ADVERTISEMENT

‘ಸ್ತ್ರೀವಾದವೇ ಜಗತ್ತಿನ ಮುಂದಿನ ಆಯ್ಕೆ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2016, 20:21 IST
Last Updated 8 ಸೆಪ್ಟೆಂಬರ್ 2016, 20:21 IST
ಕವಿ ಜರಗನಹಳ್ಳಿ ಶಿವಶಂಕರ್ ಅವರಿಗೆ ‘ನಿಜ ಧರ್ಮಾಧೀಶ ಬಸವ’ ಪ್ರಶಸ್ತಿ, ಪ್ರೊ.ಎಚ್‌.ಎಸ್‌.ಶಿವಪ್ರಕಾಶ್‌ ಅವರಿಗೆ ‘ಶೂನ್ಯ ಪೀಠಾಧೀಶ ಅಲ್ಲಮ’ ಪ್ರಶಸ್ತಿ, ಎಂ.ಎಸ್‌. ಆಶಾದೇವಿ ಅವರಿಗೆ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಂ.ವಿ.ರಾಜಶೇಖರನ್‌, ಚಂದ್ರಶೇಖರ ಕಂಬಾರ, ಮನು ಬಳಿಗಾರ್‌, ಗೊ.ರು.ಚನ್ನಬಸಪ್ಪ, ಗಂಗಾಧರ್‌ ಪಂಡಿತ್‌, ಪ್ರಧಾನ ಕಾರ್ಯದರ್ಶಿ ಕೆ.ಶಿವಣ್ಣ ಇದ್ದಾರೆ  –ಪ್ರಜಾವಾಣಿ ಚಿತ್ರ
ಕವಿ ಜರಗನಹಳ್ಳಿ ಶಿವಶಂಕರ್ ಅವರಿಗೆ ‘ನಿಜ ಧರ್ಮಾಧೀಶ ಬಸವ’ ಪ್ರಶಸ್ತಿ, ಪ್ರೊ.ಎಚ್‌.ಎಸ್‌.ಶಿವಪ್ರಕಾಶ್‌ ಅವರಿಗೆ ‘ಶೂನ್ಯ ಪೀಠಾಧೀಶ ಅಲ್ಲಮ’ ಪ್ರಶಸ್ತಿ, ಎಂ.ಎಸ್‌. ಆಶಾದೇವಿ ಅವರಿಗೆ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಎಂ.ವಿ.ರಾಜಶೇಖರನ್‌, ಚಂದ್ರಶೇಖರ ಕಂಬಾರ, ಮನು ಬಳಿಗಾರ್‌, ಗೊ.ರು.ಚನ್ನಬಸಪ್ಪ, ಗಂಗಾಧರ್‌ ಪಂಡಿತ್‌, ಪ್ರಧಾನ ಕಾರ್ಯದರ್ಶಿ ಕೆ.ಶಿವಣ್ಣ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸ್ತ್ರೀವಾದವು ಯಾವುದನ್ನೂ ಬಿಟ್ಟುಕೊಡದೆ ಎಲ್ಲವನ್ನೂ ಒಳಗೊಳ್ಳುತ್ತದೆ. ಹೀಗಾಗಿ ಅದು ಜಗತ್ತಿನ ಮುಂದಿನ ಆಯ್ಕೆಯಾಗಲಿದೆ’ ಎಂದು ವಿಮರ್ಶಕಿ ಎಂ.ಎಸ್‌. ಆಶಾದೇವಿ ಹೇಳಿದರು.

ಮಾನವಧರ್ಮ ಅಂತರರಾಷ್ಟ್ರೀಯ ಪ್ರತಿಷ್ಠಾನ, ಚಿದಾನಂದ ಎಂ. ಗೌಡ ಪ್ರತಿಷ್ಠಾನ ಹಾಗೂ ವೀರಶೈವ ಸೇವಾ ಸಮಾಜದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ‘ವೈರಾಗ್ಯನಿಧಿ ಅಕ್ಕ’ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.

‘ಎಡಪಂಥೀಯವಾದದ ಜಾಗವನ್ನು ಸ್ತ್ರೀವಾದ ಆಕ್ರಮಿಸಿಕೊಂಡಿದೆ. ಇಲ್ಲಿ ಸ್ತ್ರೀಯರು ಮಾತ್ರವೇ ಇಲ್ಲ. ಪುರುಷರೂ ಇದ್ದಾರೆ. ಸ್ತ್ರೀವಾದ ಲೋಕ ಮೀಮಾಂಸೆಯನ್ನು ಒಳಗೊಂಡಿದೆ. ಅಕ್ಕಮಹಾದೇವಿ ಕಟ್ಟಿಕೊಟ್ಟ ಸ್ತ್ರೀವಾದ ಜಗತ್ತಿನ ಮುಂದಿನ ಆಯ್ಕೆಯಾಗಲಿದೆ’ ಎಂದರು.

