ADVERTISEMENT

‘ಅಸಹಿಷ್ಣುತೆಗೆ ಪುರೋಹಿತ ವರ್ಗ ಕಾರಣ’

ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ರಾಜ್ಯ ಮಟ್ಟದ ಸಮಾವೇಶ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2015, 20:09 IST
Last Updated 26 ನವೆಂಬರ್ 2015, 20:09 IST

ಬೆಂಗಳೂರು: ‘ದೇಶದಲ್ಲಿ ಅಸಹಿಷ್ಣುತೆಯ ವಾತಾವರಣ ನಿರ್ಮಾಣವಾಗಲು ಪುರೋಹಿತ ವರ್ಗ ಕಾರಣ’ ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಟೀಕಿಸಿದರು.

ಕರ್ನಾಟಕ ದಲಿತ ಸಂಘರ್ಷ (ಭೀಮವಾದ) ಸಮಿತಿಯು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ  ‘ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೀಸಲಾತಿ, ರಾಜಕಾರಣ’ ಕುರಿತು ಗುರುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಬ್ರಾಹ್ಮಣ, ಲಿಂಗಾಯತ, ದಲಿತ ಸೇರಿದಂತೆ ಎಲ್ಲ  ಸಮುದಾಯಗಳಲ್ಲಿಯೂ ಪುರೋಹಿತಶಾಹಿಗಳಿದ್ದಾರೆ. ಅವರು ಕಾಣದ ಲೋಕದ ಕಮಿಷನ್‌ ಏಜೆಂಟ್‌ಗಳಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ದೇಶದಲ್ಲಿ ನೆಮ್ಮದಿಯಿಂದ ಉಸಿರಾಡಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಸಂಕಟದಿಂದಾಗಿ ಸಾಹಿತಿಗಳು ಪ್ರಶಸ್ತಿ, ಫಲಕ ಹಾಗೂ ಪುರಸ್ಕಾರಗಳನ್ನು ವಾಪಸ್‌ ನೀಡುತ್ತಿದ್ದಾರೆ. ಪ್ರಜ್ಞಾವಂತರು ಅವರ ಸಂಕಟ ಅರ್ಥ ಮಾಡಿಕೊಳ್ಳಬೇಕೇ ಹೊರತು ಅವರನ್ನು ಗೇಲಿ ಮಾಡಬಾರದು’ ಎಂದರು.

‘ಮಾತೆತ್ತಿದರೆ ದೇಶ ಬಿಟ್ಟು ಹೋಗಿ ಎಂದು ಕೆಲವರು ಹೇಳುತ್ತಿದ್ದಾರೆ. ಇದು ನಮ್ಮ ದೇಶ. ಇಲ್ಲೇ ಹುಟ್ಟಿದ್ದೇವೆ. ಇಲ್ಲೇ ಸಾಯುತ್ತೇವೆ. ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ಅಕಸ್ಮಾತ್‌ ಇಲ್ಲಿರುವ ಜನ ಇಲ್ಲೇ ಇರಬೇಕು. ಹೊರಗಿನವರು ಹೊರ ಹೋಗಬೇಕು ಎಂಬ ಮಾತು ಬಂದರೆ ಮೊದಲು ದೇಶ ಬಿಟ್ಟು ಹೋಗಬೇಕಾದವರು ಬ್ರಾಹ್ಮಣರು’ ಎಂದು ಹೇಳಿದರು.

ಆರ್ಯರು ದೇಶದ ಮೂಲ ನಿವಾಸಿಗಳಲ್ಲ. ದ್ರಾವಿಡರು ಮೂಲ ನಿವಾಸಿಗಳು. ಆದರೆ, ಯಾರೂ ದೇಶ ಬಿಟ್ಟು ಹೋಗುವುದು ಬೇಡ.  ಇಲ್ಲೇ ಎಲ್ಲರೂ ನೆಮ್ಮದಿಯಿಂದ ಬದುಕಬೇಕು. ಅಂತಹ ವಾತಾವರಣ ನಿರ್ಮಾಣ ಮಾಡಬೇಕು ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದ  ಸಂದರ್ಭದಲ್ಲಿ ನೆರೆ ಹೊರೆಯ ಕೆಲವು ರಾಷ್ಟ್ರಗಳಿಗೂ ಸ್ವಾತಂತ್ರ್ಯ ಸಿಕ್ಕಿತು. ಆದರೆ, ಆ ರಾಷ್ಟ್ರಗಳು ಸಾರ್ವಭೌಮ ರಾಷ್ಟ್ರಗಳಾಗಿ ಉಳಿದಿಲ್ಲ. ಧರ್ಮದ ದಬ್ಬಾಳಿಕೆ, ಮಿಲಿಟರಿ ಆಡಳಿತ ಆ ರಾಷ್ಟ್ರಗಳಲ್ಲಿದೆ. ನಮ್ಮ ದೇಶದಲ್ಲಿ ಇಂತಹ ಪರಿಸ್ಥಿತಿ ಇಲ್ಲ. ಇದಕ್ಕೆ ಕಾರಣ ನಮ್ಮ ದೇಶದ ಜನ ‘ಮತ’ ಎಂಬ ಅಸ್ತ್ರವನ್ನು ಪ್ರಜ್ಞಾಪೂರ್ವಕವಾಗಿ ಪ್ರಯೋಗಿಸುತ್ತಿದ್ದಾರೆ ಎಂದು ಹೇಳಿದರು.

