ADVERTISEMENT

‘ತಾಲ್ಲೂಕು, ಹೋಬಳಿ ಆಸ್ಪತ್ರೆಗಳಿಗೆ ಮೊಬೈಲ್‌ ಇಸಿಜಿ ಉಪಕರಣ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:49 IST
Last Updated 1 ಜುಲೈ 2016, 19:49 IST
ಥಾಮಸ್‌ ಅಲೆಕ್ಸಾಂಡರ್‌ ಅವರು ಡಾ.ಸಿ.ಎನ್‌. ಮಂಜುನಾಥ್‌ ಅವರಿಗೆ ಹಸ್ತಲಾಘವ ನೀಡಿದರು. ಮಣಿಪಾಲ್‌ ಆಸ್ಪತ್ರೆ ಹೃದಯ ವಿಭಾಗದ ಮುಖ್ಯಸ್ಥ ಡಾ.ಎಸ್‌.ಎಸ್‌. ಐಯ್ಯಂಗಾರ್‌, ವಿಕ್ರಂ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಪಿ.ರಂಗನಾಥ್‌ ನಾಯಕ್‌, ಮದ್ರಾಸ್‌ ಮೆಡಿಕಲ್‌ ಮಿಷನ್‌ನ ನಿರ್ದೇಶಕ ಡಾ.ಅಜಿತ್‌ ಎಸ್‌. ಮುಲ್ಲಸರಿ ಇದ್ದಾರೆ
ಥಾಮಸ್‌ ಅಲೆಕ್ಸಾಂಡರ್‌ ಅವರು ಡಾ.ಸಿ.ಎನ್‌. ಮಂಜುನಾಥ್‌ ಅವರಿಗೆ ಹಸ್ತಲಾಘವ ನೀಡಿದರು. ಮಣಿಪಾಲ್‌ ಆಸ್ಪತ್ರೆ ಹೃದಯ ವಿಭಾಗದ ಮುಖ್ಯಸ್ಥ ಡಾ.ಎಸ್‌.ಎಸ್‌. ಐಯ್ಯಂಗಾರ್‌, ವಿಕ್ರಂ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಪಿ.ರಂಗನಾಥ್‌ ನಾಯಕ್‌, ಮದ್ರಾಸ್‌ ಮೆಡಿಕಲ್‌ ಮಿಷನ್‌ನ ನಿರ್ದೇಶಕ ಡಾ.ಅಜಿತ್‌ ಎಸ್‌. ಮುಲ್ಲಸರಿ ಇದ್ದಾರೆ   

ಬೆಂಗಳೂರು:‘ಹೃದಯಾಘಾತವಾದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲು ತಾಲ್ಲೂಕು ಆಸ್ಪತ್ರೆ ಹಾಗೂ ಹೋಬಳಿ ಮಟ್ಟದ ಆಸ್ಪತ್ರೆಗಳಿಗೆ ಮೊಬೈಲ್‌ ಇಸಿಜಿ ಉಪಕರಣಗಳನ್ನು ನೀಡುತ್ತೇವೆ’ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆರಂಭಿಕವಾಗಿ ಬೆಂಗಳೂರು, ಮೈಸೂರು, ಕಲಬುರ್ಗಿ ವಲಯದ ತಲಾ 30–35 ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಒಟ್ಟು 75 ಲಕ್ಷ ಮೌಲ್ಯದ ಮೊಬೈಲ್‌ ಇಸಿಜಿ ಉಪಕರಣಗಳನ್ನು ನೀಡುವ ಉದ್ದೇಶವಿದೆ. ಇಸಿಜಿ ಪರೀಕ್ಷೆ ನಡೆಸಿ ಹೃದಯಾಘಾತ ಆಗಿರುವುದನ್ನು ಖಾತ್ರಿ ಮಾಡಿಕೊಳ್ಳಬಹುದು’ ಎಂದರು.

‘ಜಯದೇವ ಹೃದ್ರೋಗ ಆಸ್ಪತ್ರೆ, ನಾರಾಯಣ ಹೃದಯಾಲಯ, ಬೌರಿಂಗ್, ವಿಕ್ಟೋರಿಯಾ ಆಸ್ಪತ್ರೆಯ ನೆಫ್ರೋ–ಯುರಾಲಜಿ, ಸೇಂಟ್‌ ಜಾನ್ಸ್‌ ಸೇರಿದಂತೆ 9 ಆಸ್ಪತ್ರೆಗಳು ಟೆಲಿಮೆಡಿಸಿನ್‌ ನೀಡುತ್ತಿವೆ. ಈ ಆಸ್ಪತ್ರೆಗಳ ತಜ್ಞ ವೈದ್ಯರು ತಾಲ್ಲೂಕು, ಹೋಬಳಿ ಮಟ್ಟದ ಆಸ್ಪತ್ರೆಗಳ ಜತೆ ನಿಗದಿ ಸಮಯಕ್ಕೆ ಸರಿಯಾಗಿ ಸಂಪರ್ಕ ಸಾಧಿಸಿ ರೋಗಿಗೆ ಅಗತ್ಯ ಚಿಕಿತ್ಸೆ ನೀಡಲಿದ್ದಾರೆ’ ಎಂದು ಹೇಳಿದರು.

