ADVERTISEMENT

ಸೈಕಲ್‌ ಮೆಕ್ಯಾನಿಕ್‌ ಮಗಳಿಗೆ ಎಂಟು ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 29 ಮೇ 2015, 20:17 IST
Last Updated 29 ಮೇ 2015, 20:17 IST

ಬೆಂಗಳೂರು: ಬೆಂಗಳೂರು ವಿವಿಯಲ್ಲಿ ಶನಿವಾರ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರಿಬಿದನೂರಿನ ಎಇಎಸ್‌ ನ್ಯಾಷನಲ್‌ ಕಾಲೇಜಿನ ಬಿಎಸ್ಸಿ ವಿದ್ಯಾರ್ಥಿನಿ ಸಂಧ್ಯಾ ಜಿ.ಎ. ಅವರು ಎಂಟು ಚಿನ್ನದ ಪದಕ ಹಾಗೂ ಆರು ನಗದು ಬಹುಮಾನಗಳನ್ನು  ಸ್ವೀಕರಿಸಲಿದ್ದಾರೆ.

ಸಂಧ್ಯಾ ಅವರು ಚಿಕ್ಕಬಳ್ಳಾಪುರ–ಗೌರಿಬಿದನೂರು ಹೆದ್ದಾರಿಯ ಪಕ್ಕದಲ್ಲಿರುವ ಮಂಚೇನಹಳ್ಳಿಯವರು. ಗ್ರಾಮೀಣ ಪ್ರದೇಶದಲ್ಲಿ ಅವರ ತಂದೆ ಪುಟ್ಟ ಸೈಕಲ್‌ ರಿಪೇರಿ ಅಂಗಡಿ ಇಟ್ಟುಕೊಂಡಿದ್ದಾರೆ. ಕಷ್ಟದ ಸ್ಥಿತಿಯಲ್ಲೂ ಮಗಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಅವರ ಹಂಬಲ ಆಗಿತ್ತು. ನ್ಯಾಷನಲ್‌ ಕಾಲೇಜಿನಲ್ಲಿ ಬಿಎಸ್ಸಿಗೆ ಸೇರಿಸಿದರು. ರಸಾಯನವಿಜ್ಞಾನ, ಭೌತವಿಜ್ಞಾನ ಹಾಗೂ ಗಣಿತಶಾಸ್ತ್ರ ವಿಷಯಗಳನ್ನು ಆಯ್ಕೆ ಮಾಡಿಕೊಂಡರು.  ಬೆಂಗಳೂರು ವಿಶ್ವವಿದ್ಯಾಲಯದ ಫಲಿತಾಂಶ ಪ್ರಕಟವಾದಾಗ ಅವರಿಗೆ ಅಚ್ಚರಿಯಾಯಿತು. ಶೇ 95.83 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದರು.   ಬೆಂಗಳೂರು ವಿವಿಯಲ್ಲಿ ರಸಾಯನವಿಜ್ಞಾನದಲ್ಲಿ ಎಂಎಸ್ಸಿ ಪದವಿ ಮಾಡಬೇಕು ಎಂಬುದು ಅವರ ಹಂಬಲ.

‘ಈ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ರಾಜಧಾನಿಯ ಪ್ರಮುಖ ಕಾಲೇಜುಗಳ ವಿದ್ಯಾರ್ಥಿಗಳ ಜೊತೆಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸ್ಪರ್ಧೆ ಮಾಡುವುದು ಸುಲಭವಲ್ಲ. ನನಗೆ ಮೂಲವಿಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಇದೆ. ಶಿಕ್ಷಕಿಯಾಗಬೇಕು ಎಂಬ ಕನಸು ಇಟ್ಟುಕೊಂಡಿದ್ದೇನೆ’ ಎಂದು ಸಂಧ್ಯಾ ಅನಿಸಿಕೆ ಹಂಚಿಕೊಂಡರು.

