ADVERTISEMENT

ಸ್ನೇಹಿತನ ಪತ್ನಿ ಮೇಲೆ ಅತ್ಯಾಚಾರ: ಬಂಧನ

​ಪ್ರಜಾವಾಣಿ ವಾರ್ತೆ
Published 6 ಮೇ 2016, 19:41 IST
Last Updated 6 ಮೇ 2016, 19:41 IST

ಬೆಂಗಳೂರು: ಜೈಲಿನಲ್ಲಿ ಪರಿಚಿತನಾದ ಸ್ನೇಹಿತನ ಮನೆಗೆ ನುಗ್ಗಿ ಆತನ ಪತ್ನಿ ಮೇಲೆ ಅತ್ಯಾಚಾರ ಎಸಗಿದ ಅರೋಪದಡಿ  ಆಟೊ ಚಾಲಕ ಸೈಯದ್ ಸಲ್ಮಾನ್ (38) ಎಂಬಾತನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಸೋಮೇಶ್ವರನಗರದ ಸಲ್ಮಾನ್, ಸ್ನೇಹಿತನ ಪತ್ನಿಯನ್ನು ಗೃಹ ಬಂಧನದಲ್ಲಿರಿಸಿ ಮೂರು ದಿನಗಳಿಂದ ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಸಂತ್ರಸ್ತೆ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಐದು ವರ್ಷಗಳ ಹಿಂದೆ ಕೊಲೆ ಯತ್ನ ಹಾಗೂ ದರೋಡೆ ಪ್ರಕರಣಗಳಲ್ಲಿ ಸಲ್ಮಾನ್‌ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ. ಈ ನಡುವೆ ವಿಲ್ಸನ್‌ ಗಾರ್ಡನ್‌ ಠಾಣೆ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಂತ್ರಸ್ತೆಯ ಪತಿಗೂ ಜೀವಾವಧಿ ಶಿಕ್ಷೆಯಾಯಿತು.

ಒಂದೇ ಪ್ರದೇಶದವರಾದ ಕಾರಣ ಸಂತ್ರಸ್ತೆಯ ಪತಿ ಹಾಗೂ ಸಲ್ಮಾನ್ ಕಾರಾಗೃಹದಲ್ಲಿ ಸ್ನೇಹಿತರಾಗಿದ್ದರು. ಪತಿಯ ಯೋಗಕ್ಷೇಮ ವಿಚಾರಿಸಲು ಸಂತ್ರಸ್ತೆ ಆಗಾಗ್ಗೆ ಜೈಲಿನ ಬಳಿ ಹೋಗುತ್ತಿದ್ದರು. ಈ ವೇಳೆ ಆತ, ಆರೋಪಿಗೆ ಪತ್ನಿಯನ್ನು ಪರಿಚಯ ಮಾಡಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಶಿಕ್ಷೆ ಪೂರ್ಣಗೊಳಿಸಿ ಇತ್ತೀಚೆಗೆ ಜಾಮೀನಿನ ಮೇಲೆ ಹೊರ ಬಂದ ಸಲ್ಮಾನ್, ಮೇ 1ರಂದು ಸಂತ್ರಸ್ತೆಯ ಮನೆಗೆ ಹೋಗಿ ಅತ್ಯಾಚಾರ ಎಸಗಿದ್ದ. ಅಲ್ಲದೆ, ಅವರನ್ನು ಮನೆಯಲ್ಲೇ ಕೂಡಿಟ್ಟು ಮೂರು ದಿನಗಳಿಂದ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ತಿಳಿದು ಬಂದಿದೆ.

*
ಆರೋಪಿ ಹಾಗೂ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ
ತನಿಖಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT