ADVERTISEMENT

ಸೈಕಲ್‌ ಸವಾರರ ಕಲರವ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST
‘ಐ ಸೈಕಲ್‌ ಡಾಟ್‌ ಇನ್‌’ ಸಂಸ್ಥೆ ಜಯನಗರದ ಎರಡನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸೈಕಲ್‌ ಸವಾರರ ದಿನಾಚರಣೆ’ಯಲ್ಲಿ ‘ಗೊ ಗ್ರೀನ್‌’ ಸಂಸ್ಥೆಯ ಸದಸ್ಯರು ಸೈಕಲ್‌ ರ್‌್ಯಾಲಿ ನಡೆಸಿದರು 	–ಪ್ರಜಾವಾಣಿ ಚಿತ್ರ
‘ಐ ಸೈಕಲ್‌ ಡಾಟ್‌ ಇನ್‌’ ಸಂಸ್ಥೆ ಜಯನಗರದ ಎರಡನೇ ಬ್ಲಾಕ್‌ನಲ್ಲಿರುವ ಶಾಲಿನಿ ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸೈಕಲ್‌ ಸವಾರರ ದಿನಾಚರಣೆ’ಯಲ್ಲಿ ‘ಗೊ ಗ್ರೀನ್‌’ ಸಂಸ್ಥೆಯ ಸದಸ್ಯರು ಸೈಕಲ್‌ ರ್‌್ಯಾಲಿ ನಡೆಸಿದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಆ ಮೈದಾನದ ಒಂದು ಮೂಲೆಯಲ್ಲಿ ಸೈಕಲ್‌ ಸವಾರರದೇ ಕಲರವ ತುಂಬಿತ್ತು. ಬಗೆ ಬಗೆಯ ಬಣ್ಣದ ಬೈಸಿಕಲ್‌ಗಳು ಕೂಡ  ಇಲ್ಲಿ ಬಂದಿದ್ದವು. ಕೆಲವರು ಮತ್ತೊಬ್ಬರ ಸಹಾಯದಿಂದ ಅಂಜಿಕೆ ಭಯದಿಂದಲೇ ಮೆಲ್ಲನೆ ಸೈಕಲ್‌ ತುಳಿಯಲು ಕಲಿಯು­ತ್ತಿದ್ದರು. ಇನ್ನೂ ಕೆಲವರು ಸೈಕಲ್‌ ಅನ್ನು ಆಟದ ವಸ್ತುವಿನಂತೆ ಬಳಸಿ­ಕೊಂಡು ವಿವಿಧ ಮೋಜಿನಲ್ಲಿ ತೊಡಗಿ­ದ್ದರು. ಮಕ್ಕಳಿಗಂತೂ ಅದು ರಜೆಯ ಮಜದ ತಾಣವಾಗಿ ಮಾರ್ಪಟ್ಟಿತ್ತು.

ಜಯನಗರದ ಎರಡನೇ ಬ್ಲಾಕ್‌ನಲ್ಲಿ­ರುವ ಶಾಲಿನಿ ಮೈದಾನದಲ್ಲಿ ಭಾನು­ವಾರ ‘ಐ ಸೈಕಲ್‌ ಡಾಟ್‌ ಇನ್‌’ ಸಂಸ್ಥೆ ಹಮ್ಮಿಕೊಂಡಿದ್ದ ‘ಸೈಕಲ್‌ ಸವಾರರ ದಿನಾಚರಣೆ’ಯಲ್ಲಿ ಕಂಡುಬಂದ ದೃಶ್ಯವಿದು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕ ಬಿ.ಎನ್‌.ವಿಜಯಕುಮಾರ್‌ ಮಾತ­ನಾಡಿ, ‘ಬೆಂಗಳೂರಿನಲ್ಲಿ ಸಾರ್ವ-­ಜನಿಕ ಸಾರಿಗೆ ನಂಬಿಕೊಂಡು ಬದುಕು­ವುದು ತುಂಬ ಕಷ್ಟ. ಸಂಚಾರ ದಟ್ಟಣೆ­ಯಲ್ಲಿ ಸುಲಭವಾಗಿ ಸಂಚರಿಸಬಹು­ದಾದ ಸೈಕಲ್‌ ಬಳಸುವುದು ತುಂಬಾ ಅಗತ್ಯವಿದೆ. ಜತೆಗೆ ಸೈಕಲ್‌ ತುಳಿಯು­ವುದರಿಂದ ದೈಹಿಕ ಮತ್ತು ಮಾನಸಿಕ­ವಾಗಿ ಸದೃಢರಾಗಬಹುದು’ ಎಂದರು.

