ADVERTISEMENT

ಹೊಳೆಯಾದ ರಸ್ತೆ, ನಡುಗಡ್ಡೆಯಾದ ಬಡಾವಣೆ!

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:54 IST
Last Updated 29 ಜುಲೈ 2016, 19:54 IST
ನಗರದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಸಿಲ್ಕ್‌ಬೋರ್ಡ್‌ ಜಂಕ್ಷನ್ ಬಳಿ ಶುಕ್ರವಾರ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಜಲಾವೃತಗೊಂಡಿದ್ದ ರಸ್ತೆಯಲ್ಲಿ ವಾಹನಗಳು ಮಂದಗತಿಯಲ್ಲಿ ಸಂಚರಿಸಿದವು
ನಗರದಲ್ಲಿ ಎಡೆಬಿಡದೆ ಸುರಿದ ಮಳೆಯಿಂದಾಗಿ ಸಿಲ್ಕ್‌ಬೋರ್ಡ್‌ ಜಂಕ್ಷನ್ ಬಳಿ ಶುಕ್ರವಾರ ಪ್ರವಾಹದ ಸ್ಥಿತಿ ನಿರ್ಮಾಣವಾಗಿತ್ತು. ಜಲಾವೃತಗೊಂಡಿದ್ದ ರಸ್ತೆಯಲ್ಲಿ ವಾಹನಗಳು ಮಂದಗತಿಯಲ್ಲಿ ಸಂಚರಿಸಿದವು   

ಬೆಂಗಳೂರು: ಹೊಳೆಗಳಂತಾದ ರಸ್ತೆಗಳಲ್ಲಿ ನೀರೇ ನೀರು, ನಡುಗಡ್ಡೆಗಳ ರೂಪತಾಳಿ ನಿಂತ ಬಡಾವಣೆಗಳು, ಅಕ್ಷರಶಃ ಸ್ತಬ್ಧವಾಗಿದ್ದ ಸಂಚಾರ, ಜಲಾವೃತವಾಗಿದ್ದ ಮನೆಗಳಲ್ಲಿ ಕುಡಿಯುವ ನೀರಿಗೂ ಬರ...
ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯಗಳಿವು.

ಮನೆಗಳಿಗೆ ನೀರು ನುಗ್ಗಿದ ಚಿಂತೆಗಿಂತ ಮೀನುಗಳು ಸಿಕ್ಕ ಖುಷಿ ಕೆಲವರಿಗೆ. ನಿಂತ ನೀರಿನಲ್ಲಿ ಬೈಕ್‌, ಕಾರ್‌ ಓಡಿಸುವ ಮೋಜು ಹಲವರಿಗೆ.
ಮಡಿವಾಳ ಕೆರೆಯ ನೀರು ನುಗ್ಗಿ  35ರಿಂದ 42ನೇ ಮುಖ್ಯ ರಸ್ತೆ, ಸೋಮೇಶ್ವರ ಕಾಲೊನಿಯ 1, 2, 3ನೇ ಅಡ್ಡರಸ್ತೆ, ಸಿಲ್ಕ್‌ಬೋರ್ಡ್‌ ಭಾಗದ ಮನೆಗಳು ಜಲಾವೃತಗೊಂಡಿದ್ದವು.

ಮಡಿವಾಳ ಕೆರೆ ಕೋಡಿ ಬಿದ್ದರೆ ನೀರು ಸೋಮೇಶ್ವರ ಕಾಲೊನಿ ಹಾಗೂ ಕೆಎಎಸ್‌ ಆಫೀಸರ್ಸ್‌ ಕಾಲೊನಿ ಕಡೆಯಿಂದ ಹರಿದು ಅಗರ ಕೆರೆ ಸೇರುತ್ತದೆ. ಸೋಮೇಶ್ವರ ಕಾಲೊನಿಯ   ಕಡೆಯಿಂದ ಸಾಗುವ ಕಾಲುವೆ ಮಾರಮ್ಮನ ದೇವಸ್ಥಾನದ ಬಳಿ ಬಲ ತಿರುವು ಪಡೆದು ಸಿಲ್ಕ್‌ಬೋರ್ಡ್‌ ಮೂಲಕ ಅಗರ ಕೆರೆಗೆ ಸೇರುತ್ತದೆ. ಆದರೆ, ಈ ಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಇದರಿಂದ  ಮಾರಮ್ಮ ದೇವಸ್ಥಾನದ ಬಳಿ ನೀರು ಉಕ್ಕಿ ವರ್ತುಲ ರಸ್ತೆಗೆ ನುಗ್ಗಿತು. ಹೀಗಾಗಿ ರಸ್ತೆಯಲ್ಲಿ ಹೊಳೆ ಸೃಷ್ಟಿಯಾಗಿತ್ತು.