ಕನ್ನಡ–ಇಂಗ್ಲಿಷ್‌–ಕನ್ನಡ ಪಯಣ: ಬೆಂಗಳೂರು ವಿವಿಯ ಕನ್ನಡ ಅಧ್ಯಯನ ಕೇಂದ್ರದ ವಿದ್ಯಾರ್ಥಿ ಅರುಣ್‌ ಎಸ್‌.ಎನ್‌ ಅವರು ಏಳು ಚಿನ್ನದ ಪದಕಗಳನ್ನು ಪಡೆದು ಈ ಸಾಲಿನಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯಧಿಕ ಚಿನ್ನದ ಪದಕಗಳನ್ನು ಗಳಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಅರುಣ್‌ ಅವರು ಮೂಲತಃ ಮೈಸೂರಿನ ಬನ್ನೂರಿನವರು. ಶಿಕ್ಷಣ ಪಡೆದುದು ಬೆಂಗಳೂರಿನಲ್ಲೇ. ಪದವಿವರೆಗೆ ಅವರು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದರು. ವಿಜಯನಗರದ ಸರ್ಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಅವರಿಗೆ ಇಂಗ್ಲಿಷ್‌ ಸಾಹಿತ್ಯದ ಬಗ್ಗೆ ಒಲವು ಮೂಡಿತು. ಪ್ರಾಧ್ಯಾಪಕಿ ಭಾನುಮತಿ ಅವರು ಇದಕ್ಕೆ ಪ್ರೋತ್ಸಾಹ ನೀಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅವರು ಇಂಗ್ಲಿಷ್‌ ಸಾಹಿತ್ಯದ ಡಿಪ್ಲೊಮಾ (ಒಂದು ವರ್ಷ) ಮಾಡಿದರು. ಬಳಿಕ ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಎಂ.ಎ. (ಇಂಗ್ಲಿಷ್‌ ಸಾಹಿತ್ಯ) ಪದವಿ ಪಡೆದರು. ಬಳಿಕ ಸೇರಿದ್ದು ಕನ್ನಡ ಎಂ.ಎ.ಗೆ.

‘ಈಗ ಸಾಧನೆ ಮಾಡಿರುವುದು ಸಾಸಿವೆಯಷ್ಟು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಹಂಬಲ ಇದೆ. ಈಗ ‍ಪಿಎಚ್.ಡಿಗೆ ನೋಂದಣಿ ಮಾಡಿಕೊಂಡಿದ್ದೇನೆ’ ಎಂದು ಅರುಣ್‌ ಹೇಳಿದರು. ಗೃಹಿಣಿಗೆ ನಾಲ್ಕು ಚಿನ್ನ: ನಾಲ್ಕು ಚಿನ್ನದ ಪದಕ ಹಾಗೂ ಮೂರು  ನಗದು ಬಹುಮಾನಗಳಿಗೆ ಆಯ್ಕೆಯಾಗಿರುವ ಜ್ಯೋತಿ ಪಾಲ್‌ ಸಲೂಜಾ ಅವರು ಮೂಲತಃ ಪಂಜಾಬ್‌ ಲೂಧಿಯಾನದವರು. ಅವರು ನಗರದ ನ್ಯೂ ಹೊರೈಜಾನ್‌ ಕಾಲೇಜಿನ ವಿದ್ಯಾರ್ಥಿನಿ. ಅವರು ಬಿ.ಇಡಿ ಪದವಿಯ ಅಂತಿಮ ಸೆಮಿಸ್ಟರ್‌ನಲ್ಲಿ ಶೇ 96.97 ಅಂಕ ಗಳಿಸಿದ್ದಾರೆ. ಅವರು ಮನೋವಿಜ್ಞಾನ ಪತ್ರಿಕೆಯಲ್ಲಿ ಶೇ 98 ಅಂಕ ಪಡೆದಿದ್ದಾರೆ.

ಪಿಯುಸಿ ವ್ಯಾಸಂಗದ ಬಳಿಕ ಜ್ಯೋತಿ ಅವರ ವಿವಾಹವಾಯಿತು. ಅವರು ಬೆಂಗಳೂರಿನಲ್ಲಿ ಬಂದು ನೆಲೆಸಿದರು. 10 ವರ್ಷದ ಬಳಿಕ ಅವರಿಗೆ ಪದವಿ ವ್ಯಾಸಂಗ ಮಾಡುವ ಮನಸ್ಸಾಯಿತು. ಈಗ ಅವರ ಪ್ರಯತ್ನಕ್ಕೆ ಭರಪೂರ ಕೊಯಿಲು ಬಂದಿದೆ. ನಾಲ್ಕು ಚಿನ್ನದ ಪದಕಗಳನ್ನು ಗಳಿಸಿ ನಗು ಬೀರಿದ್ದಾರೆ. ‘ಪದವಿ ಸೇರಲು ಆರಂಭದಲ್ಲಿ ಅಂಜಿಕೆಯಾಯಿತು. ಪತಿ ಹಾಗೂ ಕುಟುಂಬದ ಸದಸ್ಯರು ಪ್ರೋತ್ಸಾಹ ನೀಡಿದರು. ಸವಾಲಾಗಿ ಸ್ವೀಕರಿಸಿದೆ. ಈಗ ಫಲ ಸಿಕ್ಕಿದೆ’ ಎಂದು ಅವರು ಸಂತಸ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.