‘ನಗರದಲ್ಲಿ ಸೈಕಲ್‌ ಸ್ಪರ್ಧೆಯಲ್ಲಿ ಭಾಗವಹಿಸುವಂತಹ 10 ಸಾವಿರ ಜನರಿ­ದ್ದಾರೆ. ಈ ಸಂಖ್ಯೆಯನ್ನು ಹೆಚ್ಚಿ­ಸಲು ಸೈಕಲ್‌ ಸವಾರಿ ಪ್ರೋತ್ಸಾಹಿಸುವ ಅಗತ್ಯವಿದೆ. ಪ್ರತಿ ತಿಂಗಳು ಒಂದು ದಿನ ನಿಗದಿ ಮಾಡಿ ಸೈಕಲ್‌ ದಿನವನ್ನಾಗಿ ಆಚರಿಸಿ’ ಎಂದು ತಿಳಿಸಿದರು.
‘ಜಯನಗರದಲ್ಲಿ ಸೈಕಲ್‌ ಸೇರಿದಂತೆ ಅಥ್ಲೆಟಿಕ್ ಕ್ರೀಡೆಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಕ್ರೀಡಾ ಅಕಾಡೆಮಿ­ಯೊಂದನ್ನು ತೆರೆದು ವರ್ಷ ಪೂರ್ತಿ ಕಾರ್ಯಕ್ರಮ ನಡೆಸುವಂತಹ ಯೋಜನೆ ರೂಪಿಸಲಾಗಿದೆ’ ಎಂದರು.

ಪಾಲಿಕೆ ಸದಸ್ಯ ಬಿ.ಸೋಮಶೇಖರ್‌ ಮಾತನಾಡಿ, ‘ಮೊದಲು ಜೀವನ ಮಾಡಲು ಸೈಕಲ್ ಸವಾರಿ ಮಾಡಲಾ­ಗುತ್ತಿತ್ತು. ಇಂದು ಆರೋಗ್ಯ ಕಾಪಾಡು­ವುದಕ್ಕೆ ಸೈಕಲ್‌ ಬಳಸಬೇಕಾದ ಪ್ರಸಂಗ ಬಂದಿದೆ. ಸಂಪತ್ತಿನ ಹೆಚ್ಚಳದಿಂದ ಇಂದಿನ ಮಕ್ಕಳು ಸೈಕಲ್‌ ಬದಲು ಬೈಕ್‌, ಕಾರು ಕೊಡಿಸಿ ಎಂದು ಕೇಳುವ ಸ್ಥಿತಿ ನಿರ್ಮಾಣವಾಗಿದೆ. ಸೈಕಲ್‌ ಕುರಿತು ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದು ಅನಿಸಿಕೆ ವ್ಯಕ್ತಿಪಡಿಸಿದರು.

‘ನಮ್ಮ ಸೈಕಲ್‌’ ಸಂಘಟನೆ ನಿರ್ದೇಶಕ ಎಚ್‌.ಆರ್.ಮುರುಳಿ, ‘ಗೊ ಗ್ರೀನ್‌’ ಸಂಸ್ಥೆ ಸಿ.ಎಂ.ಪ್ರಭಾಕರ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಸೈಕಲ್‌ ಸ್ಪರ್ಧೆಗಳನ್ನು ಮತ್ತು ಹೊಸ ಮಾದರಿ ಸೈಕಲ್‌ಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಉಚಿತವಾಗಿ ಸೈಕಲ್‌ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಲಾಗಿತ್ತು. ಸೈಕಲ್‌, ಬಿಡಿಭಾಗ ಮತ್ತು ಸೈಕ್ಲಿಂಗ್‌ ಉಪಕರಣಗಳ ಮಾರಾಟ ಮಳಿಗೆಗಳನ್ನು ತೆರೆಯ­ಲಾಗಿತ್ತು. ಆಸಕ್ತರಿಗೆ ಸೈಕಲ್‌ ಸಹ ಕಲಿಸಿಕೊಡುತ್ತಿದ್ದ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.