ಎಲ್ಲೆಲ್ಲಿ ನೀರು ನುಗ್ಗಿದೆ? ಬಿಟಿಎಂ ಬಡಾವಣೆ 2ನೇ ಹಂತದ ಸೋಮೇಶ್ವರ ಕಾಲೊನಿಯ 1, 2, 3ನೇ ಅಡ್ಡರಸ್ತೆಗಳು, 35ನೇ ಮುಖ್ಯ ರಸ್ತೆಯ 6 ಹಾಗೂ 7ನೇ ಅಡ್ಡರಸ್ತೆ, 36ರಿಂದ 42ನೇ ಮುಖ್ಯರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಆ ಭಾಗದ ಮನೆಗಳಿಗೆ ನೀರು ನುಗ್ಗಿತ್ತು.
35ನೇ ಮುಖ್ಯರಸ್ತೆಯ 2ನೇ ಅಡ್ಡರಸ್ತೆಯಲ್ಲಿರುವ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆಯ ಕ್ವಾರ್ಟರ್ಸ್‌್ ಜಲಾವೃತವಾಗಿತ್ತು. ನೆಲ ಮಹಡಿಯ 48 ಮನೆಗಳಿಗೆ ನೀರು ನುಗ್ಗಿದ್ದು, ನಾಲ್ಕು ಅಡಿವರೆಗೂ ನೀರು ನಿಂತಿತ್ತು.

‘ಎರಡು ದಿನಗಳ ಹಿಂದೆ ನಮ್ಮ ಮನೆಗಳಿಗೆ ನೀರು ನುಗ್ಗಿತು. ಮನೆಯಲ್ಲಿ ಮಲಗಲು ಸಾಧ್ಯವಾಗದೆ, ಒಂದನೇ ಮಹಡಿಯ ಸ್ನೇಹಿತರ ಮನೆಯಲ್ಲಿ ಮಲಗಿದೆವು. ಎರಡು ದಿನಗಳಿಂದ ಸರಿಯಾಗಿ ಊಟ ಮಾಡಿಲ್ಲ’ ಎಂದು ಕ್ವಾರ್ಟರ್ಸ್‌ನ ಸಿ–2 ಬ್ಲಾಕ್‌ ನಿವಾಸಿ ಯಶೋದಮ್ಮ ಅಳಲು ತೋಡಿಕೊಂಡರು.

ಹವಾಲ್ದಾರ್‌ ಆನಂದ್‌ ಅವರು, ‘ಕ್ವಾರ್ಟರ್ಸ್‌ನ ಒಟ್ಟು 48 ಮನೆಗಳು ಜಲಾವೃತಗೊಂಡಿವೆ. ಬಹುತೇಕ ಮಂದಿ ಮನೆಯನ್ನು ಖಾಲಿ ಮಾಡಿ ತಮ್ಮ ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ನಾವು ಎರಡನೇ ಮಹಡಿಯಲ್ಲಿ ಇರುವುದರಿಂದ ಸಮಸ್ಯೆ ಉಂಟಾಗಿಲ್ಲ. ಆದರೆ, ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅವರನ್ನು ಕರೆದೊಯ್ಯುವುದು ಸಮಸ್ಯೆಯಾಗಿದೆ’ ಎಂದು ಹೇಳಿದರು.

35ನೇ ಮುಖ್ಯರಸ್ತೆಯ 6ನೇ ಅಡ್ಡರಸ್ತೆಯಲ್ಲಿ ವಾಸವಾಗಿರುವ ಮಣಿಪಾಲ್‌ ಆಸ್ಪತ್ರೆಯ ವೈದ್ಯರೊಬ್ಬರು ಕಾರುಗಳನ್ನು ಪಾರ್ಕಿಂಗ್‌ ಮಾಡಲು ನೆಲಮಹಡಿಯಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ, ನೀರು ನೆಲಮಹಡಿಯನ್ನು ಆವರಿಸಿದ್ದು, ಎರಡು ಕಾರುಗಳು ನೀರಿನಲ್ಲಿ ಸಿಲುಕಿದ್ದವು.

ಹೊರಗೆ ಬಂದ ಶೌಚಾಲಯದ ಕಲ್ಮಶ:  ಸೋಮೇಶ್ವರ ಕಾಲೊನಿಯ 1, 2, 3ನೇ ಅಡ್ಡರಸ್ತೆಯ ಕೆಲ ಮನೆಗಳಲ್ಲಿ ಶೌಚಾಲಯಗಳ ಸಿಂಕ್‌ಗಳಿಂದ ನೀರು ಹೊರ ಬರುತ್ತಿದ್ದು, ಮಲ ಶೌಚಾಲಯದಲ್ಲಿ ಹರಡಿಕೊಂಡಿತ್ತು. ಜತೆಗೆ ಬಚ್ಚಲ ನೀರು ಹೊರಗೆ ಹೋಗುವ ಬದಲು, ನೀರು ಹಿಮ್ಮುಖವಾಗಿ ಮನೆಗಳ ಒಳಗೆ ನುಗ್ಗಿತ್ತು.

ಗಿಡ ಕತ್ತರಿಸಿದ ಸೆಕ್ಯುರಿಟಿ ಗಾರ್ಡ್‌:  ಬಿಟಿಎಂ 2ನೇ ಹಂತದ 7ನೇ ಅಡ್ಡರಸ್ತೆಯಲ್ಲಿ ನೀರು ನೀರು ತುಂಬಿಕೊಂಡಿದ್ದರಿಂದ ಆ ಭಾಗದ ಮನೆಗಳಿಗೆ ತೆರಳಲು ಸಾಧ್ಯವಿರಲಿಲ್ಲ. ಈ ರಸ್ತೆ ಮಡಿವಾಳ ಕೆರೆ ಕಟ್ಟೆಗೆ ಹೊಂದಿಕೊಂಡಂತಿದ್ದು, ಇದರ ಪಕ್ಕದಲ್ಲೇ ಚರಂಡಿ ಇದ್ದು, ಇದನ್ನು ಮರಗಿಡಗಳು ಆವರಿಸಿದ್ದವು. ಸಪ್ತಗಿರಿ ಲೇಕ್‌ ಅಪಾರ್ಟ್‌ಮೆಂಟ್‌ನ ಭದ್ರತಾ ಸಿಬ್ಬಂದಿ ರಾಜಾ ಎಂಬುವರು  ಈ ಗಿಡಗಳನ್ನು ಕತ್ತರಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟರು.

‘ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದರಿಂದ ಶಾಲಾ ಮಕ್ಕಳಿಗೆ ತೀವ್ರ ತೊಂದರೆ ಉಂಟಾಗುತ್ತಿತ್ತು. ಹೀಗಾಗಿ, ಗಿಡ–ಗಂಟಿಗಳನ್ನು ಕಡಿದು ಓಡಾಟಕ್ಕೆ ಅನುಕೂಲ ಮಾಡಿಕೊಟ್ಟೆ’ ಎಂದು ರಾಜಾ
ತಿಳಿಸಿದರು.

ತಡೆಯಾಜ್ಞೆಗೆ ಬೆದರಲ್ಲ: ಶಾಸಕ ರೆಡ್ಡಿ ಗುಡುಗು
‘ನಿಮಗೆ ಮಾನ ಮರ್ಯಾದೆ ಇಲ್ಲವೇ.  ಕೆನ್ನೆಗೆ ಹೊಡೆದರೆ ಹಲ್ಲು ಉದುರಬೇಕು’ ಹೀಗೆಂದು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಬೊಮ್ಮನ ಹಳ್ಳಿ ಶಾಸಕ ಸತೀಶ್‌ ರೆಡ್ಡಿ ತರಾಟೆಗೆ ತೆಗೆದುಕೊಂಡರು. ಕೋಡಿಚಿಕ್ಕನಹಳ್ಳಿಗೆ ಶುಕ್ರವಾರ ಸಂಜೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಈ ಭಾಗದಲ್ಲಿ ರಾಜಕಾಲುವೆಯ ಕಾಮಗಾರಿ ಶೇ 75ರಷ್ಟು ಪೂರ್ಣ ಗೊಂಡಿದೆ. ಮಡಿವಾಳ ಕೆರೆಗೆ ಸಂಪರ್ಕಿಸುವ ಕಾಮಗಾರಿಗೆ ಅರಣ್ಯ ಇಲಾಖೆಯ ಅನುಮತಿ ಬೇಕಿದೆ. ಅಧಿಕಾರಿಗಳು ಅನುಮತಿ ನೀಡಲು ಸತಾಯಿಸುತ್ತಿದ್ದಾರೆ ಎಂಬುದು ಶಾಸಕರ ಆಕ್ರೋಶಕ್ಕೆ ಕಾರಣ.

