ADVERTISEMENT

ಹಾಡಹಗಲೇ ಒಂಟಿ ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2014, 19:42 IST
Last Updated 27 ನವೆಂಬರ್ 2014, 19:42 IST
ವಿಜಯಲಕ್ಷ್ಮಿ
ವಿಜಯಲಕ್ಷ್ಮಿ   

ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಜಿಲ್ಲಾ ಪಂಚಾಯತ್‌ನ ಸಹಾಯಕ ಎಂಜಿನಿಯರ್‌ವೊಬ್ಬರ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಸಮೀಪದ ಎಚ್‌ಎಂಟಿ ಲೇಔಟ್‌ನಲ್ಲಿ ಗುರುವಾರ ನಡೆದಿದೆ.

ದೇವನಹಳ್ಳಿ ಪಂಚಾಯತ್‌ ರಾಜ್ ಉಪ­ವಿಭಾಗದ ಸಹಾಯಕ ಎಂಜಿನಿಯರ್ ನರಸಿಂಹಯ್ಯ ಅವರ ಪತ್ನಿ ವಿಜಯಲಕ್ಷ್ಮಿ (38) ಕೊಲೆಯಾದವರು. ನರಸಿಂಹಯ್ಯ ಅವರು ಎಂದಿನಂತೆ ಬೆಳಿಗ್ಗೆ 9 ಗಂಟೆಗೆ ಕೆಲಸಕ್ಕೆ ಹೋಗಿದ್ದರು. ಇಬ್ಬರು ಮಕ್ಕಳು ಶಾಲೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿರುವ ದುಷ್ಕರ್ಮಿಗಳು, ಟವಲ್‌ನಿಂದ ಕುತ್ತಿಗೆ ಬಿಗಿದು ವಿಜಯಲಕ್ಷ್ಮಿ ಅವರನ್ನು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಶಾಲೆಗೆ ಹೋಗಿದ್ದ ಏಳು ವರ್ಷದ ಮಗ ಯಶವಂತ್, ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದಾನೆ. ತಾಯಿ ಸ್ನಾನದ ಕೋಣೆಯಲ್ಲಿ ಬಿದ್ದಿರುವುದನ್ನು ಕಂಡು, ಜೋರಾಗಿ ಕೂಗಿ­ಕೊಂಡಿದ್ದಾನೆ. ಆತನ ಚೀರಾಟ ಕೇಳಿದ ಶಾಲಾ ವಾಹನದ ಚಾಲಕ, ಸ್ಥಳೀಯರ ನೆರವಿನಿಂದ ವಿಜಯಲಕ್ಷ್ಮಿ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರು. ಆದರೆ, ಅವರು ಸಾವನ್ನ­ಪ್ಪಿರುವುದನ್ನು ವೈದ್ಯರು ಧೃಢಪಡಿಸಿದರು.

ಬೆಂಗಳೂರಿನವರೇ ಆದ ನರಸಿಂಹಯ್ಯ, ಎಚ್‌ಎಂಟಿ ಲೇಔಟ್‌ನಲ್ಲಿ ಮೂರು ಅಂತಸ್ತಿನ ಮನೆ ಕಟ್ಟಿಸಿದ್ದರು. ನೆಲ ಮಹಡಿಯಲ್ಲಿ ಅವರು ಕುಟುಂಬ ಸದಸ್ಯರ ಜತೆ ನೆಲೆಸಿದ್ದು, ಮೇಲಿನ ಮನೆಗಳನ್ನು ಬಾಡಿಗೆ ಕೊಟ್ಟಿದ್ದರು. ‘ದುಷ್ಕರ್ಮಿಗಳು ಬಲವಂತ­ವಾಗಿ ಬಾಗಿಲು ತೆರೆಸಿ ಮನೆಯನ್ನು ಪ್ರವೇಶಿಸಿಲ್ಲ. ಪತ್ನಿಯ ಮಾಂಗಲ್ಯ ಸರ ನಾಪತ್ತೆಯಾಗಿರುವ ಬಗ್ಗೆ ನರಸಿಂಹಯ್ಯ ಹೇಳಿಕೆ ಕೊಟ್ಟಿದ್ದಾರೆ.

ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ’ ಎಂದು ಉತ್ತರ ವಿಭಾಗದ ಡಿಸಿಪಿ ಟಿ.ಆರ್.ಸುರೇಶ್ ಹೇಳಿದರು.

ಖಾರದ ಪುಡಿ ಚೆಲ್ಲಿದ್ದಾರೆ
‘ವಿಜಯಲಕ್ಷ್ಮಿ ಅವರನ್ನು ಕೊಲೆ ಮಾಡಿದ ಆರೋಪಿಗಳು, ನಂತರ ಶ್ವಾನದಳಕ್ಕೆ ಸುಳಿವು ಸಿಗಬಾರದೆಂದು ಮನೆ ತುಂಬೆಲ್ಲ ಖಾರದ ಪುಡಿ ಚೆಲ್ಲಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.