ADVERTISEMENT

ಹತ್ತು ಗಂಟೆಯಲ್ಲಿ 10 ಚದರದ ಮನೆ ನಿರ್ಮಾಣ!

ಪರಿಸರಸ್ನೇಹಿ ಈ ಮನೆಗೆ ಖರ್ಚು ಕೂಡ ಕಡಿಮೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2017, 19:55 IST
Last Updated 19 ಜನವರಿ 2017, 19:55 IST
ಕಾಂಪೊಸಿಟ್ಸ್  ಟೆಕ್ನಾಲಜಿ ಪಾರ್ಕ್‌ನಲ್ಲಿ ಪ್ರಾಯೋಗಿಕವಾಗಿ ನಿರ್ಮಾಣಗೊಂಡಿರುವ ಪರಿಸರಸ್ನೇಹಿ ಮನೆ.
ಕಾಂಪೊಸಿಟ್ಸ್ ಟೆಕ್ನಾಲಜಿ ಪಾರ್ಕ್‌ನಲ್ಲಿ ಪ್ರಾಯೋಗಿಕವಾಗಿ ನಿರ್ಮಾಣಗೊಂಡಿರುವ ಪರಿಸರಸ್ನೇಹಿ ಮನೆ.   

ಬೆಂಗಳೂರು: ಇಟ್ಟಿಗೆ ಬೇಕಿಲ್ಲ. ಮರ–ಮರಳಿನ ಅಗತ್ಯವೂ ಇಲ್ಲ. ವರ್ಷಗಟ್ಟಲೆ ಸಮಯವೂ ಬೇಕಿಲ್ಲ.  ಹತ್ತು ಚದರದ ಪರಿಸರಸ್ನೇಹಿ ಮನೆ ಕೇವಲ 10 ಗಂಟೆಯಲ್ಲಿ ನಿರ್ಮಾಣ ಆಗಲಿದೆ! ಕೆಂಗೇರಿ ಉಪನಗರದಲ್ಲಿನ ಕಾಂಪೊಸಿಟ್ಸ್  ಟೆಕ್ನಾಲಜಿ ಪಾರ್ಕ್‌ನಲ್ಲಿರುವ ‘ಸೊಸೈಟಿ ಫಾರ್‌ ಡೆವೆಲಪ್‌ಮೆಂಟ್‌ ಆಫ್‌ ಕಾಂಪೊಸಿಟ್ಸ್‌’ ಸಂಸ್ಥೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಈ ಸಂಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪಾಲುದಾರರಾಗಿವೆ.

ಹೊಸ ಮಾದರಿಯ ಮನೆ ನಿರ್ಮಾಣಕ್ಕೆ ಬೇಕಿರುವ ಎಲ್ಲ ಯಂತ್ರೋಪಕರಣಗಳು ಪಾರ್ಕ್‌ನ ಆವರಣದಲ್ಲಿ ಅಳಡಿಸಲಾಗಿದ್ದು, ಪ್ರಾಯೋಗಿಕವಾಗಿ ಮನೆಗಳನ್ನು ನಿರ್ಮಿಸಲಾಗಿದೆ.

ಹತ್ತಾರು ಅಡಿ ಆಳದಿಂದ ಅಡಿಪಾಯ ಹಾಕುವ ಅಗತ್ಯ ಇಲ್ಲ. ಒಂದೆರಡು ಅಡಿ ಅಗೆದು ಮಣ್ಣು ಮತ್ತು ಕಾಂಕ್ರಿಟ್‌ ತುಂಬಿ ಸಮತಟ್ಟು ಮಾಡಿದರೆ ಸಾಕು. ಮನೆಯ ವಿನ್ಯಾಸದ ನೀಲ ನಕ್ಷೆ ತಯಾರಿಸಿ ಇಲ್ಲಿನ ಎಂಜಿನಿಯರ್‌ಗಳಿಗೆ ನೀಡಿದರೆ ಬೇಕಿರುವ ಪರಿಕರಗಳನ್ನು ಸಜ್ಜು ಮಾಡಿಕೊಂಡು ಸ್ಥಳಕ್ಕೆ 30 ಜನರ ತಂಡ ಬಂದು ಹತ್ತು ಚದರದ ಮನೆಯನ್ನು 10 ಗಂಟೆಯಲ್ಲಿ ನಿರ್ಮಿಸಲಿದ್ದಾರೆ.

ಈ ಮನೆಗಳಿಗೆ ವಿಮಾನಗಳ ನಿರ್ಮಾಣಕ್ಕೆ ಬಳಸುವ ಲೈಟ್‌ ಗೇಜ್‌ ಸ್ಟೀಲ್‌ ಫ್ರೇಮ್‌ಗಳನ್ನು ಉಪಯೋಗಿಸಲಾಗುತ್ತದೆ. ಎಷ್ಟೇ ಅಂತಸ್ತಿನ ಮನೆಯಾದರೂ ಪಿಲ್ಲರ್‌ಗಳಿಲ್ಲದೆ ಸ್ಟೀಲ್ ಫ್ರೇಮ್‌ಗಳ ಸಹಾಯದಿಂದಲೇ ನಿಲ್ಲಿಸಲಾಗುತ್ತದೆ ಎನ್ನುತ್ತಾರೆ ಇಲ್ಲಿನ ಎಂಜಿನಿಯರ್‌ಗಳು.

ಗೋಡೆಗಳಿಗೆ ಇಟ್ಟಿಗೆ ಬದಲು ತೆಂಗಿನ ನಾರು ಮತ್ತು ಥರ್ಮಕೋಲ್‌ಗಳನ್ನು ಬಳಸಲಾಗುತ್ತದೆ. ಕಿಟಿಕಿಗಳಿಗೆ ಮರದ ಬದಲಿಗೆ ಮರದ ಹೊಟ್ಟು ಹಾಗೂ ಇನ್ನಿತರ ನಿರುಪಯುಕ್ತ ವಸ್ತುಗಳನ್ನು ಬಳಸಲಾಗುತ್ತದೆ ಎಂದು ಅವರು ವಿವರಿಸಿದರು.

ಪ್ರಯೋಜನಗಳು: ಮನೆ ನಿರ್ಮಾಣಕ್ಕೆ ಖರ್ಚು ಕಡಿಮೆ ಆಗಲಿದೆ. ಪ್ರತಿ ಚದರ ಅಡಿಗೆ ₹ 1,200 ಮಾತ್ರ ವೆಚ್ಚವಾಗಲಿದೆ.  ನಂತರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಿಸಿಕೊಳ್ಳಬಹುದು.

ಸಂಪೂರ್ಣ ಸ್ಟೀಲ್‌ ಫ್ರೇಮ್ ಅಳವಡಿಕೆ ಆಗಿರುವ ಕಾರಣ ಬಿರುಗಾಳಿ ಅಥವಾ ಭೂಕಂಪಕ್ಕೆ ಮನೆ ಗೋಡೆ ಬಿದ್ದು ಹೋಗುವ ಹಾಗೂ ಮೇಲ್ಚಾವಣಿ ಹಾರಿ ಹೋಗುವ ಭಯ ಇಲ್ಲ.

ಬೆಂಕಿ ಅನಾಹುತಕ್ಕೂ ಹಾನಿ ಸಂಭವಿಸುವುದಿಲ್ಲ. ಪ್ರಾಯೋಗಿಕವಾಗಿ ನಿರ್ಮಿಸಿರುವ ಮನೆಯಲ್ಲಿ 10 ಗಂಟೆಗೂ ಹೆಚ್ಚು ಕಾಲ ಬೆಂಕಿ ಹಾಕಿ ಪರೀಕ್ಷಿಸಲಾಗಿದೆ ಎಂದು  ಸಂಯೋಜಿತ ತಾಂತ್ರಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಆರ್‌. ಗೋಪಾಲನ್‌ ವಿವರಿಸಿದರು. ಮನೆ ಮಾತ್ರಲ್ಲದೆ ವಿದ್ಯಾರ್ಥಿ ನಿಲಯ, ಅಂಗನವಾಡಿ ಸೇರಿದಂತೆ ಎಲ್ಲಾ ಕಟ್ಟಡಗಳನ್ನು ಈ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಬಹುದು. ಕನಿಷ್ಠ 60 ವರ್ಷ ಬಾಳಿಕೆ ಬರಲಿದೆ.

