ADVERTISEMENT

ಸೇಂಟ್‌ ಜೋಸೆಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಸಂಸ್ಥಾಪನಾ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2017, 19:30 IST
Last Updated 23 ನವೆಂಬರ್ 2017, 19:30 IST
ಬಿ.ಮುತ್ತುರಾಮನ್‌ ಅವರು ಪಿಜಿಡಿಎಂನ ಪ್ರಥಮ ವರ್ಷದ ವಿದ್ಯಾರ್ಥಿನಿ ಹರ್ಷಿತಾ ಎಸ್‌.ಗೌಡ ಅವರಿಗೆ ವಿದ್ಯಾರ್ಥಿವೇತನ ವಿತರಿಸಿದರು –ಪ್ರಜಾವಾಣಿ ಚಿತ್ರ
ಬಿ.ಮುತ್ತುರಾಮನ್‌ ಅವರು ಪಿಜಿಡಿಎಂನ ಪ್ರಥಮ ವರ್ಷದ ವಿದ್ಯಾರ್ಥಿನಿ ಹರ್ಷಿತಾ ಎಸ್‌.ಗೌಡ ಅವರಿಗೆ ವಿದ್ಯಾರ್ಥಿವೇತನ ವಿತರಿಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಸೇಂಟ್‌ ಜೋಸೆಫ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ 21ನೇ ಸಂಸ್ಥಾಪನಾ ದಿನವನ್ನು ಗುರುವಾರ ಆಚರಿಸಲಾಯಿತು.

ಎಸ್‌ಜೆಐಎಂ ವಿದ್ಯಾರ್ಥಿ ವೇತನ ಕಾರ್ಯಕ್ರಮದಡಿ 63 ವಿದ್ಯಾರ್ಥಿಗಳಿಗೆ ₹24.95 ಲಕ್ಷ ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಸಾಮಾನ್ಯ ಅರ್ಹತಾ ವಿದ್ಯಾರ್ಥಿ ವೇತನದಡಿ ಪ್ರಥಮ ಹಾಗೂ ದ್ವಿತೀಯ ವರ್ಷದ 22 ವಿದ್ಯಾರ್ಥಿಗಳಿಗೆ ಒಟ್ಟು ₹10.35 ಲಕ್ಷ, ಕ್ರೈಸ್ತ ವಿದ್ಯಾರ್ಥಿಗಳ ಅರ್ಹತಾ ವಿದ್ಯಾರ್ಥಿ ವೇತನದಡಿ ಪಿಜಿಡಿಎಂ ಕೋರ್ಸ್‌ನ 20 ವಿದ್ಯಾರ್ಥಿಗಳಿಗೆ ಒಟ್ಟು ₹7.90 ಲಕ್ಷ ಹಾಗೂ ಅರ್ಹತೆ ಮತ್ತು ಆರ್ಥಿಕ ಹಿಂದುಳಿದ ವರ್ಗದವರ ವಿದ್ಯಾರ್ಥಿ ವೇತನದಡಿ ಅತಿ ಹೆಚ್ಚು ಅಂಕ ಗಳಿಸಿದ 21 ವಿದ್ಯಾರ್ಥಿಗಳಿಗೆ ಒಟ್ಟು ₹6.70 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಯಿತು.

ಸಂಸ್ಥೆಯ ಡೀನ್‌ ಎಡ್ವಿನ್‌ ಕ್ಯಾಸ್ಟೆಲಿನೊ, ‘ಪ್ರತಿ ವಿದ್ಯಾರ್ಥಿಗೆ ಸರಾಸರಿ ₹40 ಸಾವಿರ ವಿದ್ಯಾರ್ಥಿ ವೇತನ ಸಿಕ್ಕಿದೆ. ವಿದ್ಯಾರ್ಥಿಗಳು ಈ ಹಿಂದೆ ಹಣವನ್ನು ತಂದೆ–ತಾಯಿಗೆ ನೀಡುವ ಬದಲು, ದುಬಾರಿ ಬೆಲೆಯ ಐಫೋನ್‌ನಂತಹ ಗ್ಯಾಜೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಇದನ್ನು ತಪ್ಪಿಸುವ ಉದ್ದೇಶದಿಂದ ಕಾರ್ಯಕ್ರಮಕ್ಕೆ ಪೋಷಕರನ್ನು ಆಹ್ವಾನಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

ಟಾಟಾ ಸ್ಟೀಲ್‌ ಲಿಮಿಟೆಡ್‌ನ ಮಾಜಿ ಉಪಾಧ್ಯಕ್ಷ ಬಿ.ಮುತ್ತುರಾಮನ್‌, ‘ಭಾರತ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಸಾಕಷ್ಟು ಅವಕಾಶಗಳು ಸೃಷ್ಟಿಯಾಗುತ್ತಿವೆ. ಇವುಗಳನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಪ್ರತಿಯೊಬ್ಬರಿಗೂ ಜ್ಞಾನ ಮುಖ್ಯ. ಆದರೆ, ಅದನ್ನು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದರ ಮೇಲೆ ನಮ್ಮ ಜೀವನ ನಿಂತಿರುತ್ತದೆ’ ಎಂದರು.

ಸಂಸ್ಥೆಯ ಮುಖ್ಯಸ್ಥ ಆಂಥೋನಿ ಜೋಸೆಫ್‌, ‘21 ವರ್ಷಗಳ ಹಿಂದೆ ಆರಂಭವಾದ ಸಂಸ್ಥೆಯು ಇಂದು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಬೋಧಕ ವರ್ಗ ಹಾಗೂ ವಿದ್ಯಾರ್ಥಿಗಳ ಶ್ರಮ ಕಾರಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.