ಕಿ ಬಿದ್ದಿದ್ದ. ರಾಜಧಾನಿಯಲ್ಲಿ ಮೂರು ಸಲ ಬಂಧಿತನಾದರೂ, ಬಿಡುಗಡೆ ಬಳಿಕ ಪುನಃ ವಂಚಕ ಜಾಲ ವಿಸ್ತರಿಸುತ್ತಾ ಹೋಗಿದ್ದಾನೆ.  ಈ ದಂಧೆ ಮೂಲಕ  ನಾಲ್ಕು ತಿಂಗಳಲ್ಲಿ ಆತ  ಸುಮಾರು ₹ 5 ಕೋಟಿ ಸಂಪಾದನೆ ಮಾಡಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.