ADVERTISEMENT

ಹಣಕ್ಕಾಗಿ ಪ್ರೀತಮ್, ಪ್ರೇಮ್, ಕಾರ್ತಿಕನಾದ ಸಾದತ್ ಖಾನ್!

ಮದುವೆ ನೆಪದಲ್ಲಿ ಎಪ್ಪತ್ತೈದಕ್ಕೂ ಹೆಚ್ಚು ಯುವತಿಯರಿಂದ ಹಣ ಕಿತ್ತ!

​ಪ್ರಜಾವಾಣಿ ವಾರ್ತೆ
Published 27 ಜೂನ್ 2017, 20:29 IST
Last Updated 27 ಜೂನ್ 2017, 20:29 IST
ಯಾರದ್ದೋ ಕಾರಿನ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿರುವ ಸಾದತ್ ಖಾನ್
ಯಾರದ್ದೋ ಕಾರಿನ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಂಡಿರುವ ಸಾದತ್ ಖಾನ್   

ಬೆಂಗಳೂರು: ‘ಮ್ಯಾಟ್ರಿಮೋನಿಯಲ್‌ ವೆಬ್‌­ಸೈಟ್’ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಮದುವೆ­ಯಾಗುವುದಾಗಿ ನಂಬಿಸಿ ಅವರಿಂದ ಲಕ್ಷಾಂತರ ರೂಪಾಯಿ ದೋಚಿದ್ದ ಮಹಾನ್ ವಂಚಕ ಸಾದತ್ ಖಾನ್ (27) ಎಂಬಾತ ಬಾಗಲೂರು ಪೊಲೀಸರ ಬಲೆಗೆ ಬಿದ್ದಿದ್ದಾನೆ.

‘ಹಾಸನದ ಸಾದತ್, ಮೂರು ವರ್ಷಗಳಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಹಾಗೂ ಫೇಸ್‌ಬುಕ್ ಮೂಲಕ ಪರಿಚಯವಾದ 75ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದಾನೆ. ಕೆಲವರ ಮೇಲೆ ಲೈಂಗಿಕ ದೌರ್ಜನ್ಯವನ್ನೂ ಎಸಗಿದ್ದಾನೆ. ಈತನ ವಿರುದ್ಧ 32 ವರ್ಷದ ಮಹಿಳೆಯೊಬ್ಬರು ಜೂನ್ 21ರಂದು ಬಾಗಲೂರು ಠಾಣೆಗೆ ದೂರು ಕೊಟ್ಟಿದ್ದರು. ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಪ್ರಕರಣಗಳು ಬೆಳಕಿಗೆ ಬಂದವು’ ಎಂದು ಈಶಾನ್ಯ ವಿಭಾಗದ ಡಿಸಿಪಿ ಪಿ.ಎಸ್.ಹರ್ಷ ತಿಳಿಸಿದರು.

ಆರೋಪಿಯ ಬಲೆಗೆ ಉಪನ್ಯಾಸಕಿ
ಫಿರ್ಯಾದಿ ಮಹಿಳೆಯು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದಿದ್ದ ಅವರು, ಮತ್ತೊಂದು ಮದುವೆ ಆಗಲು ನಿರ್ಧರಿಸಿದ್ದರು. ಹೀಗಾಗಿ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸ್ವ–ವಿವರ ಹಾಗೂ ಫೋಟೊ ಪ್ರಕಟಿಸಿ ಸೂಕ್ತ ವರನ ಹುಡುಕಾಟದಲ್ಲಿದ್ದರು.

ADVERTISEMENT

ಅದೇ ವೆಬ್‌ಸೈಟ್‌ನಲ್ಲಿ ಪ್ರೇಮ್‌ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಸಾದತ್, ಉಪನ್ಯಾಸಕಿಗೆ ವಂಚನೆ ಮಾಡಲು ಸಂಚು ರೂಪಿಸಿದ್ದ. ಅವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿದ ಆತ, ‘ನಾನು ರೈಲ್ವೆ ನೌಕರ. ಪತ್ನಿಯನ್ನು ತೊರೆದವನು. ನಿಮ್ಮ ಪ್ರೊಫೈಲ್ ಇಷ್ಟವಾಯಿತು. ನಿಮ್ಮೊಂದಿಗೆ ಬಾಳುವ ಇಚ್ಛೆ  ಹೊಂದಿದ್ದೇನೆ. ನಿಮ್ಮ ಮಗುವನ್ನು ನನ್ನ ಮಗಳಂತೆ ನೋಡಿಕೊಳ್ಳುತ್ತೇನೆ’ ಎಂದಿದ್ದ. ಅವನ ನಾಜೂಕಿನ ಮಾತಿಗೆ ಉಪನ್ಯಾಸಕಿ ಮರುಳಾಗಿದ್ದರು.

ನಂತರ ಇಬ್ಬರೂ 3–4 ಸಲ ಪಂಚತಾರ ಹೋಟೆಲ್‌ಗಳಲ್ಲಿ ಭೇಟಿಯಾಗಿದ್ದರು. ತನ್ನನ್ನು ಬಯಸಿ ಬಂದಿದ್ದ ಉಪನ್ಯಾಸಕಿಗೆ ಆರೋಪಿಯೇ ಔತಣ ನೀಡಿದ್ದ. ಗೆಳೆಯನ  ಐಷಾರಾಮಿ ಜೀವನಶೈಲಿ ಕಂಡ ಸಂತ್ರಸ್ತೆಗೆ ಕನಸುಗಳು ಹುಟ್ಟಿಕೊಂಡಿದ್ದವು. ಹೀಗಿರುವಾಗಲೇ,  ತಾನು ಹಣಕಾಸಿನ ಸಮಸ್ಯೆಗೆ ಸಿಲುಕಿರುವುದಾಗಿ ಕತೆ ಕಟ್ಟಿದ್ದ ಆರೋಪಿ, ‘ಇನ್ನೆರಡು ದಿನಗಳಲ್ಲಿ ಹಣ ಮರಳಿಸುತ್ತೇನೆ’ ಎಂದು ಹೇಳಿ ₹ 1.5 ಲಕ್ಷ ಪಡೆದಿದ್ದ.

ದುಡ್ಡು ಕೈಸೇರುತ್ತಿದ್ದಂತೆಯೇ ಆತ ಉಪನ್ಯಾಸಕಿ ಜತೆಗಿನ ಸಂಪರ್ಕ ಕಡಿತ ಮಾಡಿದ್ದ. ಹಲವು ಬಾರಿ ಕರೆ ಮಾಡಿದರೂ, ಉತ್ತರ ಸಿಗದಿದ್ದಾಗ ತಾವು ಮೋಸ ಹೋಗಿರುವುದು ಸಂತ್ರಸ್ತೆಯ ಅರಿವಿಗೆ ಬಂದಿತ್ತು. ತಕ್ಷಣ ಬಾಗಲೂರು ಠಾಣೆ ಮೆಟ್ಟಿಲೇರಿದ್ದ ಅವರು, ಆತನ ಮೊಬೈಲ್ ಸಂಖ್ಯೆ ಹಾಗೂ  ಭಾವಚಿತ್ರವನ್ನೂ ಪೊಲೀಸರಿಗೆ ನೀಡಿದ್ದರು.

ಪೊಲೀಸರು ಖಾತೆ ತೆರೆದರು!
ವಂಚಕನ ಪತ್ತೆಗೆ ಕಾರ್ಯಾಚರಣೆ ಪ್ರಾರಂಭಿಸಿದ ಪೊಲೀಸರು, ಯುವತಿಯೊಬ್ಬಳ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಖಾತೆ ತೆರೆದರು. ನಂತರ ಆತನ ಜತೆ ಯುವತಿ ಸೋಗಿನಲ್ಲೇ ಸಂದೇಶ ವಿನಿಮಯ ಮಾಡಿ, ಯಲಹಂಕ ಸಮೀಪದ ಪಂಚತಾರ ಹೋಟೆಲ್‌ವೊಂದಕ್ಕೆ ಬರುವಂತೆ ಹೇಳಿದ್ದರು.

