ADVERTISEMENT

ಸ್ವಾತಂತ್ರ್ಯ ಉದ್ಯಾನದಲ್ಲಿ ಪಾರ್ಕಿಂಗ್‌ ಸಂಕೀರ್ಣ

994 ವಾಹನಗಳಿಗೆ ನಿಲುಗಡೆ ಸೌಲಭ್ಯ ಕಲ್ಪಿಸುವ ಯೋಜನೆ

ಬಿ.ಸತೀಶ್
Published 23 ನವೆಂಬರ್ 2015, 20:06 IST
Last Updated 23 ನವೆಂಬರ್ 2015, 20:06 IST

ಬೆಂಗಳೂರು: ನಗರದ ಕೇಂದ್ರ ಭಾಗದಲ್ಲಿರುವ ಗಾಂಧಿನಗರದ ಸುತ್ತಮುತ್ತ ವಾಹನ ನಿಲುಗಡೆ ಸಮಸ್ಯೆಗೆ ಇನ್ನು ಒಂದೂವರೆ ವರ್ಷದಲ್ಲಿ ಮುಕ್ತಿ ಸಿಗಲಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಸ್ವಾತಂತ್ರ್ಯ ಉದ್ಯಾನದಲ್ಲಿ ತಳಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಿಸುತ್ತಿದ್ದು, 994 ವಾಹನಗಳಿಗೆ ಪಾರ್ಕಿಂಗ್‌ ಸೌಲಭ್ಯ ಸಿಗಲಿದೆ.

‘ಸ್ವಾತಂತ್ರ್ಯ ಉದ್ಯಾನಕ್ಕೆ ಹೊಂದಿಕೊಂಡಂತೆ ಇರುವ ಖಾಲಿ ಜಮೀನಿನಲ್ಲಿ ತಳಮಹಡಿ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, ಜೂನ್‌ನಲ್ಲಿ ಕಾಮಗಾರಿ ಆರಂಭವಾಗಿದೆ’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್ (ಯೋಜನೆ) ಎಸ್.ಸೋಮಶೇಖರ್  ತಿಳಿಸಿದರು.

ನಗರೋತ್ಥಾನ ಯೋಜನೆ ಅಡಿ ತಳಮಹಡಿ ವಾಹನ ನಿಲುಗಡೆ ಸಂಕೀರ್ಣ  ನಿರ್ಮಾಣಕ್ಕೆ ಅನುದಾನ  ಬಿಡುಗಡೆಯಾಗಿದೆ. 220 x 52 ಮೀಟರ್‌ ವಿಸ್ತೀರ್ಣದಲ್ಲಿ, ₹ 79.81 ಕೋಟಿ ವೆಚ್ಚದಲ್ಲಿ ಮೂರು ತಳಮಹಡಿಗಳು ನಿರ್ಮಾಣಗೊಳ್ಳಲಿವೆ. 485 ದ್ವಿಚಕ್ರ ವಾಹನಗಳು, 509 ಕಾರುಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲಾಗುವುದು ಎಂದರು. 

ಕೆ.ಎಂ.ವಿ ಪ್ರಾಜೆಕ್ಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯು ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣಕ್ಕೆ ಗುತ್ತಿಗೆ ಪಡೆದಿದೆ.  ಎರಡು ವರ್ಷಗಳ ಯೋಜನೆ ಇದಾಗಿದೆ. ಸಂಕೀರ್ಣದಲ್ಲಿ ನಾಲ್ಕು ಲಿಫ್ಟ್‌ ಇರಲಿವೆ.  ಸ್ಟೇರ್‌ಕೇಸ್‌ ಮತ್ತು ಶೌಚಾಲಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ವಾಹನ ನಿಲುಗಡೆ ಸಂಕೀರ್ಣಕ್ಕೆ ಬರುವ ವಾಹನಗಳಿಗೆ ಪ್ರತ್ಯೇಕವಾಗಿ ಕಾಳಿದಾಸ ಮಾರ್ಗದ ಪಕ್ಕದಲ್ಲಿ 5.5 ಮೀ ಅಗಲದ ಸರ್ವಿಸ್ ರಸ್ತೆ ನಿರ್ಮಾಣ ಮಾಡಲಾಗುವುದು. ಇದರಿಂದ ಕಾಳಿದಾಸ ಮಾರ್ಗದಲ್ಲಿ ದಟ್ಟಣೆ ಉಂಟಾಗುವುದಿಲ್ಲ ಎಂದು ತಿಳಿಸಿದರು.

