ADVERTISEMENT

‘ಅಕ್ಷರಸ್ಥರೇ ವ್ಯಸನಗಳಿಗೆ ಹೆಚ್ಚು ದಾಸರು’

​ಪ್ರಜಾವಾಣಿ ವಾರ್ತೆ
Published 28 ಜನವರಿ 2015, 19:54 IST
Last Updated 28 ಜನವರಿ 2015, 19:54 IST
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ವಿದ್ಯಾರ್ಥಿನಿಯರು ‘ನಶಾಮುಕ್ತ ಭಾರತ ಜಾಗೃತಿ ಅಭಿಯಾನ’ವನ್ನು ಬೆಂಬಲಿಸಿ ಸಹಿ ಹಾಕಿದರು
ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬುಧವಾರ ವಿದ್ಯಾರ್ಥಿನಿಯರು ‘ನಶಾಮುಕ್ತ ಭಾರತ ಜಾಗೃತಿ ಅಭಿಯಾನ’ವನ್ನು ಬೆಂಬಲಿಸಿ ಸಹಿ ಹಾಕಿದರು   

ಬೆಂಗಳೂರು: ‘ಮದ್ಯಪಾನ, ಧೂಮಪಾನ, ಮಾದಕವಸ್ತು ಸೇವನೆಯಂತಹ ವ್ಯಸನಗಳಿಗೆ ದಾಸರಾಗುವವರಲ್ಲಿ ಅಕ್ಷರಸ್ಥರೇ ಹೆಚ್ಚು’ ಎಂದು ಮಜುಂದಾರ್ ಷಾ ಕ್ಯಾನ್ಸರ್‌ ಆಸ್ಪತ್ರೆ ನಿರ್ದೇಶಕ ಡಾ.ಪಾಲ್‌.ಸಿ.ಸಾಲಿನ್ಸ್‌ ವಿಷಾದಿಸಿದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಮತ್ತು ತಾರುಣ್ಯ ಶಿಕ್ಷಣ ಸೇವಾ ಟ್ರಸ್ಟ್‌ ಜಂಟಿಯಾಗಿ ನಗರದಲ್ಲಿ ಬುಧವಾರ ಆಯೋಜಿಸಿದ್ದ ‘ನಶಾಮುಕ್ತ ಭಾರತ ಜಾಗೃತಿ ಅಭಿಯಾನ’ದಲ್ಲಿ ಅವರು ಮಾತನಾಡಿದರು.

‘ಕುಡಿತ, ಸಿಗರೇಟು, ಮಾದಕ ವಸ್ತುಗಳಿಂದ ಸಂತೋಷ ದೊರೆಯುತ್ತದೆ ಎನ್ನುವ ತಪ್ಪು ಕಲ್ಪನೆಗಳಿಂದ ಯುವ ಜನತೆ ವಿವಿಧ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.  ಜಗಿಯುವ ತಂಬಾಕು, ಬೀಡಿ, ಸಿಗರೇಟ್‌ಗಳ ಅತಿಯಾದ ಬಳಕೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ನಾಲಿಗೆ ಮತ್ತು ಶ್ವಾಸಕೋಶದ ಕ್ಯಾನ್ಸರ್‌, ಹೃದಯಾಘಾತದಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಮಾದಕ ವಸ್ತುಗಳ ದುಷ್ಪರಿಣಾಮ ಯುವ ಜನರಲ್ಲಿ ತಕ್ಷಣವೇ ಕಾಣಿಸಿಕೊಳ್ಳುವುದಿಲ್ಲ. ಅವು ದೀರ್ಘಕಾಲದಲ್ಲಿ ಪರಿಣಾಮ ಬೀರುತ್ತವೆ. ಇದರಿಂದ ವ್ಯಕ್ತಿ ತಾನು ವೈಯಕ್ತಿಕವಾಗಿ ತೊಂದರೆಗೆ ಒಳಗಾಗುವುದರ ಜತೆಗೆ ಅವನ ಕುಟುಂಬದ ನೆಮ್ಮದಿ ಕೂಡ ಹಾಳು ಮಾಡುತ್ತಾನೆ’ ಎಂದು ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕೆನರಾ ಬ್ಯಾಂಕ್‌ ಸ್ಕೂಲ್‌ ಆಫ್‌ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನ ನಿರ್ದೇಶಕ ಡಾ.ಎಂ.ಕೆ.ಶ್ರೀಧರ್‌ ಮಾತನಾಡಿ, ‘ಸಮಾಜದಲ್ಲಿ ವ್ಯಸನಮುಕ್ತ ವಾತಾವರಣ ನಿರ್ಮಿಸುವುದು ಇಂದಿನ ಅಗತ್ಯವಾಗಿದೆ. ಅದಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ತನ್ನ ನೆರೆಹೊರೆಯಲ್ಲಿ ಕಂಡುಬರುವ ದುಶ್ಚಟಗಳಿಗೆ ದಾಸರಾಗುವವರನ್ನು  ಅದರಿಂದ ಹೊರತರಲು ಶ್ರಮಿಸಬೇಕು’ ಎಂದರು.

ಶೇಷಾದ್ರಿಪುರ ಶಿಕ್ಷಣ ದತ್ತಿಸಂಸ್ಥೆ ಕಾರ್ಯದರ್ಶಿ ವೂಡೆ ಪಿ.ಕೃಷ್ಣ  ಮಾತನಾಡಿ, ‘ದೇಶದಲ್ಲಿ ಮದ್ಯಪಾನ ಮತ್ತು ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜನಾಭಿಪ್ರಾಯ ರೂಪಿಸಬೇಕಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದಂತ ವೈದ್ಯರಾದ ಡಾ.ಜಯಕರ್‌ ಶೆಟ್ಟಿ, ಡಾ.ಜಯಕೃಷ್ಣ, ಎಬಿವಿಪಿ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಎನ್‌.ರವಿಕುಮಾರ್‌, ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಶೆಟ್ಟಿ, ಮಹಾನಗರ ಘಟಕದ ಅಧ್ಯಕ್ಷ ಡಾ.ಶ್ಯಾಮ್‌ ಭಟ್‌, ಕಾರ್ಯದರ್ಶಿ ಹರ್ಷ ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.