ADVERTISEMENT

ಹೆಚ್ಚುವರಿ ಶುಲ್ಕ ಇಲ್ಲದೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:42 IST
Last Updated 16 ಫೆಬ್ರುವರಿ 2017, 19:42 IST
ಹೆಚ್ಚುವರಿ ಶುಲ್ಕ ಇಲ್ಲದೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ
ಹೆಚ್ಚುವರಿ ಶುಲ್ಕ ಇಲ್ಲದೆ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ   
ಬೆಂಗಳೂರು: ರಿಡೂ ಪ್ರಕ್ರಿಯೆಯಿಂದ ಅರ್ಕಾವತಿ ಬಡಾವಣೆಯಲ್ಲಿ ಹಂಚಿಕೆಯಾದ ನಿವೇಶನ ಕಳೆದುಕೊಂಡವರಿಗೆ ಯಾವುದೇ ಹೆಚ್ಚುವರಿ ಶುಲ್ಕ ಪಡೆಯದೆ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತಾತ್ವಿಕ ಒಪ್ಪಿಗೆ ನೀಡಿದೆ.
 
ಗುರುವಾರ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ  ಸಚಿವ ಸಂಪುಟದ  ಒಪ್ಪಿಗೆ ಬೇಕಾಗಿದ್ದು, ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲು ಮಂಡಳಿ ನಿರ್ಧರಿಸಿದೆ.
 
ಹೆಚ್ಚುವರಿ ಶುಲ್ಕ ಭರಿಸುವ ಅಗತ್ಯವಿಲ್ಲ: ‘ಅರ್ಕಾವತಿ ಬಡಾವಣೆಯಲ್ಲಿ ಎಷ್ಟು ವಿಸ್ತೀರ್ಣದ ನಿವೇಶನ ಹಂಚಿಕೆಯಾಗಿತ್ತೋ ಅಷ್ಟೇ ವಿಸ್ತೀರ್ಣದ ನಿವೇಶನವನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡುತ್ತೇವೆ. ಆದರೆ, ಇದಕ್ಕೆ  ಹೆಚ್ಚುವರಿ ಶುಲ್ಕ ಭರಿಸುವ ಅಗತ್ಯವಿಲ್ಲ’ ಎಂದು ಬಿಡಿಎ ಆಯುಕ್ತ ರಾಜಕುಮಾರ್‌ ಖತ್ರಿ ತಿಳಿಸಿದರು.
 
‘ಕೆಂಪೇಗೌಡ ಬಡಾವಣೆ ನಿವೇಶನಕ್ಕೆ ಬಾಕಿ ಉಳಿದ ಮೊತ್ತ ಪಾವತಿಸಲು ಎರಡು ತಿಂಗಳ ಕಾಲಾವಾಕಾಶ ನೀಡುವಂತೆ ಹಂಚಿಕೆದಾರರು ಕೋರಿದ್ದಾರೆ. ಈ ಸಂಬಂಧ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆಯಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.
 
ನೇರ ಕರಾರು ಪತ್ರ ನೀಡಬೇಕೆಂಬ ಫಲಾನುಭವಿಗಳ ಬೇಡಿಕೆಯನ್ನು ಸಭೆಯಲ್ಲಿ ತಿರಸ್ಕರಿಸಿದ್ದು, ಈ ಹಿಂದೆ ಇದ್ದ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.