ADVERTISEMENT

‘ಡಿನೋಟಿಫಿಕೇಶನ್‌ ಕಡತ ನಾಪತ್ತೆ ಅವ್ಯವಹಾರ ಮುಚ್ಚಿಹಾಕಲು ಯತ್ನ’

​ಪ್ರಜಾವಾಣಿ ವಾರ್ತೆ
Published 24 ಜೂನ್ 2016, 20:37 IST
Last Updated 24 ಜೂನ್ 2016, 20:37 IST

ಬೆಂಗಳೂರು:‘ಅರ್ಕಾವತಿ ಬಡಾವಣೆ ಅಕ್ರಮ ಡಿನೋಟಿಫಿಕೇಶನ್‌ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ  (ಬಿಡಿಎ) ಆಯುಕ್ತರಾಗಿದ್ದ ಶ್ಯಾಂ ಭಟ್‌ ಅವರು ನಡೆಸಿರುವ ಅವ್ಯವಹಾರಗಳನ್ನು ಮುಚ್ಚಿ ಹಾಕುವ ಯತ್ನವಾಗಿ ಕಡತಗಳನ್ನು ಕಣ್ಮರೆ ಮಾಡಲಾಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಆರೋಪಿಸಿದರು.

‘ಅರ್ಕಾವತಿ ಬಡಾವಣೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ತೀರ್ಪು ಉಲ್ಲಂಘಿಸಿ ಸಿದ್ದರಾಮಯ್ಯ 544 ಎಕರೆ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದಾರೆ. ಕಡತ ಕಣ್ಮರೆ ಮಾಡುವ ಮೂಲಕ ಈ ಪ್ರಕರಣ ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ’ ಎಂದು ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಅರ್ಕಾವತಿ ಬಡಾವಣೆ ಅಕ್ರಮಕ್ಕೆ ಸಂಬಂಧಿಸಿದ ವಿಷಯಗಳು ಒಂದೊಂದಾಗಿ ಬಹಿರಂಗವಾಗುತ್ತವೆ  ಎಂಬ ಕಾರಣಕ್ಕೆ ಬಿಡಿಎನಲ್ಲಿ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದೆ. ಯಾವ ಕಡತಗಳು ಕಣ್ಮರೆ ಆಗಿವೆ ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಮಹತ್ವದ ಕಡತಗಳು ಎಂಬುದಷ್ಟೇ ತಿಳಿದಿದೆ. ಈ ಎಲ್ಲ ಕಡತಗಳ ನಕಲು ಪ್ರತಿಯನ್ನು ಈಗಾಗಲೇ ನ್ಯಾಯಮೂರ್ತಿ ಎಚ್‌.ಎಸ್‌. ಕೆಂಪಣ್ಣ ಆಯೋಗದ ಮುಂದೆ ಸಲ್ಲಿಸಲಾಗಿದೆ. ಆಯೋಗದ ಮೇಲೆ ಸಂಪೂರ್ಣ ವಿಶ್ವಾಸ ಇದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಬದಲಾಗಲಿ: ‘ಸಚಿವ ಸಂಪುಟ ಪುನರ್‌ರಚನೆ ನಂತರ ಕಾಂಗ್ರೆಸ್‌ನ ಶಾಸಕರು, ಸಚಿವರು ಬೆಂಗಳೂರು–ದೆಹಲಿಗೆ ಓಡಾಡುತ್ತಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ. ಕೇವಲ ಸಚಿವರನ್ನು ಬದಲಾಯಿಸಿದರೆ ಸಾಲದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನೇ ಬದಲಾವಣೆ ಮಾಡಬೇಕು’ ಎಂದು ಹೇಳಿದರು.

ಪಕ್ಷದೊಳಗೆ ಚರ್ಚೆ: ಬಿಜೆಪಿ ಜಿಲ್ಲಾ ಅಧ್ಯಕ್ಷರ ನೇಮಕ ವಿಚಾರದಲ್ಲಿ ಯಡಿಯೂರಪ್ಪ ಅವರು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವುದರ ಬಗ್ಗೆ ಪಕ್ಷದಲ್ಲಿ ಅಸಮಾಧಾನ ಇದೆಯಲ್ಲಾ? ಎಂಬ ಪ್ರಶ್ನೆಗೆ, ‘ಏನೇ ಅಸಮಾಧಾನ ಇದ್ದರೂ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸುತ್ತೇವೆ. ಈ ನಿಯಮವನ್ನು ನಾನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ’ ಎಂದರು.

ಬಿಬಿಎಂಪಿಯಲ್ಲಿ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳದಂತೆ ಯಡಿಯೂರಪ್ಪ ಸೂಚಿಸಿದ್ದಾರಂತೆ? ಎಂಬುದಕ್ಕೆ, ‘ಬಿಬಿಎಂಪಿ ಮೇಯರ್‌ ಚುನಾವಣೆಗೆ ಮೈತ್ರಿಗೆ ಸಂಬಂಧಿಸಿದಂತೆ ಆರ್‌. ಅಶೋಕ್‌ ಮತ್ತು ಬೆಂಗಳೂರಿನ ಶಾಸಕರು ನಿರ್ಧಾರ ಮಾಡುತ್ತಾರೆ. ಮೇಯರ್ ಸ್ಥಾನದ ಚುನಾವಣೆಗೆ ದಿನಾಂಕ ನಿಗದಿಯಾಗಿಲ್ಲ ಎಂದ ಮೇಲೆ ಆ ಬಗ್ಗೆ ಈಗಲೇ ಚರ್ಚಿಸುವುದು ಅಪ್ರಸ್ತುತ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.