ADVERTISEMENT

ಹೊರಗೆ ಮಳೆಹನಿ, ಒಳಗಡೆ ಕವಿತೆಗಳ ಹೂರಣ

ಎಚ್ಚೆಸ್ವಿ–70 ಅಭಿನಂದನಾ ಕಾರ್ಯಕ್ರಮದಲ್ಲಿ ಸಾಹಿತ್ಯದ ಸಿಂಚನ

​ಪ್ರಜಾವಾಣಿ ವಾರ್ತೆ
Published 27 ಜುಲೈ 2014, 20:08 IST
Last Updated 27 ಜುಲೈ 2014, 20:08 IST

ಬೆಂಗಳೂರು: ಅದೊಂದು ಸಾಹಿತ್ಯ ಹಾಗೂ ಸಂಗೀತದ ಸಮ್ಮಿಲನದ ಸುಂದರ ಸಂಜೆ. ಹೊರಗೆ ಮಳೆಹನಿಗಳು ಭುವಿಗೆ ಮುತ್ತಿಡುತ್ತಿದ್ದರೆ, ಒಳಗಡೆ ಕಾವ್ಯದ ರಸಾನುಭವ ಕೇಳುಗರ ಕಿವಿಗೆ ಕಂಪು ನೀಡುತಿತ್ತು. ಮನಸ್ಸಿಗೆ ಭಾವಗೀತೆಗಳ ಸಿಂಚನವಾಗುತಿತ್ತು.

ಇಂಥದೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮಕ್ಕೆ ವೇದಿಕೆಯಾಗಿದ್ದು ಪಿಇಎಸ್‌ ವಿಶ್ವವಿದ್ಯಾನಿಲಯದ ಸಭಾಂ­ಗಣ. ಭಾನುವಾರ ಸಂಜೆ ಇಲ್ಲಿ ಆಯೋ­ಜಿಸಲಾಗಿದ್ದ ‘ಎಚ್ಚೆಸ್ವಿ–70’ ಡಾ.ಎಚ್‌.­ಎಸ್‌.ವೆಂಕಟೇಶಮೂರ್ತಿ ಅವರ ಅಭಿ­ನಂದನೆ ಹಾಗೂ ಚಂದ್ರಸ್ಮಿತ ಸಿ.ಡಿ.­ಲೋಕಾರ್ಪಣೆ ಕಾರ್ಯಕ್ರಮಕ್ಕೆ ನೂರಾರು ಸಾಹಿತ್ಯಾಭಿಮಾನಿಗಳು ಸಾಕ್ಷಿಯಾದರು.

‘ಹೆಚ್ಚು ಹೆಚ್ಚು ಯಶಸ್ಸು ಲಭಿಸಿದ್ದ­ರಿಂದ ಎಚ್ಚೆಸ್ವಿ ಎನ್ನಬಹುದು’ ಎಂಬ ಗುಣಗಾನವಿತ್ತು. ಎಚ್ಚೆಸ್ವಿ ಅವರ ಕವಿತೆ  ‘ಏಕೆ ಬಾರದಿರುವೇ ನನ್ನ ಮುರಳಿ ಮೋಹನ? ತಿರುಗಿ ಬಾರದಿರಲು ಹೇಳು ಏನು ಕಾರಣ?’ ಎಂಬ ಸುಂದರ ನೃತ್ಯರೂಪಕದ ಸೆಳೆತವಿತ್ತು. ‘ದ್ವಾಪರ­ಯು­ಗದಲ್ಲಿ ಎಚ್ಚೆಸ್ವಿ ಗೋಪಿಕೆ ಆಗಿರ­ಬೇಕು. ಏಕೆಂದರೆ ಅವರನ್ನು ಮುರಳಿ ಕೃಷ್ಣ ಯಾವಾಗಲೂ ಕಾಡುತ್ತಿರುತ್ತಾನೆ’ ಎಂಬ ತಮಾಷೆಯ ಮಾತುಗಳಿದ್ದವು.

ಕಾವ್ಯ ಲೋಕದ ಕೌತುಕ ಎನಿಸಿರುವ ಎಚ್ಚೆಸ್ವಿ ಸಮ್ಮುಖದಲ್ಲಿ ‘ಚಂದ್ರಸ್ಮಿತ’ ಸಿ.ಡಿ. ಲೋಕಾರ್ಪಣೆ ಮಾಡಿದ್ದು ರಂಗ­ಕರ್ಮಿ ಹಾಗೂ ರಾಜ್ಯಸಭೆ ಸದಸ್ಯೆ ಬಿ.ಜಯಶ್ರೀ. ‘ಎಚ್ಚೆಸ್ವಿ ಅವರು ಸಾಹಿತ್ಯದ ಮೂಲಕ ಚಂದಿರನನ್ನು ತೋರಿಸುತ್ತಿದ್ದಾರೆ. ಚಿಕ್ಕಂದಿನಿಂದಲೇ ಅವರ ­ಮನಸ್ಸಿನಲ್ಲಿ ಚಂದ್ರ ಅಚ್ಚೊತ್ತಿ­ದ್ದಾನೆ’ ಎಂದು ಅವರು ನುಡಿದರು.

