ADVERTISEMENT

‘ಹಸಿರು ಹೊದಿಕೆ ಚಾರಣ’ ಪಥ ನಿರ್ಮಾಣ

ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಮತ್ತೆ ನಿಯಮ ಉಲ್ಲಂಘಿಸಿ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2017, 19:31 IST
Last Updated 29 ಏಪ್ರಿಲ್ 2017, 19:31 IST
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಾಣವಾಗಿರುವ ಹಸಿರು ಹೊದಿಕೆ ಚಾರಣ ಪಥ.
ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿರ್ಮಾಣವಾಗಿರುವ ಹಸಿರು ಹೊದಿಕೆ ಚಾರಣ ಪಥ.   

ಬೆಂಗಳೂರು: ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಗಳನ್ನು ಗಾಳಿಗೆ ತೂರಿ  ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಆಡಳಿತ ವ್ಯಾಪ್ತಿಗೆ ಬರುವ ದಾಂಡೇಲಿ ವನ್ಯಧಾಮದ ಕ್ಯಾಸಲ್‌ರಾಕ್ ವಲಯದಲ್ಲಿ ‘ಹಸಿರು ಹೊದಿಕೆ ಚಾರಣ’ (ಕ್ಯಾನೋಪಿ ವಾಕ್) ಪ್ರವಾಸೋದ್ಯಮ ಯೋಜನೆಯನ್ನು ಕೈಗೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.

ವನ್ಯಜೀವಿ ಧಾಮದಲ್ಲಿ ಪ್ರವಾಸೋದ್ಯಮ ಚಟುವಟಿಕೆ ನಡೆಸಲು,1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 33 (ಎ) ಪ್ರಕಾರ ಮುಖ್ಯ ವನ್ಯಜೀವಿ ವಾರ್ಡನ್‌ ಅವರ ಅನುಮತಿ ಕಡ್ಡಾಯ. ಈ ಯೋಜನೆಗೆ ಅವರ ಕಚೇರಿಯಿಂದ ಯಾವುದೇ ಅನುಮತಿ ನೀಡಿಲ್ಲ ಎಂಬ ಅಂಶ ವನ್ಯಜೀವಿ ಕಾಯಕರ್ತರೊಬ್ಬರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳಿಂದ ತಿಳಿದುಬಂದಿದೆ. ಈ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ರಾಷ್ಟ್ರೀಯ ವನ್ಯಜೀವಿ ಮಂಡಳಿ ಹಾಗೂ ಹುಲಿ ಪ್ರಾಧಿಕಾರದ ಅನುಮತಿ ಪಡೆಯದೆಯೇ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗ್ರೇಟ್‌ ಕೆನರಾ ಟ್ರೇಲ್ ಯೋಜನೆ ಅನುಷ್ಠಾನಗೊಳಿಸಿದ ಪ್ರಕರಣದ  ಬೆನ್ನಲ್ಲೇ ನಡೆದ ಇನ್ನೊಂದು ಉಲ್ಲಂಘನೆ ಪ್ರಕರಣ ಇದಾಗಿದೆ. 



ಏನಿದು ಯೋಜನೆ: ‘ಪ್ರವಾಸಿಗರಿಗೆ ಮರ, ಪಕ್ಷಿ, ಪ್ರಾಣಿಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕ್ಯಾಸಲ್‌ರಾಕ್‌ ವಲಯದ ಕುವೇಶಿಯಿಂದ ಸುಪ್ರಸಿದ್ಧ ದೂದ್‌ಸಾಗರ ಜಲಪಾತಕ್ಕೆ ಹೋಗುವ ದಾರಿಯಲ್ಲಿ ನೆಲದಿಂದ ಸುಮಾರು 30 ಮೀಟರ್ ಎತ್ತರದಲ್ಲಿ 233 ಮೀಟರ್ ಉದ್ದದ ಕಾಲುದಾರಿಯನ್ನು ನಿರ್ಮಿಸಲಾಗಿದೆ.’

‘ಇದಕ್ಕೆ ಉಕ್ಕಿನ ಕೇಬಲ್‌ಗಳು, ಮರದ ಹಲಗೆಗಳು, ತಂತಿ ಹಿಡಿಕಟ್ಟುಗಳು, ಜಾಲರಿ, ಉಕ್ಕಿನ ಹಾಗೂ ಅಲ್ಯೂಮಿನಿಯಂ ಚೌಕಟ್ಟುಗಳನ್ನು ಬಳಸಲಾಗಿದೆ. ಕಾಲುದಾರಿಯನ್ನು 10 ಪ್ಲಾಟ್‌ಫಾರ್ಮ್‌ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಪ್ಲಾಟ್‌ಫಾರ್ಮ್‌ನಲ್ಲಿ 8-10 ಜನರು ನಿಲ್ಲಬಹುದು. ಎತ್ತರದ ಮರಗಳ ನಡುವೆ ಪ್ರಕೃತಿ ಸೌಂದರ್ಯ ಸವಿಯಲು ಅವಕಾಶ ಕಲ್ಪಿಸಲಾಗಿದೆ’ ಎಂದು ವನ್ಯಜೀವಿ ಕಾರ್ಯಕರ್ತರೊಬ್ಬರು  ತಿಳಿಸಿದರು.  

‘ಕಾಲಿ ಹುಲಿ ಸಂರಕ್ಷಣಾ ಯೋಜನೆ ನಿರ್ದೇಶಕರಾಗಿದ್ದ ಶ್ರೀನಿವಾಸುಲು ಅವರು ಕ್ಯಾನೋಪಿ ವಾಕ್ ಬಗ್ಗೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಿದ್ದರು. 2016ರ ಫೆಬ್ರುವರಿಯಲ್ಲಿ ಪ್ರವಾಸೋದ್ಯಮ ಇಲಾಖೆ ಆರ್ಥಿಕ ಅನುಮೋದನೆ ನೀಡಿತ್ತು. ಕೆನರಾ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಸಿಸಿಎಫ್‌) ಕಾಮಗಾರಿ ಆರಂಭಿಸಲು 2016ರ ಮಾರ್ಚ್‌ನಲ್ಲಿ  ಅನುಮತಿ ನೀಡಿದ್ದರು.’

‘ಮುಖ್ಯ ವನ್ಯಜೀವಿ ವಾರ್ಡನ್‌ ಪೂರ್ವಾನುಮತಿ  ಪಡೆಯದೆಯೇ ಇಬ್ಬರೂ ಅಧಿಕಾರಿಗಳು ಕಾಮಗಾರಿ ಆರಂಭಿಸಲು ಅನುವು ಮಾಡಿಕೊಟ್ಟಿದ್ದರು. 2016 ರ ಸೆಪ್ಟೆಂಬರ್‌ನಲ್ಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಪಾಲಯ್ಯ ಅವರೂ ಅನುಮತಿ ಪಡೆಯದೆಯೇ ಕಾಮಗಾರಿ ಮುಂದುವರೆಸಿದರು’ ಎಂದು ಅವರು ಆರೋಪಿಸಿದರು.  

‘ಈ ಯೋಜನೆಯ ಪ್ರಗತಿ ವರದಿಯನ್ನು ನಿರ್ದೇಶಕರು, 2016ರ ನವೆಂಬರ್‌ನಲ್ಲಿ ಕೆನರಾ ವೃತ್ತದ ಸಿಸಿಎಫ್‌ಗೆ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ (ಪಿಸಿಸಿಎಫ್‌) (ವನ್ಯಜೀವಿ),   ಪಿಸಿಸಿಎಫ್‌ (ಮುಖ್ಯಸ್ಥರು, ಅರಣ್ಯಪಡೆ)  ಅವರಿಗೆ ಸಲ್ಲಿಸಿದ್ದರು.

ಆಗ ಅನುಮತಿ ಬಗ್ಗೆ ಚಕಾರ ಎತ್ತದ ಕೆನರಾ ವೃತ್ತದ ಸಿಸಿಎಫ್‌, 2016ರ  ಡಿಸೆಂಬರ್ನಲ್ಲಿ ಪಿಸಿಸಿಎಫ್‌ (ವನ್ಯಜೀವಿ) ಅವರಿಗೆ ಪತ್ರ ಬರೆದು ಈ ಕಾಮಗಾರಿಗೆ ಮುಖ್ಯ ವನ್ಯಜೀವಿ ವಾರ್ಡನ್‌ ಅನುಮತಿ ಕಡ್ಡಾಯವೆಂದು ಉಲ್ಲೇಖಿಸುತ್ತಾರೆ. ಅಕ್ರಮ ಕಾಮಗಾರಿ ನಡೆದ ಬಳಿಕವೂ ಹಿರಿಯ ಅಧಿಕಾರಿಗಳೂ ಈ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

ಕಾನೂನು ಉಲ್ಲಂಘನೆ: ‘ಅನುಮತಿ ಇಲ್ಲದೇ ವನ್ಯಧಾಮದಲ್ಲಿ ಅರಣ್ಯಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸುವುದು 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 29ರ (ವನ್ಯಜೀವಿಗಳ ಆವಾಸ ಸ್ಥಾನ ನಾಶಮಾಡುವುದು) ಸ್ಪಷ್ಟ ಉಲ್ಲಂಘನೆ.

ADVERTISEMENT

ಹುಲಿ ಸಂರಕ್ಷಿತ ಪ್ರದೇಶಕ್ಕೆ ಸಂಪರ್ಕಿಸುವ ಜಾಗದಲ್ಲಿ ಅನುಷ್ಠಾನಗೊಂಡ ಈ ಕಾಮಗಾರಿ ವನ್ಯಜೀವಿ ಸಂರಕ್ಷಣಾ ಕಾಯ್ದೆ,  ಸೆಕ್ಷನ್ 38 (ಒ) (1) (ಜಿ)ಯ ಉಲ್ಲಂಘನೆ ಕೂಡ ಆಗುತ್ತದೆ’ ಎಂದು ಅವರು ವಿವರಿಸಿದರು. 

ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ: ನಿಯಮ ಉಲ್ಲಂಘನೆಗೆ ಕಾರಣರಾದ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ವನ್ಯಜೀವಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.