‘ಕೆಲವು ವರ್ಷಗಳ ಹಿಂದೆ ಅಕ್ಷಯನಗರ ಕೆರೆ ಹಾಗೂ ಮಡಿವಾಳ ಕೆರೆ ನಡುವಿನ ರಾಜಕಾಲುವೆಗಳ ದುರಸ್ತಿ ಕಾಮಗಾರಿ ಆರಂಭಿಸಿದ್ದೆವು. ಏಳೆಂಟು ತಿಂಗಳ ಹಿಂದೆ ಕೆಲವು ನಿವಾಸಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದರು. ರಾಜಕಾಲುವೆಗಳು ತಮ್ಮ ಜಾಗದಲ್ಲಿ ನಿರ್ಮಾಣವಾಗಿವೆ ಎಂದು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ತಡೆಯಾಜ್ಞೆ ಇದ್ದರೂ ಅರಣ್ಯ ಪ್ರದೇಶ ಪ್ರವೇಶಿಸಲು ಹಿಂಜರಿ ಯುವುದಿಲ್ಲ’  ಎಂದು ಸತೀಶ್ ರೆಡ್ಡಿ ಗುಡುಗಿದರು.

‘ಕೆರೆಯ ದುಸ್ಥಿತಿ ಬಗ್ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಗಮನ ಸೆಳೆಯಲಾಗಿತ್ತು. ಆದರೆ, ಕೆರೆಯ ಅಭಿವೃದ್ಧಿಗೆ ಪ್ರಾಧಿಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಚಿಕ್ಕಬಳ್ಳಾಪುರದಲ್ಲಿ ಕೆಡಿಪಿ ಸಭೆಯ ನಡೆಸುತ್ತಿದ್ದ ಸಚಿವ ರಾಮಲಿಂಗಾ ರೆಡ್ಡಿ ಅವರು ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ಸ್ಥಳಕ್ಕೆ ಧಾವಿಸಿದರು.

ಕಡಿಮೆ ಒತ್ತಡದಿಂದ ಹೆಚ್ಚು ಮಳೆ
ನಗರದಲ್ಲಿ ಗುರುವಾರ ವ್ಯಾಪಕವಾಗಿ ಮಳೆ ಸುರಿಯುವುದಕ್ಕೆ ಕಾರಣವಾಗಿದ್ದು ವಾತಾವರಣದಲ್ಲಿ ನಿರ್ಮಾಣವಾದ ಕಡಿಮೆ ಒತ್ತಡದ ಪಟ್ಟಿ ಹಾಗೂ ಮೇಲ್ಮೈ ಸುಳಿಗಾಳಿ.

‘ಮಹಾರಾಷ್ಟ್ರದ ಮರಾಠವಾಡದಿಂದ ದಕ್ಷಿಣ ತಮಿಳುನಾಡಿನವರೆಗೆ ವಾತಾವರಣದಲ್ಲಿ ಕಡಿಮೆ ಒತ್ತಡದ ಪಟ್ಟಿ ನಿರ್ಮಾಣವಾಗಿತ್ತು. ಅದರ ಜೊತೆಗೆ ಮೇಲ್ಮೈ ಸುಳಿಗಾಳಿಯೂ ಸೇರಿಕೊಂಡಿತ್ತು. ಈ ಪಟ್ಟಿ ವ್ಯಾಪಿಸಿದ್ದ ಪ್ರದೇಶಗಳಲ್ಲೆಲ್ಲ ಮಳೆಯಾಗಿದೆ. ನಮ್ಮ ರಾಜ್ಯದಲ್ಲೂ ಬೆಂಗಳೂರಿನ  ಆಸುಪಾಸಿನಲ್ಲಿ ಉತ್ತಮ ಮಳೆಯಾಗಲು ಇದೇ ಕಾರಣ. ಇದರ ಪ್ರಭಾವದಿಂದಾಗಿ ರಾಜ್ಯದ ರಾಯಚೂರು, ಕೋಲಾರ, ಮೈಸೂರು, ಕಲಬುರ್ಗಿ, ಹುಬ್ಬಳ್ಳಿ ಪ್ರದೇಶಗಳಲ್ಲೂ ವ್ಯಾಪಕ ಮಳೆಯಾಗಿದೆ’ ಎನ್ನುತ್ತಾರೆ ಹವಾಮಾನ ಇಲಾಖೆ ನಿರ್ದೇಶಕ ಸುಂದರ ಎಂ.ಮೇಖ್ರಿ.

‘ವಾತಾವರಣದಲ್ಲಿ ಎರಡು ಹೆಚ್ಚು ಒತ್ತಡದ ಪ್ರದೇಶಗಳ ನಡುವೆ ಕಡಿಮೆ ಒತ್ತಡದ ಪಟ್ಟಿ ಕೆಲವೊಮ್ಮೆ ನಿರ್ಮಾಣವಾಗುತ್ತದೆ. ಇದು ನೂರಾರು ಕಿ.ಮೀ. ವ್ಯಾಪಿಸಿರುತ್ತದೆ.  ಒತ್ತಡ ವೈಪರೀತ್ಯದ ಅಂಕಿ–ಅಂಶಗಳನ್ನು ವಿಶ್ಲೇಷಣೆ ನಡೆಸುವ ಮೂಲಕ ಈ ವಿದ್ಯಮಾನವನ್ನು ಕಂಡುಹಿಡಿಯುತ್ತೇವೆ’ ಎಂದು ಅವರು ವಿವರಿಸಿದರು.

ಇನ್ನೆರಡು ದಿನ ತುಂತುರು ಮಳೆ:  ‘ಶುಕ್ರವಾರ  ಕಡಿಮೆ ಒತ್ತಡದ ಪಟ್ಟಿ ಕರಗಿದೆ. ಹಾಗಾಗಿ ಮಳೆಯ ಪ್ರಮಾಣವೂ ಕಡಿಮೆಯಾಗಿದೆ. ರಾಯಲಸೀಮಾ ಪ್ರದೇಶದಲ್ಲಿ ಮೇಲ್ಮೈ ಸುಳಿಗಾಳಿಯಿಂದಾಗಿ ಭಾರಿ ಮಳೆಯಾಗುತ್ತದೆ. ಅದರ ಪ್ರಭಾವದಿಂದಾಗಿ ನಮ್ಮ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ತುಂತುರು ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರು ಹಾಗೂ ಆಸುಪಾಸಿನ ಪ್ರದೇಶಗಳಲ್ಲಿ ಭಾರಿ ಅಲ್ಲದಿದ್ದರೂ ಹಗುರ ಮಳೆಯಾಗಲಿದೆ’ ಎಂದು ಅವರು ತಿಳಿಸಿದರು.

ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಮಳೆ: ಗುರುವಾರ ರಾತ್ರಿ ನಗರದ ಉತ್ತರಭಾಗಕ್ಕಿಂತ ದಕ್ಷಿಣ ಭಾಗದಲ್ಲಿ ಮಳೆಯ ಪ್ರಮಾಣ ಹೆಚ್ಚು ಇತ್ತು. ವರ್ತೂರು, ಸಿಂಗಸಂದ್ರ, ಬೊಮ್ಮನಹಳ್ಳಿ, ಬಿಟಿಎಂ ಬಡಾವಣೆ, ಕುಮಾರಸ್ವಾಮಿ ಬಡಾವಣೆ, ಗೊಟ್ಟಿಗೆರೆ, ಬೊಮ್ಮನಹಳ್ಳಿ, ಕೋಣನಕುಂಟೆ, ಬಸವನಗುಡಿ, ಎಚ್‌ಎಎಲ್‌, ರಾಜರಾಜೇಶ್ವರಿ ನಗರ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಬೆನ್ನಿಗಾನಹಳ್ಳಿ,  ಬ್ಯಾಟರಾಯನಪುರ, ವಿ.ವಿ.ಪುರ, ಹಂಪಿನಗರ, ದೊಮ್ಮಲೂರು, ನಾಗರಬಾವಿ, ಹೊಯ್ಸಳ ನಗರ,  ಹೂಡಿ  ಪ್ರದೇಶ
ಗಳಲ್ಲಿ ಸಾಧಾರಣ ಮಳೆಯಾಗಿದೆ.

