ADVERTISEMENT

ಹಿಂದಿ ಗೊತ್ತಿದ್ದರೆ ದೇಶದ ಸಾಮಾನ್ಯನನ್ನೂ ತಲುಪುತ್ತಿದ್ದೆ

ಕೇಂದ್ರ ಸಾಹಿತ್ಯ ಅಕಾಡೆಮಿ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಸಾಹಿತಿ ಅನಂತಮೂರ್ತಿ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2013, 19:52 IST
Last Updated 12 ಮಾರ್ಚ್ 2013, 19:52 IST

ಬೆಂಗಳೂರು: ಕನ್ನಡ ಭವನದಲ್ಲಿನ ರಾಜ್ಯ ನಾಟಕ ಅಕಾಡೆಮಿಯ `ಚಾವಡಿ' ಮಂಗಳವಾರ ಹಿರಿಯ ಸಾಹಿತಿ ಯು.ಆರ್.ಅನಂತಮೂರ್ತಿ ಅವರ ಮಾತಿಗೆ ಕಿವಿಯಾಗಿತ್ತು. ಪುಟ್ಟ ಚಾವಡಿಯಲ್ಲಿ ಸೇರಿದ್ದ ಅಪಾರ ಸಾಹಿತ್ಯಾಸಕ್ತರು ಅನಂತಮೂರ್ತಿ ಅವರ ಅನುಭವಗಳನ್ನು ಆಸಕ್ತಿಯಿಂದ ಆಲಿಸಿದರು. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದ ತಮ್ಮ ಅನುಭವಗಳನ್ನು ಅನಂತಮೂರ್ತಿ ನೆನಪಿನ ಬುತ್ತಿಯಿಂದ ಬಿಚ್ಚಿಟ್ಟರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಸಂಸ್ಥಾಪನಾ ದಿನದ ಅಂಗವಾಗಿ ಅಕಾಡೆಮಿಯ ಪ್ರಾದೇಶಿಕ ಕೇಂದ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.

`ಹಿಂದಿ ಭಾಷೆ ಬರುತ್ತಿದ್ದರೆ ನಾನು ಬರಹದ ಮೂಲಕ ದೇಶದ ಸಾಮಾನ್ಯನನ್ನೂ ತಲುಪಲು ಸಾಧ್ಯವಾಗುತ್ತಿತ್ತು. ಹಿಂದಿ ಬಾರದೇ ಇರುವುದೇ ನನ್ನ ಕೊರತೆ. ಹಿಂದಿ ಭಾಷೆಯ ದೊಡ್ಡ ಲೇಖಕರ ಮಾತೃಭಾಷೆ ಹಿಂದಿಯಲ್ಲ ಎಂಬ ಸತ್ಯ ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗ್ದ್ದಿದಾಗ ತಿಳಿಯಿತು' ಎಂದರು.

`ನಾನು ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ ಸಮಾನತೆಯ ಆಧಾರದ ಮೇಲೆ ದೇಶದ ಬುಡಕಟ್ಟು ಭಾಷೆಗಳ ಕೃತಿಗಳೂ ಸೇರಿದಂತೆ ಎಲ್ಲ ಭಾಷೆಗಳ ಕೃತಿಗಳನ್ನು ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತಿತ್ತು. ಆದರೆ, ಪ್ರಾದೇಶಿಕ ಭಾಷೆಯ ಕೃತಿಗಳ ಶ್ರೇಷ್ಠತೆಯ ವಿಷಯ ಬಂದಾಗ ಅಲ್ಲಿ ಕೊಳಕು ತುಂಬಿಕೊಳ್ಳುತ್ತದೆ. ಯಾವ ಕೃತಿ ಶ್ರೇಷ್ಠ ಎಂಬ ಆಯ್ಕೆ ಜಟಿಲವಾದ ಕಾರ್ಯ' ಎಂದರು.

`ಭಾರತೀಯ ಭಾಷೆಗಳ ನಡುವೆ ಕೊಡುಕೊಳ್ಳುವಿಕೆ ಹೆಚ್ಚಾಗಬೇಕು. ಯುರೋಪಿನ ಮೂರನೇ ದರ್ಜೆಯ ಲೇಖಕ ನಮಗೆ ಹೆಚ್ಚು ಹತ್ತಿರವಾಗುತ್ತಾನೆ. ಆದರೆ, ನಮ್ಮ ದೇಶದ ಪ್ರಾದೇಶಿಕ ಭಾಷೆಯ ದೊಡ್ಡ ಬರಹಗಾರ ನಮ್ಮ ಕಣ್ಣಿಗೆ ಬೀಳುವುದೇ ಇಲ್ಲ' ಎಂದು ಅವರು ವಿಷಾದಿಸಿದರು.

`ಪ್ರಾದೇಶಿಕ ಭಾಷೆಗಳ ನಡುವಿನ ಅಂತರವನ್ನು ತಪ್ಪಿಸಲು ಪ್ರಾದೇಶಿಕ ಭಾಷೆಗಳ ಕೃತಿಗಳ ಅನುವಾದ ಹೆಚ್ಚಾಗಬೇಕು. ಪ್ರಾದೇಶಿಕ ಭಾಷೆಯ ಕೃತಿಗಳು ಹೆಚ್ಚು ಚರ್ಚೆಯಾಗಬೇಕು. ಬಂಗಾಳಿ ಭಾಷೆಯನ್ನು ಹೊರತು ಪಡಿಸಿ ಎಲ್ಲ ಭಾರತೀಯ ಭಾಷೆಗಳೂ ಸ್ವೀಕಾರದ ಗುಣವನ್ನು ಹೊಂದಿವೆ' ಎಂದು ಅವರು ಹೇಳಿದರು.

`ಕೇಂದ್ರ ಲೋಕಸೇವಾ ಆಯೋಗ ಹೊಸ ಪಠ್ಯಕ್ರಮರೂಪಿಸಿದ್ದು, ಇದರಲ್ಲಿ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗುತ್ತಿದೆ' ಎಂಬ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಮಾತಿಗೆ ಪ್ರತಿಕ್ರಿಯಿಸಿದ ಅನಂತಮೂರ್ತಿ ಅವರು, `ಭಾರತೀಯ ಆಡಳಿತ ಸೇವೆಗೆ ಆಯ್ಕೆಯಾಗಿ ಸೇವೆಗೆ ನಿಯೋಜನೆಗೊಳ್ಳುವ ಅಧಿಕಾರಿಗಳಿಗೆ ಆಯಾ ರಾಜ್ಯಗಳ ಪ್ರಾದೇಶಿಕ ಭಾಷೆಗಳನ್ನು ಕಲಿಸಲಾಗುತ್ತದೆ.

ಹೀಗಾಗಿ ಕನ್ನಡದಲ್ಲೇ ಐಎಎಸ್ ಬರೆಯುವ ಅವಕಾಶ ನೀಡಬೇಕು. ಕೇಂದ್ರ ಲೋಕಸೇವಾ ಆಯೋಗ ಪ್ರಾದೇಶಿಕ ಭಾಷೆಗಳ ಮೇಲೆ ಹಾಕಿರುವ ಮಿತಿಯನ್ನು ತೆಗೆದುಹಾಕಬೇಕು' ಎಂದು ಒತ್ತಾಯಿಸಿದರು.

`ಶೀಘ್ರ ಅಧ್ಯಕ್ಷರ ನೇಮಕ ಆಗಲಿ'
ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅನಂತಮೂರ್ತಿ ಅವರು, `ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಸ್ಥಾನವನ್ನು ಬಹಳ ದಿನಗಳಿಂದ ಖಾಲಿ ಉಳಿಸಿರುವುದು ಸರಿಯಲ್ಲ. ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಸಾಕಷ್ಟು ಜನರಿದ್ದಾರೆ. ಸರ್ಕಾರ ಕೂಡಲೇ ಅಕಾಡೆಮಿಗೆ ಅಧ್ಯಕ್ಷರನ್ನು ನೇಮಿಸಬೇಕು' ಎಂದು ಒತ್ತಾಯಿಸಿದರು.

`ಬ್ರಿಟಿಷರ ವಿರುದ್ಧ ಹೋರಾಡಿದ ಅಪ್ರತಿಮ ಹೋರಾಟಗಾರ ಟಿಪ್ಪು ಸುಲ್ತಾನ್. ವಿನಾಕಾರಣ ಟಿಪ್ಪು ಸುಲ್ತಾನ್ ವಿಷಯದಲ್ಲಿ ವಿವಾದ ಸೃಷ್ಟಿಸುವುದು ಸರಿಯಲ್ಲ. ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಗಳು ಮಾರಾಟವಾಗುವುದು ಹೆಚ್ಚುತ್ತಿದೆ. ಇದು ತಪ್ಪಬೇಕು. ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಇರುವ ಕಾಲೇಜುಗಳನ್ನು ಸ್ವಾಯತ್ತಗೊಳಿಸುವ ಕಡೆಗೆ ಸರ್ಕಾರ ಗಮನ ನೀಡಬೇಕು' ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.