ADVERTISEMENT

ಹೆಪಟೈಟಿಸ್‌ಗೆ ಕಡಿಮೆ ವೆಚ್ಚದ ಚಿಕಿತ್ಸೆ

₹45 ಸಾವಿರ ವೆಚ್ಚದಲ್ಲಿ ರೋಗ ಸಂಪೂರ್ಣ ಗುಣ * ಜಗತ್ತಿನಲ್ಲಿ 24 ಕೋಟಿ ಜನರಿಗೆ ಈ ಕಾಯಿಲೆ

ಎನ್.ನವೀನ್ ಕುಮಾರ್
Published 27 ಜುಲೈ 2016, 19:59 IST
Last Updated 27 ಜುಲೈ 2016, 19:59 IST
ಹೆಪಟೈಟಿಸ್‌ಗೆ ಕಡಿಮೆ ವೆಚ್ಚದ ಚಿಕಿತ್ಸೆ
ಹೆಪಟೈಟಿಸ್‌ಗೆ ಕಡಿಮೆ ವೆಚ್ಚದ ಚಿಕಿತ್ಸೆ   

ಬೆಂಗಳೂರು: ಸದ್ದಿಲ್ಲದೆ ಕೊಲ್ಲುವ ಕಾಯಿಲೆ ಹೆಪಟೈಟಿಸ್‌ಗೆ ವಿಕ್ಟೋರಿಯಾ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಈ ಮೊದಲು ಹೆಪಟೈಟಿಸ್‌ ‘ಬಿ’, ‘ಸಿ’ ರೋಗಗಳಿಗೆ ₹2–3 ಲಕ್ಷ ವೆಚ್ಚವಾಗುತ್ತಿತ್ತು. ಜತೆಗೆ ರೋಗ ಸರಿಯಾಗಿ ವಾಸಿ ಆಗುತ್ತಿರಲಿಲ್ಲ. ಈಗ ಹೊಸ ಚಿಕಿತ್ಸಾ ಪದ್ಧತಿಗಳು ಬಂದಿದ್ದು, ₹45 ಸಾವಿರ ವೆಚ್ಚದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು’ ಎಂದು  ಗ್ಯಾಸ್ಟ್ರೋ ಎಂಟರಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಪರ್ವೇಶ್‌ ಕುಮಾರ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೊಫೊಸ್‌ಬುವಿರ್‌ ಮಾತ್ರೆಗಳನ್ನು ಪ್ರತಿದಿನ ಸೇವಿಸಬೇಕು. ಈ ಮಾತ್ರೆಗಳನ್ನು ನಿರಂತರವಾಗಿ ಮೂರು ತಿಂಗಳ ಕಾಲ ಸೇವಿಸಿದರೆ ರೋಗವನ್ನು ಶೇ 100ರಷ್ಟು ವಾಸಿ ಮಾಡಬಹುದು. ಆದರೆ, ರೋಗ ಅಂತಿಮ ಹಂತ ತಲುಪಿದ್ದರೆ ಗುಣಪಡಿಸಲು ಕಷ್ಟವಾಗುತ್ತದೆ’ ಎಂದರು.

‘ಹೆಪಟೈಟಿಸ್‌ ವೈರಸ್‌ ಸೋಂಕಿಗೆ ತುತ್ತಾದ ವ್ಯಕ್ತಿಯಲ್ಲಿ ರೋಗ ಲಕ್ಷಣಗಳು ಸರಿಯಾಗಿ ಕಂಡುಬರುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ರೋಗ ಅಂತಿಮ ಹಂತ ತಲುಪಿದಾಗಲೇ ಅದರ ತೊಂದರೆಗಳು ಗೋಚರಿಸುತ್ತವೆ. ಈ ವೇಳೆಗಾಗಲೇ ಯಕೃತ್ತಿಗೆ ತೊಂದರೆ ಉಂಟಾಗಿರುತ್ತದೆ. ಈ ಹಂತದಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಯಕೃತ್ತಿನ ಕಸಿ ಒಂದೇ ಪರಿಹಾರ’ ಎಂದು  ಹೇಳಿದರು.

‘ವಿಶ್ವ ಆರೋಗ್ಯ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಜಗತ್ತಿನಲ್ಲಿ 24 ಕೋಟಿ ಜನರು ಹೆಪಟೈಟಿಸ್ ‘ಬಿ’ ವೈರಸ್ ಸೋಂಕಿನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಪ್ರತಿ ನೂರು ಜನರ ಪೈಕಿ ಒಬ್ಬರಿಂದ ಇಬ್ಬರು ಹೆಪಟೈಟಿಸ್‌ ‘ಬಿ’  ಹಾಗೂ ಮೂವರು ಹೆಪಟೈಟಿಸ್‌ ‘ಸಿ’ ಸೋಂಕಿನಿಂದ ಬಳಲುತ್ತಿದ್ದಾರೆ.

ಗ್ಯಾಸ್ಟ್ರೋ ಎಂಟರಾಲಜಿ ವಿಭಾಗಕ್ಕೆ ಪ್ರತಿ ತಿಂಗಳು 20ರಿಂದ 30 ಹೆಪಟೈಟಿಸ್‌ ‘ಬಿ’ ರೋಗಿಗಳು, 10–15 ಹೆಪಟೈಟಿಸ್‌ ‘ಸಿ’ ರೋಗಿಗಳು ಬರುತ್ತಾರೆ’ ಎಂದರು.

‘ಹಲವು ಬಾರಿ ರಕ್ತಪೂರಣ ಮಾಡಿಸಿಕೊಂಡಿದ್ದರೆ, ಆಗಾಗ್ಗೆ ಚುಚ್ಚು ಮದ್ದು ಹಾಕಿಸಿಕೊಂಡಿದ್ದರೆ, ಕಾಮಾಲೆ, ಹೊಟ್ಟೆಯಲ್ಲಿ ಊತ, ವಿಪರೀತ ಸುಸ್ತು ಇದ್ದವರು ಹೆಪಟೈಟಿಸ್‌ ರೋಗದ ತಪಾಸಣೆ ಮಾಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಭಾರತದಲ್ಲಿ ಕೋಟ್ಯಂತರ ಮಂದಿ ಹೆಪಟೈಟಿಸ್‌ನಿಂದ ಬಳಲುತ್ತಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಚಿಕಿತ್ಸೆ ಪಡೆಯುವುದೇ ಇಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ’ ಎಂದು ಹೇಳಿದರು.

ರೋಗದ ಲಕ್ಷಣಗಳು: ಕಾಲು ಊತ ಬರುವುದು, ಹೊಟ್ಟೆಯಲ್ಲಿ ನೀರು ತುಂಬಿಕೊಳ್ಳುವುದು, ಜ್ವರ, ಹಸಿವು ಇಲ್ಲದಿರುವುದು, ದುರ್ಬಲತೆ, ಅತಿಸಾರ, ರಕ್ತವಾಂತಿ, ಕಾಮಾಲೆ (ಕಣ್ಣಿನ ಬಿಳಿ ಭಾಗ ಮತ್ತು ಚರ್ಮ ಹಳದಿ ಬಣ್ಣಕ್ಕೆ ಬದಲಾಗುವುದು).

ಏನಿದು ಹೆಪಟೈಟಿಸ್‌?
ಲಿವರ್‌ನ ಉರಿಯೂತಕ್ಕೆ ಕಾರಣ ಆಗುವ ಅನೇಕ ಬಗೆಯ ವೈರಾಣುಗಳಲ್ಲಿ ಹೆಪಟೈಟಿಸ್ ಎ, ಬಿ, ಸಿ, ಡಿ, ಇ, ಸೈಟೋಮೆಗಾಲೋ ಹಾಗೂ ಹರ್ಪಿಸ್ ವೈರಾಣು ಮುಖ್ಯವಾದವು. ಹೆಪಟೈಟಿಸ್ ಎ ಮತ್ತು ಇ ವೈರಸ್ ನೀರು ಮತ್ತು ಆಹಾರದಿಂದ ದೇಹದೊಳಗೆ ನುಸುಳುತ್ತದೆ.

ಇದು ಅಷ್ಟು ಅಪಾಯಕಾರಿಯಲ್ಲ. ಆದರೆ, ಹೆಪಟೈಟಿಸ್ ‘ಬಿ’ ಮತ್ತು ‘ಸಿ’ ಮತ್ತು ‘ಡಿ’ ವೈರಸ್‌ಗಳು ಯಕೃತ್ತಿನ ಕ್ಯಾನ್ಸರ್ ಅಥವಾ ಸಿರೋಸಿಸ್‌ಗೆ ಕಾರಣವಾಗುತ್ತವೆ. ಅಂತಿಮ ಹಂತದಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವ್ಯಕ್ತಿಯು ಯಕೃತ್‌ ವೈಫಲ್ಯದಿಂದ ಸಾಯುತ್ತಾನೆ.

ADVERTISEMENT

ರೋಗ ತಡೆಗಟ್ಟುವ ಕ್ರಮಗಳು
*ಶುದ್ಧ ನೀರು ಮತ್ತು ಆಹಾರವನ್ನು ಸೇವಿಸಬೇಕು
*ರಕ್ತಪೂರಣ ಮಾಡುವಾಗ ಮತ್ತು ರಕ್ತದ ಕಣಗಳನ್ನು ಪಡೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು
*ಹೆಪಟೈಟಿಸ್ ರೋಗದಿಂದ ಬಳಲುತ್ತಿರುವ ವ್ಯಕ್ತಿಯ ಜತೆ ದೈಹಿಕ ಸಂಪರ್ಕ ಬೇಡ
*ಈಗಾಗಲೇ ಬಳಸಿದ ಸೂಜಿಗಳನ್ನು ಮತ್ತೆ ಬಳಕೆ ಮಾಡಬಾರದು
*ಅಚ್ಚೆ ಹಾಕಿಸಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು
*ದಂತ ಚಿಕಿತ್ಸೆ ಸಂದರ್ಭದಲ್ಲಿ ಶುಚಿತ್ವ ಕಾಪಾಡಬೇಕು

ಮುಖ್ಯಾಂಶಗಳು
*ರೋಗದ ಬಗ್ಗೆ ನಿರ್ಲಕ್ಷ್ಯ ಬೇಡ
*ಆರಂಭಿಕ ಹಂತದಲ್ಲೇ ಚಿಕಿತ್ಸೆ ಅಗತ್ಯ
*ಮೂರು ತಿಂಗಳ ಚಿಕಿತ್ಸೆಯಿಂದ ಗುಣಮುಖ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.