ADVERTISEMENT

‘ಸೈಕಲ್‌ ಡೇ’ಗೆ ಮಣ್ಣಿನ ಗಣಪನ ಮಾಡಿದರು

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2016, 19:30 IST
Last Updated 28 ಆಗಸ್ಟ್ 2016, 19:30 IST
ಅಮ್ಮ ನೋಡಮ್ಮ... ಡೊಳ್ಳು ಹೊಟ್ಟೆ ಗಣಪನ ನಾನೇ ಮಾಡಿಬಿಟ್ಟೆ
ಅಮ್ಮ ನೋಡಮ್ಮ... ಡೊಳ್ಳು ಹೊಟ್ಟೆ ಗಣಪನ ನಾನೇ ಮಾಡಿಬಿಟ್ಟೆ   

ಬೆಂಗಳೂರು: ಮಲ್ಲೇಶ್ವರದಲ್ಲಿ ಭಾನುವಾರ ಆಯೋಜಿಸಿದ್ದ ಸೈಕಲ್‌ ದಿನಾಚರಣೆಯಲ್ಲಿ ಮಕ್ಕಳು ಗಣಪತಿ ಮೂರ್ತಿಗಳನ್ನು ಸ್ವತಃ ತಯಾರಿಸಿ ಸಂಭ್ರಮಪಟ್ಟರು.

ನಗರ ಭೂ ಸಾರಿಗೆ ನಿರ್ದೇಶನಾಲಯವು ಮಲ್ಲೇಶ್ವರ ಸ್ವಾಭಿಮಾನ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪರಿಸರಸ್ನೇಹಿ ಗಣಪತಿ ಮೂರ್ತಿ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಮಣ್ಣು ಬಳಸಿಕೊಂಡು ಗಣಪತಿ ಮೂರ್ತಿ ತಯಾರಿಸುವ ಬಗ್ಗೆ ಪರಿಣಿತರು ತಿಳಿಸಿಕೊಟ್ಟರು. ಅದರಂತೆ ಮಕ್ಕಳು, ತಮ್ಮಿಷ್ಟದ ಗಣಪತಿ ಮೂರ್ತಿ ತಯಾರಿಸಿ ಪ್ರದರ್ಶಿಸಿದರು.

‘ಪ್ರತಿದಿನ ಕೆಲಸದ ಒತ್ತಡವಿರುತ್ತದೆ. ಈ ವೇಳೆ ಮಕ್ಕಳನ್ನು ಎಲ್ಲಿಯೂ ಕರೆದುಕೊಂಡು ಹೋಗಲು ಆಗುವುದಿಲ್ಲ. ಭಾನುವಾರ ರಜಾ ದಿನವಾಗಿದ್ದರಿಂದ ಈ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದಿದ್ದೇವೆ. ಮಕ್ಕಳು ಖುಷಿಯಾಗಿ ಮೂರ್ತಿ ತಯಾರಿಸಿದ್ದು ನೋಡಿ ಆನಂದವಾಯಿತು’ ಎಂದು ಮಲ್ಲೇಶ್ವರದ ಎಸ್. ಅರವಿಂದ್‌ ತಿಳಿಸಿದರು.

 ಮೂರ್ತಿ ತಯಾರಿಕೆಯೊಂದಿಗೆ ವಿವಿಧ ಆಟಗಳು ಮಕ್ಕಳನ್ನು ರಂಜಿಸಿದವು. ಕೆಲ ಮಕ್ಕಳು, ಸೈಕಲ್‌ ಸವಾರಿ ಮಾಡಿದರು. ಹಿರಿಯ ನಾಗರಿಕರು ಸಹ ಭಾಗವಹಿಸಿ ಮೊಮ್ಮಕ್ಕಳ ಜತೆ ಆಟವಾಡಿದರು.

ವಿವಿಧೆಡೆ ಆಚರಣೆ: ಅಟ್ಟೂರು ಕೆರೆ ನಡಿಗೆದಾರರ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಅಟ್ಟೂರು ಕೆರೆಯ ಆವರಣದಲ್ಲಿ ಸೈಕಲ್‌ ದಿನ ನಡೆಯಿತು.
ವಾರಾಂತ್ಯದ ಕಾರ್ಯಕ್ರಮದ ಅಂಗವಾಗಿ ಕಬ್ಬನ್‌ ಉದ್ಯಾನದಲ್ಲೂ  ಸೈಕಲ್‌ ದಿನಾಚರಣೆ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.