‘ರಾಷ್ಟ್ರಮಟ್ಟದಲ್ಲಿ ನಿಲ್ಲುವಂತಹ ಅನೇಕ ಲೇಖಕಿಯರು ನಮ್ಮಲ್ಲಿದ್ದಾರೆ. ಆದರೆ, ಅಕ್ಕಮಹಾದೇವಿಗೆ ಸಮನಾಗಿ ನಿಲ್ಲುವಂತಹವರು ಯಾರೂ ಇಲ್ಲ. ಅಕ್ಕ ಎಲ್ಲರಿಗೂ ರಕ್ಷಾ ಕವಚವೆಂದರೆ ತಪ್ಪಾಗಲಾರದು. ಮಹಿಳೆಯರಿಗೆ ಬಿಡುಗಡೆಯ ದಾರಿಯನ್ನು ಅವರು ತೋರಿಸಿಕೊಟ್ಟಿದ್ದಾರೆ’ ಎಂದು ಹೇಳಿದರು.

‘ಶೂನ್ಯ ಪೀಠಾಧೀಶ ಅಲ್ಲಮ’ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕವಿ ಪ್ರೊ.ಎಚ್‌.ಎಸ್‌.ಶಿವಪ್ರಕಾಶ್‌, ‘ಅಲ್ಲಮ ಪ್ರಭು ಕನ್ನಡ ಸಾಂಸ್ಕೃತಿಕ ಇತಿಹಾಸದಲ್ಲಿ ಒಬ್ಬ ವ್ಯಕ್ತಿಯಲ್ಲ; ಶಕ್ತಿಯಾಗಿದ್ದಾರೆ. ಯಾವ ದರ್ಶನಕ್ಕೂ ಎಟುಕದ ವ್ಯಕ್ತಿ ಅವರು. ಚಿಂತನೆ ಭಾವನೆ, ಧರ್ಮಗಳಿಗೇ ಅಲ್ಲಮ ಸವಾಲಾಗಿದ್ದಾರೆ’ ಎಂದರು.

‘ಅಲ್ಲಮ ಸಮಾಜದ ಸಮಸ್ಯೆಗಳಿಗೆ ಪರಿಹಾರಗಳನ್ನು ಮತೀಯ ಚೌಕಟ್ಟಿನಲ್ಲಿ ಹುಡುಕುವುದಿಲ್ಲ. ಮತೀಯವಾದವನ್ನು ನಿರಾಕರಿಸಿ ಅದರ ಆಚೆಗಿನ ಅರಿವಿನ ದರ್ಶನವನ್ನು ಮಾಡಿಸುತ್ತಾರೆ’ ಎಂದು ಹೇಳಿದರು.

ಸಾಹಿತಿ ಚಂದ್ರಶೇಖರ ಕಂಬಾರ ಮಾತನಾಡಿ, ‘ಆಶಾದೇವಿ ಅವರದ್ದು ಕನ್ನಡ ಸಾಹಿತ್ಯದಲ್ಲಿ ದೊಡ್ಡ ಧ್ವನಿ. ಎಚ್‌.ಎಸ್‌.ಶಿವಪ್ರಕಾಶ್‌ ಭಾರತೀಯ ಸಾಹಿತ್ಯಕ್ಕೆ ಕೊಡುಗೆ ನೀಡಿದ ಪ್ರತಿಭೆ. ಜರಗನಹಳ್ಳಿ ಶಿವಶಂಕರ್‌ ಗಂಭೀರ ವಿಷಯಗಳನ್ನು ಹನಿಗವನಗಳ ಮೂಲಕ ಹಾಸ್ಯದ ಧಾಟಿಯಲ್ಲಿ ಪ್ರಸ್ತುತ ಪಡಿಸಿದಂತಹವರು.

ಇದೇ ರೀತಿಯಲ್ಲಿ ವಚನ ಸಾಹಿತ್ಯವನ್ನು ಜಗತ್ತಿನ ಮೂಲೆ ಮೂಲೆಗೆ ತಲುಪಿಸುತ್ತಿರುವ ಅನೇಕ ಪ್ರತಿಭೆಗಳು ನಮ್ಮಲ್ಲಿದ್ದಾರೆ. ಅವರನ್ನು ಗುರುತಿಸಿ ಗೌರವಿಸಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.