ADVERTISEMENT

ಹಂಪಿ– ಮಚುಪಿಚು ಅಭಿವೃದ್ಧಿ ಒಪ್ಪಂದ

ಪೆರುವಿನ 194ನೇ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 20:06 IST
Last Updated 30 ನವೆಂಬರ್ 2015, 20:06 IST

ಬೆಂಗಳೂರು: ಹಂಪಿ ಮತ್ತು ಪೆರುವಿನ ಮಚುಪಿಚು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಪೆರು ಮತ್ತು ಕರ್ನಾಟಕದ ನಡುವೆ  ಒಪ್ಪಂದ ಮಾಡಿಕೊಳ್ಳಲಾಗಿದೆ.

ಸೋಮವಾರ ನಗರದಲ್ಲಿ ಆಯೋ ಜಿಸಿದ್ದ  ಪೆರುವಿನ 194ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತದಲ್ಲಿರುವ ಪೆರುವಿನ ರಾಯಭಾರಿ  ಜೋಸ್‌ ಜೆ. ಬೆಟನ್‌ಕೋರ್ಟ್ ಅವರು ಮಾಹಿತಿ ನೀಡಿದರು. ‘ಅತ್ಯಂತ ಪ್ರಾಚೀನ ಪ್ರವಾಸಿ ತಾಣಗಳಾದ ಹಂಪಿ ಮತ್ತು ಮಚುಪಿಚು ಸಮಾನ ಗುಣಲಕ್ಷಣಗಳನ್ನು ಹೊಂದಿವೆ.  ಹಾಗೆಯೇ   ಮಚುಪಿಚು ಕೂಡಾ ಹಾಳು ಹಂಪಿಯಂತೆ ನಿರ್ಲಕ್ಷ್ಯಕ್ಕೆ ಒಳಗಾದ ತಾಣ. ಈಗ ಇವೆರಡನ್ನೂ   ನಾವು ಜಂಟಿಯಾಗಿ  ಅಭಿವೃದ್ಧಿಪಡಿಸಲಿದ್ದೇವೆ. ಕರ್ನಾಟಕದ ನಾಗರಹೊಳೆ ಸೇರಿದಂತೆ ಇನ್ನಷ್ಟು ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಜೊತೆಯಾಗಲಿದ್ದೇವೆ’ ಎಂದರು.

‘ಪೆರು ಮತ್ತು ಭಾರತದ ನಡುವೆ  ವ್ಯಾಪಾರ ಸಂಬಂಧ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಒಂದೆರಡು ವರ್ಷಗಳಲ್ಲಿ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲಾಗುವುದು. ವ್ಯಾಪಾರದ ಜೊತೆಗೆ ಇಂಧನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಾವು ಸಹಭಾಗಿ ಗಳಾಗಲಿದ್ದೇವೆ.  ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತಕ್ಕೆ ಉತ್ತಮ ಭವಿಷ್ಯವಿದೆ. ಅದರಲ್ಲೂ ಸೌರವಿದ್ಯುತ್‌ ಉತ್ಪಾದನೆಯಲ್ಲಿ   ಮುಂಚೂಣಿಯಲ್ಲಿದೆ. ಸೌರವಿದ್ಯುತ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಲಿದ್ದಾರೆ’ ಎಂದರು.

‘ಭಾರತದ ಜೊತೆಗೆ ಸೇವಾ ಕ್ಷೇತ್ರಗಳಲ್ಲೂ ಸಹಭಾಗಿತ್ವ ವಹಿಸಲು ಸಿದ್ಧರಿದ್ದೇವೆ. ಅದರಲ್ಲೂ ಕರ್ನಾಟಕಕ್ಕೆ ಮೊದಲ ಆದ್ಯತೆ ನೀಡಲಿದ್ದೇವೆ. ಈ ನಿಟ್ಟಿನಲ್ಲಿ ಮಂಗಳವಾರ ರಾಜ್ಯದ ಪ್ರವಾಸೋದ್ಯಮ ಮತ್ತು ಸಣ್ಣ ಕೈಗಾರಿಕಾ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದೇವೆ ’ ಎಂದರು.

‘ಭಾರತದ ಟಾಟಾ ಮೋಟರ್ಸ್‌, ಮಹೀಂದ್ರ ಮುಂತಾದ ಅನೇಕ ಕಂಪೆನಿಗಳು ಪೆರುವಿನಲ್ಲಿವೆ. ಈಗ ನಾವು ಭಾರತದಲ್ಲಿ ಹೂಡಿಕೆ ಮಾಡಲು ಆಸಕ್ತರಾಗಿದ್ದೇವೆ. ಮೊದಲ ಬಾರಿಗೆ ದಕ್ಷಿಣ ಅಮೆರಿಕದ ರಾಷ್ಟ್ರವೊಂದು  ಕರ್ನಾಟಕದ ಜೊತೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ಎರಡು ರಾಷ್ಟ್ರಗಳ ಜೊತೆ   ಬಾಂಧವ್ಯ ವೃದ್ಧಿಯಾಗಲಿದೆ’ ಎಂದರು.

ಬೆಂಗಳೂರಿನಲ್ಲಿರುವ ಪೆರುವಿನ ಗೌರವ ಕಾನ್ಸುಲ್ ವಿಕ್ರಂ ವಿಶ್ವನಾಥ್‌ ಮಾತನಾಡಿ, ‘ಪೆರು ಮತ್ತು ಭಾರತದ ನಡುವೆ ಈಗಾಗಲೇ 7 ಸಾವಿರ ಕೋಟಿಯ ವಹಿವಾಟು ನಡೆಯುತ್ತಿದೆ. ಹಟ್ಟಿ ಚಿನ್ನದ ಗಣಿ ಪುನಶ್ಚೇತನಕ್ಕೆ ಪೆರು ಮುಂದೆ ಬಂದಿದೆ. ಮಂಗಳವಾರ ಪೆರುವಿನ ನಿಯೋಗದ ಸದಸ್ಯರು ಹಟ್ಟಿ ಗಣಿಗೆ ಭೇಟಿ ನೀಡಲಿದ್ದಾರೆ. ರಾಜ್ಯದ ಇನ್ನಷ್ಟು ಗಣಿಗಳ ಪುನಶ್ವೇತನಕ್ಕೆ ಪ್ರಯತ್ನಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.