ADVERTISEMENT

ಹೊರನಾಡ ಕನ್ನಡಿಗರ ರಕ್ಷಣೆಗೆ ಮುಂದಾಗೋಣ: ಸಿದ್ಧಲಿಂಗಯ್ಯ

​ಪ್ರಜಾವಾಣಿ ವಾರ್ತೆ
Published 6 ಮೇ 2015, 20:01 IST
Last Updated 6 ಮೇ 2015, 20:01 IST

ಬೆಂಗಳೂರು: ‘ಮನೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಗೋವಾ ಕನ್ನಡಿಗರ ರಕ್ಷಣೆಗೆ ರಾಜ್ಯ ಸರ್ಕಾರ ಮತ್ತು ಕನ್ನಡಿಗರೆಲ್ಲರೂ ಮುಂದಾಗಬೇಕು’ ಎಂದು ಕವಿ ಸಿದ್ಧಲಿಂಗಯ್ಯ  ಒತ್ತಾಯಿಸಿದರು. ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಈ ಸಾಲಿನಿಂದ ತಮಿಳುನಾಡು ಸರ್ಕಾರ ಕನ್ನಡ ಕಲಿಕೆಯ ಮೇಲೆ ನಿರ್ಬಂಧ ವಿಧಿಸಿದೆ. ಜತೆಗೆ ತಮಿಳುನಾಡಿನಲ್ಲಿರುವ ಸುಮಾರು 1.28 ಕೋಟಿ ಕನ್ನಡಿಗರಿಗೆ ಮಾತೃಭಾಷೆಯನ್ನು ತಮಿಳು ಎಂದು ನಮೂದಿಸುವಂತೆ ಒತ್ತಡ ಹೇರುತ್ತಿದೆ. ಇದು ಆತಂಕದ ವಿಚಾರ. ಆದ್ದರಿಂದ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಿ ಆ ರಾಜ್ಯದಲ್ಲಿರುವ ಕನ್ನಡಿಗರ ಹಿತ ಕಾಯಬೇಕು’ ಎಂದು ಆಗ್ರಹಿಸಿದರು.

‘ಭಾರತೀಯ ಭಾಷೆಗಳ ಅಳಿವು ಉಳಿವಿನ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ರಾಷ್ಟ್ರಭಾಷೆಗಳನ್ನು ರಕ್ಷಿಸಬೇಕು. ರಾಜ್ಯ ಸರ್ಕಾರ ಕೂಡ ಮೇಕೆದಾಟು ವಿಚಾರದಲ್ಲಿ ಹಿಂಜರಿಯದೇ ಮುಂದುವರೆದು ಯೋಜನೆ ಪೂರ್ಣಗೊಳಿಸಬೇಕು’ ಎಂದು ಹೇಳಿದರು.

‘ಸರ್ಕಾರ ಯಾವುದೇ ಕಾರಣಕ್ಕೂ ಬಿಬಿಎಂಪಿಯನ್ನು ವಿಭಜನೆ ಮಾಡಬಾರದು. ಹಾಗೊಂದು ವೇಳೆ ಮಾಡಿದರೆ ಅದು ಬೆಂಗಳೂರಿನ ಹೃದಯವನ್ನು ಮೂರು ಭಾಗವಾಗಿ ತುಂಡರಿಸಿದಂತೆ. ಕನ್ನಡಿಗರ ಶ್ರೇಯೋಭಿವೃದ್ಧಿ  ದೃಷ್ಟಿಯಿಂದ
ಸರ್ಕಾರ ಈ ನಿರ್ಣಯ ಕೈಬಿಡಬೇಕು. ನಗರವನ್ನು ಕನ್ನಡೀಕರಣ ಮಾಡಲು ನಾವೆಲ್ಲರೂ ಕನ್ನಡದಲ್ಲಿಯೇ ಮಾತನಾಡಬೇಕು. ಅನ್ಯಭಾಷಿಕರಿಗೆ ಕನ್ನಡ ಕಲಿಸುವ ದೀಕ್ಷೆ ಸ್ವೀಕರಿಸೋಣ’ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷ ಜಿ.ರಾಮಕೃಷ್ಣ  ಮಾತನಾಡಿ, ‘ಐತಿಹಾಸಿಕವಾಗಿ ಇಡೀ ರಾಜ್ಯದ ಜನರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತು ಚಳವಳಿಗಳಿಗೆ ನಾಯಕತ್ವ ನೀಡಬೇಕು. ಇದರಿಂದ ಹೋರಾಟಕ್ಕೆ ಬೆಲೆ ಬರುತ್ತದೆ. ಪರಿಷತ್ತು ಇದರಲ್ಲಿ ಆಸಕ್ತಿ ತೋರಿದರೆ ಗೌರವಯುತ ಸ್ಥಾನದಲ್ಲಿ ಇರುವವರೂ ಚಳವಳಿಗಳಿಗೆ ಕೈಜೋಡಿಸುತ್ತಾರೆ. ಅದರಿಂದ ನಮ್ಮ ಆಕಾಂಕ್ಷೆಗಳ ಪೂರೈಕೆಗೆ ಬೇಕಾದಂತಹ ಸನ್ನಿವೇಶವನ್ನು ನಾವು ರಚಿಸಬಹುದು’ ಎಂದು ಹೇಳಿದರು.

ವಿಜ್ಞಾನಿ ರೊದ್ದಂ ನರಸಿಂಹ, ಸಂಗೀತ ನಿರ್ದೇಶಕ ಹಂಸಲೇಖ, ನಟ ರವಿಚಂದ್ರನ್‌ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 40 ಜನರನ್ನು ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.