ಎಚ್ಚೆಸ್ವಿ ರಚಿಸಿರುವ 8 ಕವಿತೆಗಳನ್ನು ಹೊಂದಿರುವ ‘ಚಂದ್ರಸ್ಮಿತ’ ಬಗ್ಗೆ ಸಭಿಕರಿಗೆ ಪರಿಚಯ ಮಾಡಿಕೊಟ್ಟಿದ್ದು ಕವಿಯತ್ರಿ ಎಂ.ಆರ್‌.ಕಮಲ. ‘ಚಂದ್ರಸ್ಮಿತ’ ಎಂಬ ಹೆಸರಿನ ಸಿ.ಡಿಗೆ ರಘುನಂದನ್ ಸ್ವರ ಸಂಯೋಜನೆ ಮಾಡಿದ್ದಾರೆ. ಸುಪ್ರಿಯಾ ರಘುನಂದನ್‌ ಸ್ವರ ನೀಡಿದ್ದಾರೆ.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಎಚ್ಚೆಸ್ವಿ, ‘ನಾನು 70ನೇ ವರ್ಷಕ್ಕೆ ಕಾಲಿಟ್ಟ ನೆನಪಿಗೆ ಚಂದ್ರಸ್ಮಿತ ಸಿ.ಡಿ.ಯನ್ನು ಪುತ್ರ ಹಾಗೂ ಸೊಸೆ ನೆನಪಿನ ಕಾಣಿಕೆಯಾಗಿ ನೀಡಿದ್ದಾರೆ. 70 ವರ್ಷ ಆಗಿದೆ ಎಂಬುದನ್ನು ಮರೆಯಬೇಕೆಂದಿದ್ದೆ. ಆದರೆ, ವಾರಕ್ಕೊಮ್ಮೆ ಅಭಿನಂದನಾ ಸಮಾರಂಭ ಇಟ್ಟುಕೊಂಡು ಮತ್ತೆ ಮತ್ತೆ ನೆನಪಿಸುತ್ತಿದ್ದಾರೆ’ ಎಂದು ಸಭಾಂಗಣದಲ್ಲಿ ನಗುವಿನ ಬುಗ್ಗೆ ಎಬ್ಬಿಸಿದರು.

‘ನಿಮ್ಮ ಸಂಪಾದನೆ ಏನು’ ಎಂದು ಜನರು ನನ್ನನ್ನು ಕೇಳುತ್ತಿರುತ್ತಾರೆ. ನನ್ನ ಸಂಪಾದನೆ ಅಪಾರ ಪ್ರೀತಿ ಹಾಗೂ ಸ್ನೇಹ. 30–35 ವರ್ಷಗಳ ಹಿಂದೆ ನನ್ನಿಂದ ಪಾಠ ಹೇಳಿಸಿಕೊಂಡ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಇದೇ ನನ್ನ ಸಂಪಾದನೆ. ಇದೊಂದು ಶುದ್ಧ ಹಾಗೂ ಸ್ವಚ್ಛ ಸಂಪಾದನೆ ಕೂಡ. ರಾಜಕಾರಣಿಗಳ ‘ಸಂಪಾದನೆ’ಯ ರೀತಿ ಅಲ್ಲ ಇದು’ ಎಂದಾಗ ಜೋರು ಚಪ್ಪಾಳೆ.

ಎಚ್ಚೆಸ್ವಿ ಮಾತು ಮೋಡಕಟ್ಟಿದ ವಾತಾವರಣದಲ್ಲೂ ಸಭಿಕರಿಗೆ ಚಂದಿರನ ದರ್ಶನ ಮಾಡಿಸಿದಂತಿತ್ತು. ‘ಕಾವ್ಯ ಎಂಬುದು ವಿರಾಮ ಹಾಗೂ ತಂಗುದಾಣ ಇದ್ದಂತೆ. ಸದಾ ಖುಷಿ ನೀಡುತ್ತದೆ. ಮಾಹಿತಿಗಾಗಿ, ತತ್ವ  ನೀತಿಗಾಗಿ ಯಾರೂ ಸಾಹಿತ್ಯ ಓದುವುದಿಲ್ಲ. ಆದರೆ, ಮಾಹಿತಿ ತಂತ್ರಜ್ಞಾನ ಯುಗದ ಮಕ್ಕಳು ದಿನವಿಡೀ ಒತ್ತಡದಲ್ಲಿತ್ತಾರೆ. ಸಾಹಿತ್ಯ ಎಂಬುದು ಅವರಿಗೆ ರುಚಿಸುವುದೇ ಇಲ್ಲ. ಇನ್ನೆಲ್ಲಿ ಅವರಿಗೆ ಖುಷಿ ಸಿಗುತ್ತದೆ’ ಎಂದು ವೆಂಕಟೇಶಮೂರ್ತಿ ಕೇಳಿದರು.

ಮುಖ್ಯ ಅತಿಥಿಯಾಗಿ ಬಂದಿದ್ದ ಕವಿ ಬಿ.ಆರ್‌.ಲಕ್ಷ್ಮಣರಾವ್‌, ತಮ್ಮ ಗೆಳೆಯ ವೆಂಕಟೇಶಮೂರ್ತಿ ಅವರ ಕುರಿತು ಬರೆದಿರುವ ‘ಎಚ್ಚೆಸ್ವಿ–70’ ಎಂಬ ಕವಿತೆಯನ್ನು ವಾಚಿಸಿದರು.  ಗಾಯಕಿ ಸುಪ್ರಿಯಾ ಅವರ ಕಂಠಸಿರಿಯಿಂದ ಒಡಮೂಡಿದ ಸಂಗೀತ ಸಭಿಕರನ್ನು ಚಳಿಯ ಸಂಜೆಯಲ್ಲೂ ಬೆಚ್ಚಗಾಗಿಸಿತು. ‘ನೀ ಬಳಿ ಬಂದಾಗ ಹಾಡಿಗಿಳಿದ ರಾಗ, ಕಣ್ಣಾ ತುಂಬಾ ಚಂದ್ರಬಿಂಬ ಹುಣ್ಣಿಮೆ ಬೆಳಕೀಗ’ ಎಂಬ ಕಾವ್ಯ ಅವರ ಕಂಠದಲ್ಲಿ ಅನುರುಣಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.