ಆ ಆಹ್ವಾನದಂತೆಯೇ ಜೂನ್ 21ರ ರಾತ್ರಿ ಹೋಟೆಲ್‌ಗೆ ತೆರಳಿದ್ದ ಆರೋಪಿಗೆ ಆಘಾತ ಎದುರಾಗಿತ್ತು. ಕಾರಣ ಅಲ್ಲಿಯುವತಿಯ ಬದಲಾಗಿ, ಪೊಲೀಸರು ಆತನನ್ನು ಬರಮಾಡಿಕೊಂಡಿದ್ದರು.

ಸಾದತ್ ‘ಲೀಲಾ’ವಳಿ
ಹಾಸನದ ಮಿರ್ಜಾ ಮೊಹಲ್ಲಾ ನಿವಾಸಿಯಾದ ಸಾದತ್ ಖಾನ್, ಮದ್ಯವ್ಯಸನಿಯಾಗಿದ್ದ. ಹೀಗಾಗಿ, ಪೋಷಕರು ಆತನನ್ನು ಮನೆಯಿಂದ ಹೊರ ಹಾಕಿದ್ದರು. 2008ರಲ್ಲಿ ಐಟಿಐ ಮುಗಿಸಿ, ಕೆಲಕಾಲ ಹಾಸನದಲ್ಲೇ ಆಟೊ ಓಡಿಸಿಕೊಂಡಿದ್ದ. 2011ರಲ್ಲಿ ರಾಜಧಾನಿಗೆ ಕಾಲಿಟ್ಟ ಆತ, ಯಶವಂತಪುರದ ವೆಲ್ಡಿಂಗ್ ಶಾಪ್‌ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ.

ಆನಂತರ 2012ರಲ್ಲಿ ಕೋರಮಂಗಲದ ಕಂಟ್ರಿ ಕ್ಲಬ್‌ನಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡಿದ್ದ ಅವನು, ಅಲ್ಲಿ  ನೌಕರಿ ತೊರೆದ ಬಳಿಕ ಹೆಬ್ಬಾಳದ ‘ಸಾರ್ಕೋ’ ಹಾಗೂ ಎಂ.ಜಿ ರಸ್ತೆಯ ‘ಹಾಲ್‌ಸೆಕ್’ ಕಂಪೆನಿಗಳಲ್ಲಿ ಕೆಲಸ ಮಾಡಿದ್ದ. ಆ ಸಂದರ್ಭದಲ್ಲೇ ಹಲವು ಮಹಿಳೆಯರಿಗೆ ವಂಚಿಸಿದ್ದ. ಈ ವಿಷಯವಾಗಿಯೇ ಎರಡೂ ಕಂಪೆನಿಗಳಲ್ಲೂ ಕೆಲಸ ಕಳೆದುಕೊಂಡಿದ್ದ ಎಂದು ಪೊಲೀಸರು ಹೇಳಿದರು.

ಶುರುವಾಯ್ತು ಕುಚೇಷ್ಟೆ
ಹೀಗೆ ಬೀದಿಗೆ ಬಿದ್ದ ಸಾದತ್, 2014ರಿಂದ ಆನ್‌ಲೈನ್ ಮೂಲಕ ತನ್ನ ಕುಚೇಷ್ಟೆ ಮುಂದುವರಿಸಿದ್ದ. ಯುವತಿಯರು ಹಾಗೂ ವಿಚ್ಛೇದಿತ ಮಹಿಳೆಯರಿಗೆ ಗಾಳ ಬೀಸಿ ಸುಲಿಗೆ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ.

