ADVERTISEMENT

‘ಎಚ್ಚೆತ್ತುಕೊಳ್ಳದಿದ್ದರೆ ಹಿಂದೂಗಳಿಗೆ ಅಪಾಯ’

​ಪ್ರಜಾವಾಣಿ ವಾರ್ತೆ
Published 1 ಮೇ 2016, 19:31 IST
Last Updated 1 ಮೇ 2016, 19:31 IST
ಎಂ.ಚಿದಾನಂದಮೂರ್ತಿ ಅವರು ರಾಷ್ಟ್ರ ಜಾಗೃತ ಸಮಿತಿಯ ಅಧ್ಯಕ್ಷ ಎನ್.ಪಿ.ಅಮೃತೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಸುಪ್ರೀಂ ಕೋರ್ಟ್‌ನ ವಕೀಲ ಹರಿಪ್ರಸಾದ್ ಜೈನ್ ಚಿತ್ರದಲ್ಲಿದ್ದಾರೆ   –ಪ್ರಜಾವಾಣಿ ಚಿತ್ರ
ಎಂ.ಚಿದಾನಂದಮೂರ್ತಿ ಅವರು ರಾಷ್ಟ್ರ ಜಾಗೃತ ಸಮಿತಿಯ ಅಧ್ಯಕ್ಷ ಎನ್.ಪಿ.ಅಮೃತೇಶ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಸುಪ್ರೀಂ ಕೋರ್ಟ್‌ನ ವಕೀಲ ಹರಿಪ್ರಸಾದ್ ಜೈನ್ ಚಿತ್ರದಲ್ಲಿದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆಯಾಗುವ ಅಪಾಯ ಇದೆ’ ಎಂದು ಹಿರಿಯ ಸಂಶೋಧಕ ಡಾ.ಎಂ. ಚಿದಾನಂದಮೂರ್ತಿ ಹೇಳಿದರು.

ರಾಷ್ಟ್ರ ಜಾಗೃತ ಸಮಿತಿಯು ರಾಷ್ಟ್ರಜಾಗೃತಿ ಅಭಿಯಾನದ ಅಂಗವಾಗಿ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ‘ಹಿಂದೂಗಳನ್ನು ಬಲವಂತವಾಗಿ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ. ದೇಶದಲ್ಲಿ ಮುಸ್ಲಿಮರ ಕ್ರೌರ್ಯ ಹೆಚ್ಚುತ್ತಿದೆ’ ಎಂದು ಹೇಳಿದರು.

‘ಕಾಶ್ಮೀರ ಹಿಂದೂಗಳ ಕೇಂದ್ರವಾಗಬೇಕಿತ್ತು. ಆದರೆ, ಕಾಶ್ಮೀರದಿಂದ ಹಿಂದೂಗಳನ್ನು ಹೊರ ಹಾಕಲಾಗಿದೆ. ಅಲ್ಲಿನ ಹಿಂದೂಗಳು ಅತಂತ್ರವಾಗಿದ್ದಾರೆ’ ಎಂದರು.  ‘ದೇಶದಲ್ಲಿ ಮತಾಂತರ ನಿಷೇಧ ಕಾನೂನು ಜಾರಿಗೆ ತರಬೇಕು. ಭಾನುವಾರ ಕ್ರಿಶ್ಚಿಯನ್ನರಿಗೆ ಪವಿತ್ರ ದಿನ. ಹೀಗಾಗಿ ಬ್ರಿಟಿಷರು ಭಾನುವಾರ ರಜೆ ನೀಡಿದರು. ಇದನ್ನು ಬದಲಾಯಿಸಿ ಸೋಮವಾರ ರಜೆ ನೀಡಬೇಕು’ ಎಂದು ಒತ್ತಾಯಿಸಿದರು.

ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ‘ನಾನು ಹಿಂದೂಗಳನ್ನು ಸಂಘಟಿಸಲು ಕೆಲಸ ಮಾಡುತ್ತಿದ್ದೇನೆ. ಹಿಂದೂ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಆದರೆ, ಕಳೆದ ಎರಡು ತಿಂಗಳಲ್ಲಿ ಎಂಟು ಬಾರಿ ನನ್ನನ್ನು ಗಡಿ ಪಾರು ಮಾಡಲಾಗಿದೆ. ಪಾಕಿಸ್ತಾನಕ್ಕೆ ಗಡಿಪಾರು ಮಾಡಿದರೂ ನಾನು ಭಯಪಡುವುದಿಲ್ಲ. ಅಲ್ಲಿಯೂ ಶ್ರೀರಾಮಸೇನೆಯನ್ನು ಸಂಘಟಿಸುತ್ತೇನೆ’ ಎಂದರು.

‘20 ವರ್ಷಗಳಿಂದ ಕಾಶ್ಮೀರದ ಹಿಂದೂಗಳು ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ.  ನಗರದಲ್ಲಿಯೂ ಮುಸ್ಲಿಮರು ವಾಸವಾಗಿರುವ ಪ್ರದೇಶಗಳಲ್ಲಿ ಸುಲಭವಾಗಿ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿ ಇದೆ. ಕಾಶ್ಮೀರದಲ್ಲಿ ಆದ ಪರಿಸ್ಥಿತಿ ಇಲ್ಲಿ ಆಗುವ ಮುನ್ನ ನಾವೆಲ್ಲಾ ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದರು.
***

ಕೋಮುವಾದಿ ಎಂದು ಕರೆಯುತ್ತಾರೆ ಎಂಬ ಹಿಂಜರಿಕೆಯಿಂದ ಕೆಲವರು ಹಿಂದೂ ಎಂದು ಹೇಳಿಕೊಳ್ಳುವುದಿಲ್ಲ. ಆದರೆ, ನಾನು ಹಿಂದೂ ಎಂದು ಧೈರ್ಯದಿಂದ ಹೇಳುತ್ತೇನೆ
-ಡಾ.ಎಂ.ಚಿದಾನಂದಮೂರ್ತಿ,ಹಿರಿಯ ಸಂಶೋಧಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT