ADVERTISEMENT

ಹಿಂದೂ ಮೂಲಭೂತವಾದಿಗಳಿಂದ ಬೆದರಿಕೆ: ಪ್ರೊ.ಬಿ.ಕೆ.ಚಂದ್ರಶೇಖರ್

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಬೆಂಗಳೂರು: ಸಂಘ ಪರಿವಾರದ ‘ಘರ್‌ ವಾಪಸಿ’ ಅಭಿಯಾನ ಮತ್ತು ಮೂಲ­ಭೂತ­ವಾದದ ವಿರುದ್ಧ ಮಾತನಾಡುತ್ತಿರುವುದಕ್ಕಾಗಿ ಹಿಂದೂ ಮೂಲಭೂತ­ವಾದಿಗಳು ತಮಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.­ಚಂದ್ರಶೇಖರ್‌ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಹಿಂದಿನಿಂದಲೂ ಮೂಲ ಭೂತವಾದಿಗಳು ನನಗೆ ಬೆದರಿಕೆ ಹಾಕುತ್ತಿದ್ದಾರೆ. ‘ಹಿಂದೂ ಮೂಲಭೂತ­ವಾದಿ­ಗಳ ಪರ’ ಎಂದು ಹೇಳಿಕೊಳ್ಳುವ ಹಲವರು ಒಂದೂವರೆ ವರ್ಷದಿಂದ ಸಾಕಷ್ಟು ಬಾರಿ ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿದ್ದಾರೆ.

‘ಘರ್‌ ವಾಪಸಿ ಕಾರ್ಯಕ್ರಮದ ವಿರುದ್ಧ ನಾನು ಸಾರ್ವಜನಿಕ ಸಭೆಗಳಲ್ಲಿ ಮಾತನಾಡಿದ್ದೆ. ಆರ್‌ಎಸ್‌ಎಸ್‌ ಸರಸಂಘ ಚಾಲಕ ಮೋಹನ್‌ ಭಾಗವತ್‌ ಅವರು ಸಂತ ಮದರ್‌ ತೆರೇಸಾ ವಿರುದ್ಧ ನೀಡಿದ್ದ ಹೇಳಿಕೆ, ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಮತ್ತು ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಅವರ ಕೋಮು ದ್ವೇಷದ ಹೇಳಿಕೆಗಳನ್ನು ಖಂಡಿಸಿದ್ದೆ. ಸಂವಾದದಲ್ಲಿ ಆಸಕ್ತಿ ಇಲ್ಲದ ಮೂಲಭೂತ ಶಕ್ತಿಗಳು ಬೆದರಿಕೆ ಹಾಕುವ ಮನೋಭಾವ ಬೆಳೆಸಿಕೊಂಡಿದ್ದಾರೆ. ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರ ಬಗ್ಗೆಯೂ ಅತ್ಯಂತ ಕೀಳುಮಟ್ಟದಲ್ಲಿ ನಡೆದುಕೊಂಡಿದ್ದರು. ಇಂತಹ ಪ್ರಯತ್ನವನ್ನು ಖಂಡಿಸುತ್ತೇನೆ’ ಎಂದಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಚಂದ್ರಶೇಖರ್‌, ‘ಒಂದೂವರೆ ವರ್ಷಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಲೇ ಇವೆ. ಈ ಕುರಿತು ನಗರ ಪೊಲೀಸರಿಗೆ ದೂರು ನೀಡಿದ್ದೆ. 15 ದೂರವಾಣಿ ಸಂಖ್ಯೆಗಳನ್ನೂ ಗುರುತಿಸಿ ಪೊಲೀಸ­ರಿಗೆ ನೀಡಿದ್ದೆ. ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.