‘ಹೃದಯಾಘಾತಕ್ಕೆ ಒಳಗಾದವರಿಗೆ ಚಿಕಿತ್ಸೆ ನೀಡಲು ತಾಲ್ಲೂಕು, ಹೋಬಳಿ ಮಟ್ಟದ ಆಸ್ಪತ್ರೆಗಳಲ್ಲಿ ಸೂಕ್ತ ವ್ಯವಸ್ಥೆ ಇಲ್ಲ. ಇಸಿಜಿ ಉಪಕರಣಗಳಿದ್ದರೂ, ಕಾಯಿಲೆಯನ್ನು ಕಂಡು ಹಿಡಿಯುವ ತಜ್ಞರು ಇರುವುದಿಲ್ಲ. ಅಲ್ಲದೆ, ವೈದ್ಯರು ಹೃದಯಾಘಾತಕ್ಕೆ ಚಿಕಿತ್ಸೆ ನೀಡಲು ಹೆದರುತ್ತಾರೆ. ಅವರಲ್ಲಿ ಈ ಬಗ್ಗೆ ಆತ್ಮವಿಶ್ವಾಸ ಮೂಡಿಸಬೇಕು. ಹೃದಯಾಘಾತಕ್ಕೆ ಒಳಗಾದವರಿಗೆ ಹೃದಯ ತಜ್ಞರೇ ಚಿಕಿತ್ಸೆ ನೀಡಬೇಕೆಂದಿಲ್ಲ.  ತಿಳಿವಳಿಕೆ ಇರುವ ಸಾಮಾನ್ಯ ವೈದ್ಯರೂ ಚಿಕಿತ್ಸೆ ನೀಡಬಹುದು. ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಯನ್ನು ಮಾತ್ರ ಹೃದ್ರೋಗ ತಜ್ಞರೇ ಮಾಡಬೇಕು’ ಎಂದರು.

‘ಭಾರತದಲ್ಲಿ ಮೃತಪಡುವವರ ಪೈಕಿ ಶೇ 25ರಷ್ಟು ಮಂದಿ ಹೃದಯಾಘಾತ ದಿಂದ ಸಾಯುತ್ತಾರೆ. ಈ ಪೈಕಿ 40 ವರ್ಷದ ಒಳಗಿನವರು ಶೇ 20ರಷ್ಟು ಇದ್ದಾರೆ. ಜೀವನ ಶೈಲಿ ಹಾಗೂ ಆಹಾರ ಶೈಲಿ ಬದಲಾವಣೆ ಹೃದಯಾಘಾತಕ್ಕೆ ಮುಖ್ಯ ಕಾರಣ’ ಎಂದು ಹೇಳಿದರು.
ಸ್ಟೆಮಿ ಇಂಡಿಯಾ ಸಂಸ್ಥೆಯ ನಿರ್ದೇಶಕ ಥಾಮಸ್‌ ಅಲೆಕ್ಸಾಂಡರ್‌, ‘ಹೃದಯಾಘಾತಕ್ಕೆ ಒಳಗಾದವರಿಗೆ ಆದಷ್ಟು ಬೇಗ ಚಿಕಿತ್ಸೆ ನೀಡುವ ವಿಧಾನಗಳ ಕುರಿತು ಶನಿವಾರ ಆಯೋಜಿಸಿರುವ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೆ, ವಿವಿಧ ಆಸ್ಪತ್ರೆಗಳ ವೈದ್ಯರು, ನರ್ಸ್‌ ಹಾಗೂ ತಾಂತ್ರಿಕ ಸಿಬ್ಬಂದಿಗೆ ತರಬೇತಿ ನೀಡುತ್ತೇವೆ’ ಎಂದರು.

‘ಹೃದಯಾಘಾತಕ್ಕೆ ಚಿಕಿತ್ಸೆ ನೀಡುತ್ತಿರುವ ದಕ್ಷಿಣ ಭಾರತದ 750ಕ್ಕೂ ಹೆಚ್ಚಿನ ಪ್ರತಿನಿಧಿಗಳು ಹಾಗೂ ವಿದೇಶದ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ’ ಎಂದರು. ಸ್ಟೆಮಿ ಇಂಡಿಯಾ ನಿರ್ದೇಶಕ ಡಾ.ಅಜಿತ್‌ ಮುಲ್ಲಸರಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.