ಜುಲೈ: ಮಳೆ ಪ್ರಮಾಣ ಹೆಚ್ಚಳ
ಕಳೆದ ನಾಲ್ಕು ವರ್ಷಗಳಲ್ಲಿ ನಗರದಲ್ಲಿ ಸುರಿದ ಮಳೆಯನ್ನು ಪರಿಗಣಿಸಿದರೆ ಈ ವರ್ಷ ಮಳೆಯ ಪ್ರಮಾಣದಲ್ಲಿ ಭಾರಿ ಹೆಚ್ಚಳ ಉಂಟಾಗಿದೆ. ಕಳೆದ ವರ್ಷಕ್ಕೆ  (2015 ಜುಲೈ) ಹೋಲಿಸಿದರೆ, ಈ ಸಲ ದುಪ್ಪಟ್ಟು ಮಳೆಯಾಗಿದೆ.

ADVERTISEMENT

2015ರಲ್ಲಿ ಜುಲೈ ತಿಂಗಳಿನಲ್ಲಿ ನಗರದಲ್ಲಿ ಕೇವಲ 94.1 ಮಿ.ಮೀ ಮಳೆಯಾಗಿತ್ತು. ಈ ಬಾರಿ ಇದೇ 29ರವರೆಗೆ 197.3 ಮಿ.ಮೀ. ಮಳೆ ಸುರಿದಿದೆ. ಕಳೆದ ವರ್ಷ ಜುಲೈ   ಕೊನೆಯವಾರದಲ್ಲಿ ಮಳೆಯೇ  ಆಗಿರಲಿಲ್ಲ. 2014ರಲ್ಲಿ ಸ್ವಲ್ಪ ಮಟ್ಟಿನ ಮಳೆಯಾಗಿತ್ತು.
ಈ ಬಾರಿ ತಿಂಗಳ ಕೊನೇಯ ವಾರದಲ್ಲಿ ಪ್ರತಿದಿನವೂ ಮಳೆಯಾಗಿದೆ.
ಎಚ್‌ಎಎಲ್‌: 60 ವರ್ಷಗಳಲ್ಲೇ ದಾಖಲೆ

ಎಚ್‌ಎಎಲ್ ಪ್ರದೇಶದಲ್ಲಿ  ದಾಖಲೆ ಮಳೆ ಸುರಿದಿದೆ.  1979ರ ಜುಲೈ 22ರಂದು 67.5 ಮಿ.ಮೀ. ಮಳೆಯಾಗಿದ್ದು ಎಚ್‌ಎಎಲ್‌ನ ಈ ಹಿಂದಿನ ದಾಖಲೆಯಾಗಿತ್ತು. ಗುರುವಾರ ರಾತ್ರಿ ಇಲ್ಲಿ 70.6 ಮಿ.ಮೀ. ಮಳೆಯಾಗಿದೆ. ಹವಾಮಾನ ಇಲಾಖೆಯ 60 ವರ್ಷಗಳ ದಾಖಲೆ ಪ್ರಕಾರ ಇದು ಗರಿಷ್ಠ.

ಬೆಸ್ಕಾಂಗೆ ಒಂದೇ ದಿನ 15 ಸಾವಿರ ಕರೆ
ವಿದ್ಯುತ್‌ ಸಮಸ್ಯೆಗೆ ಸಂಬಂಧಿಸಿದಂತೆ ಬೆಸ್ಕಾಂ ಸಹಾಯವಾಣಿಗೆ ಗುರುವಾರ ಸಂಜೆಯಿಂದ ಶುಕ್ರವಾರ ಸಂಜೆ ತನಕ 15,450 ಕರೆಗಳು ಬಂದಿವೆ.