ಬೆಂಗಳೂರು ಮಾತ್ರವಲ್ಲದೆ ತುಮಕೂರು, ಮೈಸೂರು, ದೊಡ್ಡಬಳ್ಳಾಪುರ, ಧಾರವಾಡದಲ್ಲಿ ಮಹಿಳೆಯರಿಗೆ ಮೋಸ ಮಾಡಿದ್ದಾನೆ. ಹಿಂದೆ ಕೆ.ಆರ್.ಪುರ ಪೊಲೀಸರು ಸಾದತ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜಾಮೀನಿನ ಮೇಲೆ ಬಿಡುಗಡೆಯಾದ ಆತ, ಮತ್ತೆ ಹಳೇ ಚಾಳಿಯನ್ನೇ ಮುಂದುವರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಶ್ರೀಮಂತರಿಗೇ ಗಾಳ
‘ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತಮ್ಮ ಆರ್ಥಿಕ ಸ್ಥಿತಿಗತಿಗೆ ಅನುಗುಣವಾಗಿ ವಧು-ವರರ ಆಯ್ಕೆಗೆ ಅವಕಾಶವಿದೆ. ಅದಕ್ಕಾಗಿ ಗೋಲ್ಡ್ ಹಾಗೂ ಪ್ಲಾಟಿನಂ ಕಾರ್ಡ್ ಎಂದು ವಿಭಾಗಿಸಲಾಗಿದೆ. ಹೆಚ್ಚಿನ ಶುಲ್ಕ ಭರಿಸಿ ಪ್ಲಾಟಿನಂ ಖಾತೆಯನ್ನೇ ಪಡೆದಿದ್ದ ಸಾದತ್, ಆ ಜಾಲ ತಾಣಗಳಲ್ಲಿ ಶ್ರೀಮಂತ ಕುಟುಂಬದ  ಹೆಣ್ಣು ಮಕ್ಕಳಿಗೆ ಗಾಳ ಹಾಕುತ್ತಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಉಪನ್ಯಾಸಕಿಗೆ ₹ 1.5 ಲಕ್ಷ, ಆರ್‌.ಟಿ.ನಗರದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರಿಗೆ ₹ 17 ಲಕ್ಷ, ಜಯನಗರದ ಮಹಿಳೆಗೆ ₹ 4.20 ಲಕ್ಷ, ದೊಡ್ಡಬಳ್ಳಾಪುರದ ಯುವತಿಗೆ ₹ 2.30 ಲಕ್ಷ, ಕೆ.ಆರ್.ಪುರದ ಮಹಿಳೆಗೆ ₹ 1.30 ಲಕ್ಷ, ಮೈಸೂರಿನ ಕೆ.ಆರ್.ಮೊಹಲ್ಲಾದ ವಿದ್ಯಾರ್ಥಿನಿಗೆ ₹ 2.80 ಲಕ್ಷ ಸೇರಿ ಹಲವರಿಂದ ₹ 45 ಲಕ್ಷಕ್ಕೂ ಹೆಚ್ಚು ಸುಲಿಗೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಈವರೆಗೆ 75ಕ್ಕೂ ಹೆಚ್ಚು ಮಂದಿಗೆ ವಂಚಿಸಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ’ ಎಂದು ಮಾಹಿತಿ ನೀಡಿದ್ದಾರೆ.

ಹಣ ಕೇಳಿದ್ದಕ್ಕೆ ಅತ್ಯಾಚಾರ ಎಸಗಿದ

ಸಾಫ್ಟ್‌ವೇರ್ ಕಂಪೆನಿಯ ಮಹಿಳಾ ಉದ್ಯೋಗಿಯೊಬ್ಬರಿಂದ ₹ 17 ಲಕ್ಷ ಪೀಕಿದ್ದ ಸಾದತ್ ಖಾನ್, ಹಣ ಮರಳಿಸುವ ನೆಪದಲ್ಲಿ ಅಪಾರ್ಟ್‌ಮೆಂಟ್‌ಗೆ ಕರೆಸಿ ಅತ್ಯಾಚಾರ ಎಸಗಿ ಕಳುಹಿಸಿದ್ದ ಸಂಗತಿಯೂ ಬೆಳಕಿಗೆ ಬಂದಿದೆ.

‘2014ರಲ್ಲಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ರಾಹುಲ್ ರಾಜಶೇಖರ್ ಹೆಸರಿನ ವ್ಯಕ್ತಿಯ ಪರಿಚಯವಾಗಿತ್ತು. ಮದುವೆ ಆಗುವುದಾಗಿ ನಂಬಿಸಿದ ಆತ, ಮೊದಲು ತಾಯಿಗೆ ಅಪಘಾತವಾಗಿದೆ ಎಂದು ಹೇಳಿ ₹ 4 ಲಕ್ಷವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದ. ನಂತರ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಎಟಿಎಂ ಕಾರ್ಡನ್ನು ಆತನಿಗೆ ಕೊಟ್ಟಿದ್ದೆ. ಅದರಿಂದ ಸುಮಾರು ₹ 6 ಲಕ್ಷದವರೆಗೆ ಡ್ರಾ ಮಾಡಿದ್ದ. ಸೋದರಿಯ ಮದುವೆ ಮಾಡಬೇಕೆಂದು ₹ 7 ಲಕ್ಷ ಪಡೆದಿದ್ದ’ ಎಂದು ಸಂತ್ರಸ್ತೆ ಯಲಹಂಕ ಠಾಣೆಗೆ ದೂರು ಕೊಟ್ಟಿದ್ದರು.