ಇದಕ್ಕೆ ಉತ್ತಮ ಉದಾಹರಣೆ ಎಂದರೆ ಇತ್ತೀಚೆಗೆ ನಡೆದ ಬಿಹಾರ ಚುನಾವಣೆ. ಅಲ್ಲಿನ ಜನರು ಅನ್ಯಾಯವನ್ನು ಸಹಿಸಿಕೊಳ್ಳುವುದಿಲ್ಲ, ಸಂವಿಧಾನದ ಮೌಲ್ಯಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಅವರನ್ನು ಇಡೀ ದೇಶದ ಜನರು ಅಭಿನಂದಿಸಬೇಕು ಎಂದು ಹೇಳಿದರು.

‘ಅಮೀರ್‌ಖಾನ್ ಈ ದೇಶದ ಪ್ರಜೆ. ಅವರು ಯಾವುದೇ ಪಕ್ಷದ ವಕ್ತಾರರಲ್ಲ. ಸತ್ಯಮೇವ ಜಯತೆ ಕಾರ್ಯಕ್ರಮದ ಮೂಲಕ ದೇಶದ ಅಂತಃಸತ್ವ ಏನು ಎಂಬುವುದನ್ನು ಕಲಾತ್ಮಕವಾಗಿ ತೋರಿಸಿದ್ದಾರೆ. ಕೋಮುವಾದಿಗಳ ದಾಳಿ, ಅನೈತಿಕ ಪೊಲೀಸ್‌ಗಿರಿಯಿಂದಾಗಿ ನೊಂದು ಅವರ ಪತ್ನಿ ದೇಶದಿಂದಲೇ ಹೊರನಡೆಯಬೇಕಾಗಬಹುದು ಎಂದಿದ್ದಾರೆ. ಇದು ಅವರ ಸಂಕಟದ ಹೇಳಿಕೆ’ ಎಂದು ಹೇಳಿದರು.

ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಾತನಾಡಿ, ‘ಸಮಾಜದಲ್ಲಿ ಶಿಕ್ಷಣ ಪಡೆದವರೆಲ್ಲರೂ ಉನ್ನತ ಸ್ಥಾನದಲ್ಲಿದ್ದಾರೆ. ಶಿಕ್ಷಣ ಪಡೆಯದವರು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಬೇಕಾದ ಅಗತ್ಯ ಇದೆ’ ಎಂದರು.

ಅಹಿಂದ ಮುಖಂಡ ಕೆ.ಮುಕುಡಪ್ಪ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ಸಮುದಾಯಗಳಿಗೂ ಗೌರವದಿಂದ ಬದುಕುವ ಹಕ್ಕು ಕಲ್ಪಿಸಿದ್ದಾರೆ. ದುರ್ದೈವವೆಂದರೆ ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ’ ಎಂದು ಹೇಳಿದರು.
*
ಐದು ಸರ್ಕಾರಿ ರಜೆ ಸಾಕು:ಚಂಪಾ
‘ಕ್ಯಾಲೆಂಡರ್‌ನಲ್ಲಿ ಕೆಂಪು ಗುರುತಿನ ತಾರೀಖುಗಳೇ (ಸರ್ಕಾರಿ ರಜೆಗಳು) ಹೆಚ್ಚಾಗಿವೆ. ಅದರಲ್ಲಿ ಕೆಲವು, ರಾಜ್ಯಮಟ್ಟದ ಮತ್ತು ರಾಷ್ಟ್ರಮಟ್ಟದ ರಜೆಗಳಿವೆ. ಬೇರೆ ಬೇರೆ ಮಹಾಪುರುಷರ ಹೆಸರಿನಲ್ಲಿ, ಮಹಾತ್ಮರ ದಿನದ ಹೆಸರಿನಲ್ಲಿ ರಜೆ ನೀಡಿ ಕೆಲಸದ ದಿನಗಳನ್ನು ವ್ಯರ್ಥ ಮಾಡುತ್ತಿದ್ದೇವೆ’ ಎಂದು ಚಂದ್ರಶೇಖರ ಪಾಟೀಲ ಹೇಳಿದರು.

ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವದಂದು ಸರ್ಕಾರಿ ರಜಾ ದಿನ ಇರಬೇಕು. ಅದರ ಜತೆಗೆ ಅಂಬೇಡ್ಕರ್ ಅವರ ಜನ್ಮದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಆಚರಿಸಬೇಕು. ಉಳಿದಂತೆ ಬಸವ ಜಯಂತಿ, ಕನಕ ಜಯಂತಿ, ವಾಲ್ಮೀಕಿ ಜಯಂತಿಯಂದು ಆಯಾ ಸಮುದಾಯಕ್ಕೆ ಮಾತ್ರ ರಜೆ ನೀಡಬೇಕು. ಇದು ನನ್ನ ಅಭಿಪ್ರಾಯ. ಈ ಬಗ್ಗೆ ಸಾರ್ವಜನಿಕ ಚರ್ಚೆ ನಡೆಯಲಿ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT