ADVERTISEMENT

ಹಾಗೇ ಉಳಿದಿದೆ ಶಾಸಕರ ಹೆಸರಿನ ನಾಮಫಲಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 19:58 IST
Last Updated 10 ಏಪ್ರಿಲ್ 2018, 19:58 IST
ಹಾಗೇ ಉಳಿದಿದೆ ಶಾಸಕರ ಹೆಸರಿನ ನಾಮಫಲಕ
ಹಾಗೇ ಉಳಿದಿದೆ ಶಾಸಕರ ಹೆಸರಿನ ನಾಮಫಲಕ   

ಬೆಂಗಳೂರು: ಚಿಕ್ಕಬಾಣಾವರದ ದ್ವಾರಕ ನಗರದ ರಸ್ತೆಗಳಲ್ಲಿನ ನಾಮಫಲಕಗಳ ಮೇಲೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರಾಜು ಹೆಸರು ವಿಜೃಂಭಿಸುತ್ತಿದೆ.

‘ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಶಾಸಕರ ಹೆಸರಿರುವ ಫಲಕಗಳನ್ನು ಹಾಗೆಯೇ ಬಿಟ್ಟಿದ್ದನ್ನು ನೋಡಿದರೆ, ಚುನಾವಣಾ ಆಯೋಗದ ಅಧಿಕಾರಿಗಳು ಬಿಜೆಪಿ ಜೊತೆ ಶಾಮೀಲಾಗಿದ್ದಾರೆ ಎಂದು ಭಾಸವಾಗುತ್ತದೆ’ ಎಂದು ದ್ವಾರಕನಗರದ ನಿವಾಸಿ ಶ್ರೀನಿವಾಸ್‌ ಅಭಿಪ್ರಾಯ ವ್ಯಕ್ತಪಡಿಸಿದರು.

‘ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದಲೇ ಫಲಕಗಳು ಇನ್ನೂ ರಾರಾಜಿಸುತ್ತಿರಬೇಕು. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ADVERTISEMENT

ಹೈಕೋರ್ಟ್‌ ಹಿರಿಯ ವಕೀಲ ನಾಗರಾಜು, ‘ರಸ್ತೆಗಳಲ್ಲಿ ಹಾಕಿರುವ ನಾಮಫಲಕಗಳಲ್ಲಿ ಶಾಸಕ ಮುನಿರಾಜು ಅವರ ಹೆಸರಿದ್ದರೆ, ಖಂಡಿತಾ ಅದನ್ನು ಮುಚ್ಚಬೇಕು. ಕಾನೂನನ್ನು ಎಲ್ಲರೂ ಗೌರವಿಸಬೇಕು. ಚುನಾವಣಾಧಿಕಾರಿಗಳು 15ನೇ ವಾರ್ಡ್ ಸದಸ್ಯ ಮತ್ತು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ವಾರ್ಡ್ ಸದಸ್ಯನ ಸದಸ್ಯತ್ವವನ್ನು ರದ್ದುಪಡಿಸಬಹುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮತಿ, ‘ಎಲ್ಲ ನಾಮಫಲಕಗಳನ್ನು ಮುಚ್ಚಲಾಗಿತ್ತು. ಆದರೆ ಕಿಡಿಗೇಡಿಗಳು ಅದನ್ನು ತೆಗಿದಿದ್ದಾರೆ’ ಎಂದು ಸ್ಪಷ್ಟನೆ ನೀಡಿದರು.

ಮನೆಗಳ ಬಾಗಿಲಿಗೆ ಕಾಂಗ್ರೆಸ್‌ ಸ್ಟಿಕ್ಕರ್‌

ದ್ವಾರಕನಗರದ ಅನೇಕ ಮನೆಗಳ ಬಾಗಿಲುಗಳ ಮೇಲೆ ಮನೆ ಮನೆಗೆ ಕಾಂಗ್ರೆಸ್‌ ಎನ್ನುವ ಸ್ಟಿಕ್ಕರ್‌ಗಳನ್ನು ಅಂಟಿಸಲಾಗಿದೆ. ಅವುಗಳನ್ನು ತೆಗೆದು ಹಾಕುವಂತೆ ನಿವಾಸಿಗಳಿಗೆ ಹೇಳಿದ್ದೇವೆ. ಆದರೆ, ಹೆಚ್ಚಿನವರು ತೆಗೆದಿಲ್ಲ ಎಂದು ಸ್ಥಳೀಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.