ಈ ಪೈಕಿ 7,600 ಮಂದಿ ದೂರು ದಾಖಲಿಸಿದ್ದಾರೆ. 4,800 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕಳೆದ 15–20 ದಿನಗಳಿಂದ ದಿನಕ್ಕೆ 10 ಸಾವಿರದಿಂದ 15 ಸಾವಿರದ ವರೆಗೆ   ಕರೆಗಳು ಬರುತ್ತಿವೆ. ಮಳೆಗಾಲದಲ್ಲಿ ದೂರುಗಳ ಪ್ರಮಾಣ ಹೆಚ್ಚು ಇರುತ್ತದೆ ಎಂದು ಹೇಳಿದರು.

ರಾಜಕಾಲುವೆ ಒತ್ತುವರಿ: ಅಸಹಾಯಕತೆ
ರಾಜಕಾಲುವೆಗಳ ಒತ್ತುವರಿಯಿಂದಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಒತ್ತುವರಿ ತೆರವು ಕಾರ್ಯಾಚರಣೆ ವಿರುದ್ಧ ಒತ್ತುವರಿದಾರರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ ರಾಜಕಾಲುವೆಗಳ ಸೂಕ್ತ ನಿರ್ವಹಣೆ ಸಾಧ್ಯವಾಗುತ್ತಿಲ್ಲ ಎಂದು ಮೇಯರ್‌ ಬಿ.ಎನ್‌. ಮಂಜುನಾಥ ರೆಡ್ಡಿ  ಅಸಹಾಯಕತೆ ವ್ಯಕ್ತಪಡಿಸಿದರು.

ಅನಾಹುತಕ್ಕೆ ಕಾರಣ ಏನು?
ಬೆಳ್ಳಂದೂರು ಕೆರೆ– ವರ್ತೂರು ಕೆರೆಯ ಜಲಾನಯನ ಪ್ರದೇಶದಲ್ಲಿ (0.7 ಹೆಕ್ಟೇರ್‌ನಿಂದ 95 ಹೆಕ್ಟೇರ್‌ ವರೆಗೆ) ವಿವಿಧ ಗಾತ್ರದ 49 ಕೆರೆಗಳಿವೆ. ಈ ಎಲ್ಲ ಕೆರೆಗಳು ಸರಣಿ ರೂಪದಲ್ಲಿದ್ದು, ನೈಸರ್ಗಿಕ ಮಳೆ ನೀರು ಕಾಲುವೆಗಳಿಂದ ಒಂದಕ್ಕೊಂದು ಸಂಪರ್ಕ ಹೊಂದಿವೆ. ಈ ಪೈಕಿ ಕೆಲವು ಕೆರೆಗಳು (ಮಡಿವಾಳ ಕೆರೆ, ಪುಟ್ಟೇನಹಳ್ಳಿ ಕೆರೆ, ಹಲಸೂರು ಕೆರೆ) ಮಾತ್ರ ವಿವಿಧ ಯೋಜನೆಗಳಡಿ ನವೀಕರಣಗೊಂಡಿವೆ.

ಆದರೆ, ತ್ಯಾಜ್ಯ ಸತತವಾಗಿ ಹರಿದು ಬರುತ್ತಿರುವ ಕಾರಣ ಕೆರೆಗಳ ಸೂಕ್ತ ನಿರ್ವಹಣೆ ಇಲ್ಲದೆ ಸಮಸ್ಯೆ ಸೃಷ್ಟಿಯಾಗುತ್ತಿದೆ. ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದ ಸ್ವರೂಪ ಬೆಂಗಳೂರಿನ ಇತರ ಕಣಿವೆಗಳು/ ಕೆರೆ ಸರಪಣಿಗಳಂತೆ ಏರಳಿತವಾಗಿರದೆ ಸಮತಟ್ಟಾಗಿದೆ. ಬಹುತೇಕ ಕೆರೆಗಳು ಕೊಳಚೆ ನೀರಿನ ಅಗರಗಳಾಗಿವೆ. ಸ್ವಲ್ಪ ಮಳೆ ಬಂದರೆ ಕೆರೆಗಳು ಉಕ್ಕಿ ಹರಿಯಲು ಆರಂಭಿಸುತ್ತವೆ.  ಇದರಿಂದ ಕೋಡಿ ಒಡೆಯುವುದು ಸೇರಿದಂತೆ ನಾನಾ ಬಗೆಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.