ಸ್ವಾತಂತ್ರ್ಯ ಉದ್ಯಾನದ ಪಕ್ಕದಲ್ಲಿ ಆರು ಎಕರೆ ಜಮೀನಿದೆ. ಅದರಲ್ಲಿ 220 x 52 ಮೀಟರ್‌ ವಿಸ್ತೀರ್ಣದಲ್ಲಿ ಮಾತ್ರ  ಸಂಕೀರ್ಣ ನಿರ್ಮಾಣಗೊಳ್ಳುತ್ತಿದೆ. ನೆಲಮಟ್ಟದಿಂದ ಕೆಳಗೆ ಸಂಕೀರ್ಣ ಇರಲಿದೆ. ಹೀಗಾಗಿ ಇಲ್ಲಿ ಪ್ರತಿಭಟನೆ, ರ್‌್ಯಾಲಿ ನಡೆಸುವವರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಹೇಳಿದರು.

ಮೆಜೆಸ್ಟಿಕ್‌ ಸುತ್ತಮುತ್ತ, ಗಾಂಧಿನಗರ, ಕಬ್ಬನ್‌ಪೇಟೆ, ಚಿಕ್ಕಪೇಟೆ, ಬಳೆಪೇಟೆ, ಹೆಚ್ಚಿನ ದಟ್ಟನೆ ಉಂಟಾಗುತ್ತಿದೆ. ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣಗೊಂಡರೆ ಆ ಭಾಗದ ರಸ್ತೆಗಳಲ್ಲಿ ವಾಹನ ನಿಲುಗಡೆಗೆ ಸಮಸ್ಯೆ ಇರುವುದಿಲ್ಲ ಮತ್ತು ದಟ್ಟಣೆ ಸಹ ಕಡಿಮೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
*
ಗಾಂಧಿ ಬಜಾರ್‌ನಲ್ಲಿ ಮೂರು ಮಹಡಿಗಳ ಸಂಕೀರ್ಣ
ಗಾಂಧಿ ಬಜಾರ್‌ ಮುಖ್ಯರಸ್ತೆಯಲ್ಲಿ ಪಾಲಿಕೆಗೆ ಸೇರಿದ ಹಳೆಯ ಕಟ್ಟಡ ಇದೆ. ಅದನ್ನು ನೆಲಸಮ ಮಾಡಿ ಅಲ್ಲಿ ಮೂರು ಮಹಡಿಗಳ ವಾಹನ ನಿಲುಗಡೆ ಸಂಕೀರ್ಣ ನಿರ್ಮಾಣ ಮಾಡಲಾಗುವುದು.

₹ 13.4 ಕೋಟಿ ವೆಚ್ಚದಲ್ಲಿ ಸಂಕೀರ್ಣ ನಿರ್ಮಾಣಗೊಳ್ಳಲಿದೆ. ಅದರಲ್ಲಿ 125 ಕಾರು ಮತ್ತು 350 ದ್ವಿಚಕ್ರ ವಾಹನಗಳ ನಿಲುಗಡೆಗೆ ಸೌಲಭ್ಯ ಕಲ್ಪಿಸಲಾಗುವುದು. ಸರ್ಕಾರದ ಅನುಮೋದನೆ ಸಿಕ್ಕ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಸೋಮಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT