ADVERTISEMENT

ಹೈಕೋರ್ಟ್ ಮೊರೆ ಹೊಕ್ಕ ನಾಗ

ಪೊಲೀಸರು ಹಿಂಸೆ ನೀಡದಂತೆ ನಿರ್ದೇಶಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2017, 19:36 IST
Last Updated 26 ಏಪ್ರಿಲ್ 2017, 19:36 IST
ವಿ.ನಾಗರಾಜ್ ಅಲಿಯಾಸ್ ನಾಗ
ವಿ.ನಾಗರಾಜ್ ಅಲಿಯಾಸ್ ನಾಗ   

ಬೆಂಗಳೂರು: ‘ರೌಡಿಶೀಟರ್ ವಿ.ನಾಗರಾಜ್ ಅಲಿಯಾಸ್ ನಾಗ ಹಾಗೂ ಆತನ ಇಬ್ಬರು ಮಕ್ಕಳಾದ ಎನ್‌.ಶಾಸ್ತ್ರಿ ಮತ್ತು ಎನ್‌.ಗಾಂಧಿ ಬಂಧನಕ್ಕೊಳಗಾದರೆ ಅಥವಾ ಶರಣಾದರೆ ಪೊಲೀಸರು ಯಾವುದೇ ರೀತಿಯಲ್ಲಿ ಹಿಂಸೆ ನೀಡದೆ ವಿಚಾರಣೆಗೆ ಒಳಪಡಿಸಬೇಕು’ ಎಂದು ಹೈಕೋರ್ಟ್‌ ಸೂಚಿಸಿದೆ.

ಈ ಕುರಿತು ನಾಗ, ಶಾಸ್ತ್ರಿ ಹಾಗೂ ಗಾಂಧಿ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎ.ಎಸ್‌.ಬೋಪಣ್ಣ ಅವರಿದ್ದ ಏಕಸದಸ್ಯ ಪೀಠ ಬುಧವಾರ ವಿಲೇವಾರಿ ಮಾಡಿದೆ.

ಅರ್ಜಿದಾರರ ವಕೀಲ ಎನ್‌.ಶ್ರೀರಾಮ ರೆಡ್ಡಿ, ‘ತಲೆಮರೆಸಿಕೊಂಡಿರುವ ನಾಗನನ್ನು ಹೆಡೆಮುರಿ ಕಟ್ಟಿ ತರುತ್ತೇವೆ ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್‌ ನಿಂಬಾಳ್ಕರ್ ಹೇಳಿರುವುದು ಆತಂಕದ ವಿಚಾರ. ಈ ಹೇಳಿಕೆಯನ್ನು ಗಮನಿಸಿದರೆ ಪೊಲೀಸರು ನಮ್ಮ ಅರ್ಜಿದಾರರನ್ನು ಹಿಂಸೆಗೆ ಒಳಪಡಿಸಿ ಅವರಿಂದ ಹೇಳಿಕೆ ಪಡೆಯಬಹುದು ಎಂಬ ಭೀತಿ ಇದೆ’ ಎಂದರು.

‘ಒಂದು ವೇಳೆ ಅರ್ಜಿದಾರರು ಬಂಧನಕ್ಕೊಳಗಾದರೆ ಅಥವಾ ಸ್ವಯಂ ಶರಣಾದರೆ ವಕೀಲರ ಸಮ್ಮುಖದಲ್ಲೇ ವಿಚಾರಣೆ ನಡೆಯಬೇಕು ಮತ್ತು ಎಲ್ಲ ವಿಚಾರಣೆಯನ್ನೂ ಕ್ಯಾಮೆರಾದಲ್ಲಿ ದಾಖಲಿಸಬೇಕು. ಈ ಬಗ್ಗೆ  ಸಂಬಂಧಿಸಿದ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ನ್ಯೂಟನ್‌ನ 3ನೇ ನಿಯಮದಂತೆ ಎಲ್ಲ ಕ್ರಿಯೆಗಳೂ ಸಮಾನ ಮತ್ತು ವಿರುದ್ಧ ಪ್ರತಿಕ್ರಿಯೆ ಹೊಂದಿರುತ್ತವೆ’ ಎಂದು ಉದ್ಗರಿಸಿದರು.

‘ಆರೋಪಿಯನ್ನು ಪೊಲೀಸರು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ 1997ರಲ್ಲಿ ಡಿ.ಕೆ.ಬಸು ಮತ್ತು ಪಶ್ಚಿಮ ಬಂಗಾಳದ ನಡುವಿನ ಪ್ರಕರಣದಲ್ಲಿ ನೀಡಿರುವ ವಿಸ್ತೃತ ಮಾರ್ಗಸೂಚಿಗಳನ್ನು ನಾಗನ ವಿಷಯದಲ್ಲೂ ಅನುಸರಿಸಬೇಕು’ ಎಂದು ಸೂಚಿಸಿ ಅರ್ಜಿ ವಿಲೇವಾರಿ ಮಾಡಿದರು.

ಹಳೆ ನೋಟು ಪತ್ತೆ: ಬಿಬಿಎಂಪಿ ಮಾಜಿ ಸದಸ್ಯನೂ ಆದ ನಾಗನ ಮನೆ ಮೇಲೆ ಇದೇ 14ರಂದು ಪೊಲೀಸರು ದಾಳಿ ನಡೆಸಿ ₹ 14.8 ಕೋಟಿ ಮೊತ್ತದ ಹಳೆಯ ನೋಟುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.