ಲೈಟ್‌ ಗೇಜ್‌ ಸ್ಟೀಲ್ ಫ್ರೇಮ್ ಸೇರಿದಂತೆ ಇಲ್ಲಿನ ಉತ್ಪಾದಿಸುವ ವಸ್ತುಗಳನ್ನು ಸರ್ಕಾರಿ ಕಟ್ಟಡಗಳಿಗೆ ಬಳಸಲು ಎಸ್‌.ಆರ್‌ (ಶೆಡ್ಯೂಲ್ ರೇಟ್‌) ನಿಗದಿ ಮಾಡಿದೆ. ಈಗಾಗಲೇ ಆಡುಗೋಡಿಯಲ್ಲಿ ಪೊಲೀಸ್‌ ವಸತಿಗೃಹಗಳನ್ನು ಇದೇ ತಂತ್ರಜ್ಞಾನ ಬಳಸಿ ನಿರ್ಮಿಸಲಾಗಿದೆ ಎಂದು ವಿವರಿಸಿದರು.

ಸ್ಥಳಾಂತರಕ್ಕೂ ಅವಕಾಶ
ಮನೆಗಳನ್ನು ಒಂದು ಸ್ಥಳದಿಂದ ಇನ್ನೊಂದೆಡೆಗೆ ಸ್ಥಳಾಂತರ ಮಾಡಿಕೊಳ್ಳಲು ಈ ತಂತ್ರಜ್ಞಾನದಲ್ಲಿ ಅವಕಾಶ ಇದೆ. ವಿನ್ಯಾಸ ಸಿದ್ಧಪಡಿಸುವ ಮುನ್ನವೇ ತಿಳಿಸಿದರೆ ಸ್ಥಳಾಂತರ ಮಾಡುವ ತಂತ್ರಜ್ಞಾನ ಅಳವಡಿಕೆ ಮಾಡಲಾಗುತ್ತದೆ ಎಂದು ಎಂಜಿನಿಯರ್‌ಗಳು ತಿಳಿಸಿದರು.

ಮೋದಿ ಯೋಗಾಸನಕ್ಕೆ  ಪರಿಸರ ಸ್ನೇಹಿ ಮನೆ
ಪ್ರಧಾನಿ ನರೇಂದ್ರ ಮೋದಿ ಯೋಗಾಸನಕ್ಕಾಗಿ ಬೆಂಗಳೂರಿನ ಸಂಯೋಜಿತ ತಾಂತ್ರಿಕ ಉದ್ಯಾನದಲ್ಲಿ ಮನೆ ನಿರ್ಮಣವಾಗುತ್ತಿದೆ. ಸ್ಟೀಲ್‌ ಫ್ರೇಮ್,  ತೆಂಗಿನ ನಾರು ಮತ್ತು ಥರ್ಮಾಕೋಲ್ ಶೀಟ್‌ಗಳನ್ನು ಬಳಸಿ  ಗೋಡೆ ಮತ್ತು ಸೂರು ನಿರ್ಮಿಸಲಾಗುತ್ತಿದೆ.

ಕೊಠಡಿಯಲ್ಲಿ ಹವಾನಿಯಂತ್ರಿತ ಯಂತ್ರ ಇಲ್ಲದೆ ಬೇಸಿಗೆ ಮತ್ತು ಚಳಿಗಾಲದಲ್ಲಿ ವಾತಾವರಣ ಸಮತೋಲನದಲ್ಲಿ ಇರಲಿದೆ.  ಪ್ರಾಯೋಗಿಕವಾಗಿ ಸಿದ್ಧಪಡಿಸಿ ಪರಿಶೀಲಿಸಲಾಗಿದ್ದು, ಇದನ್ನು  ಕಳಚಿ ದೆಹಲಿಯ ಪ್ರಧಾನಿ ನಿವಾಸದ ಆವರಣಕ್ಕೆ ಕೊಂಡೊಯ್ದು ಮತ್ತೆ ಜೋಡಿಸಲಾಗುವುದು ಎಂದು ಎಂಜಿನಿಯರ್‌ಗಳು ತಿಳಿಸಿದರು.

ಕೇರಳದ ಮುಖ್ಯಮಂತ್ರಿ ಕಚೇರಿಗೂ ಇದೇ ಮಾದರಿಯ ಕೊಠಡಿಯೊಂದು ಸಿದ್ಧವಾಗುತ್ತಿದೆ. ಪ್ರತಿ ಮನೆಗೆ ₹ 2.50 ಲಕ್ಷದಿಂದ ₹ 3 ಲಕ್ಷ ವೆಚ್ಚ ಆಗಲಿದೆ ಎಂದು ಅವರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.