‘ಮದುವೆ ಆಗಲು ನಿರಾಕರಿಸಿದ ಕಾರಣಕ್ಕೆ ನನ್ನ ಹಣವನ್ನು ವಾಪಸ್ ಕೇಳಿದ್ದೆ. ಆಗ ಯಲಹಂಕದ ಕಟ್ಟಿಗೆಹಳ್ಳಿಯಲ್ಲಿರುವ ತನ್ನ ಫ್ಲ್ಯಾಟ್‌ಗೆ ಬಂದು ಹಣ ಪಡೆದುಕೊಂಡು ಹೋಗುವಂತೆ ಹೇಳಿದ್ದ. ಅಲ್ಲಿಗೆ ಹೋದಾಗ ನನ್ನ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಹಣವನ್ನೂ ಮರಳಿಸದೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದ’ ಎಂದು ಅವರು ಆರೋಪಿಸಿದ್ದರು.

‘ನನಗೆ ವಂಚಿಸಿರುವ ವ್ಯಕ್ತಿಯ ಹೆಸರು ಸಾದತ್ ಖಾನ್ ಎಂಬುದು ಮೈಸೂರು ಪೊಲೀಸರಿಂದ ಗೊತ್ತಾಯಿತು. ಹೀಗಾಗಿ, ಆತನ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಹಾಗೂ ನನ್ನ ಹಣವನ್ನು ವಾಪಸ್ ಕೊಡಿಸಬೇಕು’ ಎಂದು ಅವರು ಕೋರಿದ್ದರು.

ವಂಚಕನೊಬ್ಬ ನಾಮ ಹಲವು
‘ಆರೋಪಿಯು ಮಹಿಳೆಯರನ್ನು ವಂಚಿಸುವ ಉದ್ದೇಶದಿಂದಲೇ ಪ್ರೀತಮ್ ಕುಮಾರ್, ರಾಹುಲ್, ಪ್ರೇಮ್‌ಕುಮಾರ್, ಪ್ರೇಮ್ ಸಾಗರ್, ಕಾರ್ತಿಕ್...ಹೀಗೆ ನಾನಾ ಹೆಸರುಗಳಲ್ಲಿ ನಕಲಿ ಖಾತೆಗಳನ್ನು ತೆರೆದಿದ್ದ. ಆ ಪ್ರೊಫೈಲ್‌ಗಳಲ್ಲಿ ತಾನು ಸಾಫ್ಟ್‌ವೇರ್ ಎಂಜಿನಿಯರ್, ರೈಲ್ವೆ ಇಲಾಖೆ ಅಧಿಕಾರಿ, ಉದ್ಯಮಿ ಎಂದು ಬರೆದುಕೊಂಡಿದ್ದ.

ಯಾರದ್ದೋ ಐಷಾರಾಮಿ ಕಾರಿನ ಪಕ್ಕದಲ್ಲಿ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದ ಸಾದತ್, ‘ಇತ್ತೀಚೆಗೆ ಖರೀದಿಸಿದ ಕಾರು’ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಕಟಿಸುತ್ತಿದ್ದ. ಈ ಮೂಲಕ ಯುವತಿಯರನ್ನು ಮರುಳು ಮಾಡುತ್ತಿದ್ದ ಎಂದು ತನಿಖಾಧಿಕಾರಿಗಳು ಹೇಳಿದರು.

* ಸಾದತ್‌ ಖಾನ್‌ನಿಂದ ವಂಚನೆಗೆ ಒಳಗಾದವರು ಯಲಹಂಕ ಅಥವಾ ಬಾಗಲೂರು ಠಾಣೆಗೆ ದೂರು ಕೊಡಬಹುದು

-ಹರ್ಷ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.